MLC 2024: ಅದ್ಭುತ… ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್

|

Updated on: Jul 27, 2024 | 12:59 PM

MLC 2024: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಅಂತಿಮಘಟ್ಟಕ್ಕೆ ಬಂದು ನಿಂತಿದೆ. ಚಾಲೆಂಜರ್ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ 10 ರನ್​ಗಳ ಜಯ ಸಾಧಿಸಿ ಸ್ಯಾನ್​ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಫೈನಲ್​ಗೆ ಪ್ರವೇಶಿಸಿದೆ. ಅದರಂತೆ ಫೈನಲ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ಹಾಗೂ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಚಾಲೆಂಜರ್​ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದು ಕೋರಿ ಅ್ಯಂಡರ್ಸನ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಈ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಮತ್ತು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಟೆಕ್ಸಾಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಫಿನ್ ಅಲೆನ್ (101) ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್​ಗಳಲ್ಲಿ 200 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡುಪ್ಲೆಸಿಸ್ 21 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 45 ರನ್ ಚಚ್ಚಿದ್ದರು. ಆದರೆ ಕಾರ್ಮಿ ಲೆ ರೌಕ್ಸ್ ಎಸೆದ ಐದನೇ ಓವರ್​ನ 2ನೇ ಎಸೆತದಲ್ಲಿ ಮಿಡ್ ಆಫ್​ನತ್ತ ಚಿಪ್ ಮಾಡಿ ಫೋರ್​ಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು.

ಈ ವೇಳೆ ಚೆಂಡು ಗಾಳಿಯಲ್ಲಿ ಚಿಮ್ಕಿತು. ಅಲ್ಲದೆ ಫೀಲ್ಡಿಂಗ್​ನಲ್ಲಿದ್ದ ಕೋರಿ ಅ್ಯಂಡರ್ಸನ್ ಅದ್ಭುತವಾಗಿ ಜಿಗಿಯುವ ಮೂಲಕ ಎಡಗೈಯಲ್ಲಿ ಚೆಂಡನ್ನು ಹಿಡಿದರು. ಈ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ನೀಡಿದ 201 ರನ್​ಗಳ ಗುರಿಯನ್ನು ಬೆನ್ನತ್ತಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 190 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡವು 10 ರನ್​ಗಳ ಜಯ ಸಾಧಿಸಿತು.

 

 

Published on: Jul 27, 2024 12:59 PM