
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ತಂಡವು ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್. ಆದರೆ ಈ ಬಾರಿ ಬೌಲ್ಟ್ ಪಂದ್ಯ ಗೆಲ್ಲಿಸಿದ್ದು ಬೌಲಿಂಗ್ನಿಂದಲ್ಲ. ಬದಲಾಗಿ ಬ್ಯಾಟಿಂಗ್ನಿಂದ ಎಂಬುದು ವಿಶೇಷ. ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ಹಾಗೂ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಎಂಐ ನ್ಯೂಯಾರ್ಕ್ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಮ್ಯಾಥ್ಯೂ ಶಾರ್ಟ್ ಕೇವಲ 6 ರನ್ಗಳಿಸಿ ಔಟಾಗಿದ್ದರು. ಇನ್ನು ಟಿಮ್ ಸೈಫರ್ಟ್ ಇನಿಂಗ್ಸ್ 1 ರನ್ಗೆ ಸೀಮಿತವಾಯಿತು. ಆ ಬಳಿಕ ಬಂದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಕಲೆಹಾಕಿದ್ದು ಕೇವಲ 4 ರನ್ಗಳು ಮಾತ್ರ.
ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೂಪರ್ ಕೊನೊಲಿ 23 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ಕ್ಸೇವಿಯರ್ ಬಾರ್ಟ್ಲೆಟ್ ಕೇವಲ 24 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ನೊಂದಿಗೆ 44 ರನ್ ಚಚ್ಚಿದರು. ಬಾರ್ಟ್ಲೆಟ್ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡವು 19.1 ಓವರ್ಗಳಲ್ಲಿ 131 ರನ್ ಕಲೆಹಾಕಿತು.
ಎಂಐ ನ್ಯೂಯಾರ್ಕ್ ಪರ ಟ್ರೆಂಟ್ ಬೌಲ್ಟ್ 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಪಡೆದರೆ, ರಶಿಲ್ ಉರ್ಗಕರ್ 3.1 ಓವರ್ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.
120 ಎಸೆತಗಳಲ್ಲಿ 132 ರನ್ಗಳ ಸುಲಭ ಗುರಿ ಪಡೆದ ಎಂಐ ನ್ಯೂಯಾರ್ಕ್ ತಂಡಕ್ಕೆ ಕ್ವಿಂಟನ್ ಡಿಕಾಕ್ (33) ಹಾಗೂ ಮೊನಾಂಕ್ ಪಟೇಲ್ (33) ಉತ್ತಮ ಆರಂಭ ಒದಗಿಸಿದ್ದರು. ಆದರೆ ಇವರಿಬ್ಬರ ನಿರ್ಗಮನದ ಬಳಿಕ ಎಂಐ ನ್ಯೂಯಾರ್ಕ್ ದಿಢೀರ್ ಕುಸಿತಕ್ಕೊಳಗಾಯಿತು. ನಾಯಕ ನಿಕೋಲಸ್ ಪೂರನ್ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಬ್ರೇಸ್‌ವೆಲ್ 18 ರನ್ಗಳಿಸಿ ಔಟಾದರು. ಇನ್ನು ಕೀರನ್ ಪೊಲಾರ್ಡ್ 1 ರನ್ಗಳಿಸಿ ವಿಕೆಟ್ ಕೈಚೆಲ್ಲಿದರು.ಇದರ ಬೆನ್ನಲ್ಲೇ ತೇಜಿಂದರ್ ದಿಲ್ಲಾನ್ (4) ಕೂಡ ವಿಕೆಟ್ ಒಪ್ಪಿಸಿದರು.
ಪರಿಣಾಮ 108 ರನ್ಗಳಿಸುವಷ್ಟರಲ್ಲಿ ಎಂಐ ನ್ಯೂಯಾರ್ಕ್ ತಂಡದ 8 ವಿಕೆಟ್ ಪತನಗೊಂಡಿದೆ. ಇನ್ನುಳಿದ ಮೂರು ಓವರ್ಗಳಲ್ಲಿ ಗೆಲ್ಲಲು 24 ರನ್ಗಳ ಅವಶ್ಯಕತೆಯಿತ್ತು. ಅತ್ತ ಸ್ಯಾನ್ ಫ್ರಾನಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ 2 ವಿಕೆಟ್ಗಳ ಅವಶ್ಯಕತೆ. ಈ ಹಂತದಲ್ಲಿ ಕಣಕ್ಕಿಳಿದ ಟ್ರೆಂಟ್ ಬೌಲ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
18 ಎಸೆತಗಳಲ್ಲಿ 24 ರನ್ಗಳು ಬೇಕಿದ್ದ ವೇಳೆ ಕ್ರೀಸ್ಗೆ ಆಗಮಿಸಿದ ಬೌಲ್ಟ್ 2 ಭರ್ಜರಿ ಸಿಕ್ಸ್ ಸಿಡಿಸಿದರು. ಅಲ್ಲದೆ 13 ಎಸೆತಗಳಲ್ಲಿ ಅಜೇಯ 22 ರನ್ ಕಲೆಹಾಕಿದರು. ಈ ಮೂಲಕ 19.3 ಓವರ್ಗಳಲ್ಲಿ ಎಂಐ ನ್ಯೂಯಾರ್ಕ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಟ್ರೆಂಟ್ ಬೌಲ್ಟ್ ಯಶಸ್ವಿಯಾದರು.
ಈ ಗೆಲುವಿನೊಂದಿಗೆ ಎಂಐ ನ್ಯೂಯಾರ್ಕ್ ತಂಡವು ದ್ವಿತೀಯ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಅತ್ತ ಸೋತಿರುವ ಸ್ಯಾಣ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಟೂರ್ನಿಯಿಂದ ಹೊರಬಿದ್ದಿದೆ.
ಅದರಂತೆ ಜುಲೈ 11 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ಹಾಗೂ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿದ್ದು, ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
Yo! Come look at this… 🤩⚡#OneFamily #MINewYork #MLC #SFUvMINY pic.twitter.com/LWzud0ewhK
— MI New York (@MINYCricket) July 10, 2025
ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ (ನಾಯಕ) , ಟಿಮ್ ಸೈಫರ್ಟ್ (ವಿಕೆಟ್ ಕೀಪರ್) , ಜೇಕ್ ಫ್ರೇಸರ್-ಮೆಕ್‌ಗುರ್ಕ್ , ಸಂಜಯ್ ಕೃಷ್ಣಮೂರ್ತಿ , ಹಸನ್ ಖಾನ್ , ಕೂಪರ್ ಕೊನೊಲಿ , ಹಮ್ಮದ್ ಅಜಮ್ , ಕ್ಸೇವಿಯರ್ ಬಾರ್ಟ್ಲೆಟ್ , ಬ್ರಾಡಿ ಕೌಚ್ , ಬೆನ್ ಲಿಸ್ಟರ್ , ಲಿಯಾಮ್ ಪ್ಲಂಕೆಟ್.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಆಡಲು ವೈಭವ್ ಸೂರ್ಯವಂಶಿ ಅನರ್ಹ..!
ಎಂಐ ನ್ಯೂಯಾರ್ಕ್ ಪ್ಲೇಯಿಂಗ್ 11: ಮೊನಾಂಕ್ ಪಟೇಲ್ , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ನಿಕೋಲಸ್ ಪೂರನ್ (ನಾಯಕ) , ತಜಿಂದರ್ ಧಿಲ್ಲೋನ್ , ಮೈಕೆಲ್ ಬ್ರೇಸ್‌ವೆಲ್ , ಕೀರನ್ ಪೊಲಾರ್ಡ್ , ಹೀತ್ ರಿಚರ್ಡ್ಸ್ , ಟ್ರಿಸ್ಟಾನ್ ಲೂಸ್ , ನೋಸ್ತಷ್ ಕೆಂಜಿಗೆ , ರಶಿಲ್ ಉಗಾರ್ಕರ್ , ಟ್ರೆಂಟ್ ಬೌಲ್ಟ್.