48 ಗಂಟೆಗಳ ಮುಂಚೆ ಆಯ್ಕೆ… ಮಯಾಂಕ್ ಅಗರ್ವಾಲ್ ಕೈ ಹಿಡಿಯಲಿದೆಯಾ RCB
Mayank Agarwal: ಈ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ಪರ ಕೇವಲ 4 ಪಂದ್ಯಗಳನ್ನಾಡಿರುವ ಮಯಾಂಕ್ ಅಗರ್ವಾಲ್ ಒಟ್ಟು 95 ರನ್ ಕಲೆಹಾಕಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಯಾಂಕ್ ಅಗರ್ವಾಲ್ ತನ್ನದೇಯಾದ ಕೊಡುಗೆಯನ್ನು ನೀಡಿದ್ದಾರೆ.
Updated on:Jun 12, 2025 | 8:57 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಬದಲಿ ಆಟಗಾರರಾಗಿ ಎಂಟ್ರಿ ಕೊಟ್ಟ ಪ್ಲೇಯರ್ಸ್ಗಳಲ್ಲಿ ಮಯಾಂಕ್ ಅಗರ್ವಾಲ್ (Mayank Agarwal) ಕೂಡ ಒಬ್ಬರು. ಈ ಬಾರಿಯ ಐಪಿಎಲ್ನ ದ್ವಿತೀಯಾರ್ಧದ ಪಂದ್ಯದ ವೇಳೆ ಆರ್ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಗಾಯಗೊಂಡ ಪರಿಣಾಮ ಮಯಾಂಕ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿದ್ದರು.

ಈ ಆಯ್ಕೆಯೊಂದಿಗೆ ಮಯಾಂಕ್ ಅಗರ್ವಾಲ್ ಅವರು ಚಾಂಪಿಯನ್ ತಂಡದ ಭಾಗವಾಗಿದ್ದರು. ಅದರಲ್ಲೂ ಕೊನೆಯ 4 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಕನ್ನಡಿಗ ಆರ್ಸಿಬಿ ತಂಡ ಟ್ರೋಫಿ ಗೆಲ್ಲುವಲ್ಲಿ ತನ್ನದೇಯಾದ ಕೊಡುಗೆಯನ್ನು ಸಹ ನೀಡಿದ್ದರು. ಇದಾಗ್ಯೂ ಮಯಾಂಕ್ ಅವರನ್ನು ಆರ್ಸಿಬಿ ಮುಂದಿನ ಸೀಸನ್ಗೆ ಉಳಿಸಿಕೊಳ್ಳಲಿದೆಯಾ ಎಂಬುದೇ ಪ್ರಶ್ನೆ.

ಏಕೆಂದರೆ ಐಪಿಎಲ್ ನಿಯಮದ ಪ್ರಕಾರ, ಕೊನೆಯ ಪಂದ್ಯಗಳ ವೇಳೆ ಅಂದರೆ ಐಪಿಎಲ್ ಸ್ಥಗಿತಗೊಂಡು ಮರು ಆಯೋಜನೆಗೊಂಡಾಗ ಬದಲಿ ಆಟಗಾರರಾಗಿ ತಂಡಕ್ಕೆ ಸೇರ್ಪಡೆಗೊಂಡವರನ್ನು ಮುಂದಿನ ಸೀಸನ್ಗೆ ರಿಟೈನ್ ಮಾಡಿಕೊಳ್ಳುವಂತಿಲ್ಲ. ಇತ್ತ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದು, ಐಪಿಎಲ್ ಸ್ಥಗಿತಗೊಳ್ಳುವ 48 ಗಂಟೆಗಳ ಮುಂಚೆ.

ಅಂದರೆ ಭಾರತ-ಪಾಕಿಸ್ತಾನ್ ನಡುವಣ ಯುದ್ಧದ ಭೀತಿ ಹಿನ್ನಲೆಯಲ್ಲಿ ಐಪಿಎಲ್ ಸ್ಥಗಿತಗೊಳ್ಳುವ 2 ದಿನಗಳ ಮೊದಲೇ ಮಯಾಂಕ್ ಅಗರ್ವಾಲ್ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದರು. ಹೀಗಾಗಿ ಅವರನ್ನು ರಿಟೈನ್ ಮಾಡಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅವಕಾಶವಿದೆ. ಅದರಂತೆ ಐಪಿಎಲ್ 2026 ರಲ್ಲೂ ಕನ್ನಡಿಗ ಆರ್ಸಿಬಿ ತಂಡದಲ್ಲೇ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಇದಾಗ್ಯೂ ಆರ್ಸಿಬಿ ತಂಡವು ಮುಂದಿನ ಸೀಸನ್ಗಾಗಿ ಟಿಮ್ ಸೈಫರ್ಟ್ ಹಾಗೂ ಬ್ಲೆಸಿಂಗ್ ಮುಝರಬಾನಿಯನ್ನು ಉಳಿಸಿಕೊಳ್ಳುವಂತಿಲ್ಲ. ಏಕೆಂದರೆ ಈ ಇಬ್ಬರು ಆಟಗಾರರು ಐಪಿಎಲ್ನ ಕೊನೆಯ ಹಂತದಲ್ಲಿ ಬದಲಿ ಆಟಗಾರರಾಗಿ ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದರು. ಹೀಗಾಗಿ ಬದಲಿ ಆಟಗಾರರಾಗಿ ಆರ್ಸಿಬಿ ತಂಡಕ್ಕೆ ಆಯ್ಕೆಯಾದ ಮೂವರಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶವಿದೆ. ಈ ಅವಕಾಶವನ್ನು ಆರ್ಸಿಬಿ ಬಳಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
Published On - 8:54 am, Thu, 12 June 25
