ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ! ಕಾರಣವೇನು ಗೊತ್ತಾ?

|

Updated on: Aug 31, 2023 | 11:13 AM

Sachin Tendulkar: ಸಚಿನ್ ತೆಂಡೂಲ್ಕರ್ ಆನ್‌ಲೈನ್ ಗೇಮಿಂಗ್ ಆ್ಯಪ್​ಗಳ ಬಗ್ಗೆಗಿನ ಜಾಹೀರಾತಿನಲ್ಲಿ ನಟಿಸಿದ್ದಾರೆ. ಸಚಿನ್ ಅವರ ನಿರ್ಧಾರದಿಂದ ಅಸಮಾಧಾನಗೊಂಡಿರುವ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು, ಸಚಿನ್ ನಟಿಸಿರುವ ಜಾಹೀರಾತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಸಚಿನ್ ತೆಂಡೂಲ್ಕರ್ ಮನೆಯ ಮುಂದೆ ಶಾಸಕರಿಂದ ಪ್ರತಿಭಟನೆ! ಕಾರಣವೇನು ಗೊತ್ತಾ?
ಸಚಿನ್ ತೆಂಡೂಲ್ಕರ್
Follow us on

ಮುಂಬೈನ ಬಾಂದ್ರಾದಲ್ಲಿರುವ ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ದೇವರು ಖ್ಯಾತಿಯ ಭಾರತ ರತ್ನ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆಯ ಹೊರಗೆ ಪಕ್ಷೇತರ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರಿಂದ ಪ್ರತಿಭಟನೆ ನಡೆಸಲಾಗಿದೆ. ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಆನ್‌ಲೈನ್ ಗೇಮಿಂಗ್ ಆ್ಯಪ್​ಗಳ (oOnline Gaming) ಬಗ್ಗೆಗಿನ ಜಾಹೀರಾತಿನಲ್ಲಿ ನಟಿಸಿದ್ದಾರೆ. ಸಚಿನ್ ಅವರ ನಿರ್ಧಾರದಿಂದ ಅಸಮಾಧಾನಗೊಂಡಿರುವ ಶಾಸಕ ಬಚ್ಚು ಕಡು ಮತ್ತು ಅವರ ಬೆಂಬಲಿಗರು, ಸಚಿನ್ ನಟಿಸಿರುವ ಜಾಹೀರಾತು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಶಾಸಕ ಬಚ್ಚು ಕಡು (Bachchu Kadu) ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದು, ಸ್ಥಳದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಶಾಸಕರ ಆರೋಪದಲ್ಲಿರುವುದೇನು?

ಭಾರತ ರತ್ನ ಮತ್ತು ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆನ್‌ಲೈನ್ ಆಟಗಳನ್ನು ಪ್ರಚಾರ ಮಾಡಿರುವುದು ಶಾಸಕ ಬಚ್ಚು ಕಡು ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಬಚ್ಚು ಕಡು, ‘ಯಾವುದನ್ನು ಜಾಹೀರಾತು ಮಾಡಬೇಕು ಮತ್ತು ಯಾವುದನ್ನು ನೀಡಬಾರದು ಎಂಬುದಕ್ಕೆ ಭಾರತ ರತ್ನ ನೀತಿ ಸಂಹಿತೆ ಹೊಂದಿದೆ. ಹಾಗಾಗಿ ಈಗ ಲಾಯರ್ ಮೂಲಕ ತೆಂಡೂಲ್ಕರ್​ಗೆ ನೋಟಿಸ್ ಕಳುಹಿಸುದ್ದೇನೆ. ಸಚಿನ್ ಒಬ್ಬ ಆದರ್ಶ ವ್ಯಕ್ತಿ. ಕೆಲವರಿಗೆ ಅವರು ಕ್ರಿಕೆಟ್ ದೇವರಂತೆ ಬಿಂಬಿತವಾಗಿದ್ದಾರೆ. ಅಲ್ಲದೆ ಸಚಿನ್ ಅವರಿಗೆ ಲಕ್ಷ್ಯಾಂತರ ಫಾಲೋವರ್ಸ್ ಕೂಡ ಇದ್ದಾರೆ. ಹಾಗಾಗಿ ಸಚಿನ್ ಏನಾದರೂ ತಪ್ಪು ಮಾಡಿದ್ದರೆ ಅದು ಯುವ ಪೀಳಿಗೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಬಚ್ಚು ಕಡು ಆರೋಪಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಸಚಿನ್​ಗೆ ಲೀಗಲ್ ನೋಟಿಸ್

ವಾಸ್ತವವಾಗಿ ಸಚಿನ್ ತೆಂಡೂಲ್ಕರ್ ಗಾಸಿಪ್​ಗಳಿಂದ ಹಾಗೂ ಸಮಾಜ ಸ್ವಾಸ್ಥ್ಯವನ್ನು ಕದಡುವ ಕೆಲಸಗಳಿಂದ ಸಾಕಷ್ಟು ಅಂತರ ಕಾಪಾಡಿಕೊಳ್ಳುತ್ತಾರೆ. ಹೀಗಾಗಿ ಸಚಿನ್ ಇದುವರೆಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡವರಲ್ಲ. ಆದರೆ ಇದೀಗ ಸಚಿನ್ ವಿರುದ್ಧ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಆರೋಪ ಕೇಳಿಬಂದಿದೆ.

ಶಾಸಕ ಬಚ್ಚು ಕಡು ತಮ್ಮ ವಕೀಲರ ಮೂಲಕ ಸಚಿನ್ ತೆಂಡೂಲ್ಕರ್ ಅವರಿಗೆ ನೋಟಿಸ್ ಕಳುಹಿಸಲಿದ್ದರು. ಆದರೆ ಇದಕ್ಕೆ ಸಚಿನ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಬಚ್ಚು ಕಡು ಅವರೇ ನೇರವಾಗಿ ನೋಟಿಸ್ ಕಳುಹಿಸಲು ನಿರ್ಧರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಚಿನ್​ಗೆ ಲೀಗಲ್ ನೋಟಿಸ್ ಕಳುಹಿಸಲಾಗುವುದು ಎಂದು ಬಚ್ಚು ಕಡು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Thu, 31 August 23