ಐಪಿಎಲ್ನಲ್ಲಿ ವಿಫಲ… ಕ್ರಿಕೆಟ್ನಿಂದ ದೂರ ಸರಿದ ರಶೀದ್ ಖಾನ್
IPL 2025 Rashid Khan: ರಶೀದ್ ಖಾನ್ ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ 15 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದ ಅವರು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದೀಗ ಕಳಪೆ ಫಾರ್ಮ್ ಕಾರಣ ಕ್ರಿಕೆಟ್ನಿಂದ ಕೆಲ ಕಾಲ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಟಿ20 ಕ್ರಿಕೆಟ್ನ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಅಪ್ಘಾನಿಸ್ತಾನದ ರಶೀದ್ ಖಾನ್ ಬಿಗ್ ಬ್ರೇಕ್ ತೆಗೆದುಕೊಂಡಿದ್ದಾರೆ. ಅದು ಕೂಡ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಿಂದ ಹೊರಗುಳಿಯುವ ಮೂಲಕ. ಅಂದರೆ ಈ ಬಾರಿ ಎಂಎಲ್ಸಿ ಲೀಗ್ನಲ್ಲಿ ರಶೀದ್ ಖಾನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಎಂಐ ನ್ಯೂಯಾರ್ಕ್ ತಂಡದ ಪರ ಕಣಕ್ಕಿಳಿಯಬೇಕಿತ್ತು. ಆದರೆ ಇದೀಗ ವಿಶ್ರಾಂತಿಯ ಕಾರಣ ಅವರು ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ 2024 ರಲ್ಲಿ ಎಂಐ ನ್ಯೂಯಾರ್ಕ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ರಶೀದ್ ಖಾನ್. ಕಳೆದ ವರ್ಷ 6.15 ರ ಎಕಾನಮಿ ರೇಟ್ನಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಈ ಬಾರಿ ವಿರಾಮದ ಸಲುವಾಗಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ ಎಂದು ರಶೀದ್ ಖಾನ್ ಎಂಐ ನ್ಯೂಯಾರ್ಕ್ ಫ್ರಾಂಚೈಸಿಗೆ ತಿಳಿಸಿದೆ.
ಸದ್ಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದಿರುವ ರಶೀದ್ ಖಾನ್, ಎಷ್ಟು ಸಮಯದವರೆಗೆ ವಿರಾಮ ತೆಗೆದುಕೊಂಡಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಸುದೀರ್ಘ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು ಅವರು ಈ ವಿರಾಮ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಅವರು ನಿರ್ಧರಿಸಿದ್ದಾರೆ.
ಐಪಿಎಲ್ನಲ್ಲಿ ಅಟ್ಟರ್ ಫ್ಲಾಪ್:
ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ರಶೀದ್ ಖಾನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಅದರಲ್ಲೂ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೀಸನ್ವೊಂದರಲ್ಲಿ ಅವರು 9 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿ 33 ಸಿಕ್ಸರ್ಗಳನ್ನು ಸಹ ಹೊಡೆಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಹೊಡೆಸಿಕೊಂಡ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಸಹ ರಶೀದ್ ಖಾನ್ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ 15 ಪಂದ್ಯಗಳನ್ನಾಡಿದ ರಶೀದ್ ಖಾನ್ ಒಟ್ಟು 330 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಬರೋಬ್ಬರಿ 514 ರನ್ಗಳು. ಅಂದರೆ ಪ್ರತಿ ಓವರ್ಗೆ 9.34ರ ಸರಾಸರಿಯಲ್ಲಿ ರನ್ ನೀಡಿರುವ ಅವರು ಪಡೆದಿರುವುದು ಕೇವಲ 9 ವಿಕೆಟ್ಗಳು ಮಾತ್ರ.
ಇದನ್ನೂ ಓದಿ: 48 ಗಂಟೆಗಳ ಮುಂಚೆ ಆಯ್ಕೆ… ಮಯಾಂಕ್ ಅಗರ್ವಾಲ್ ಕೈ ಹಿಡಿಯಲಿದೆಯಾ RCB
ಈ ಕಳಪೆ ಫಾರ್ಮ್ ಕಾರಣದಿಂದಲೇ ಇದೀಗ ಕ್ರಿಕೆಟ್ನಿಂದ ಕೆಲ ಕಾಲ ದೂರ ಸರಿಯಲು ರಶೀದ್ ಖಾನ್ ನಿರ್ಧರಿಸಿದ್ದಾರೆ. ಹೀಗಾಗಿ ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ ಪರ ಮಾಂತ್ರಿಕ ಲೆಗ್ ಸ್ಪಿನ್ನರ್ ಕಾಣಿಸಿಕೊಳ್ಳುವುದಿಲ್ಲ.
