WTC 2025 final: ಮೂರನೇ ಸ್ಥಾನ ಪಡೆದ ಟೀಂ ಇಂಡಿಯಾಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?
WTC 2025 final: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಿಂದ ಸೋತಿತು. ಈ ಸೋಲಿನಿಂದಾಗಿ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ವರದಿಯ ಪ್ರಕಾರ, ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ರೂ. 12.33 ಕೋಟಿ ಬಹುಮಾನ ಸಿಗಲಿದೆ ಎಂದು ವರದಿಯಾಗಿದೆ.
Updated on: Jun 11, 2025 | 10:55 PM

2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 212 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ ಆಸೀಸ್ ಪರ ಸ್ಟೀವ್ ಸ್ಮಿತ್ 66 ರನ್ಗಳ ಇನ್ನಿಂಗ್ಸ್ ಆಡಿದರೆ, ಬ್ಯೂ ವೆಬ್‌ಸ್ಟರ್ 72 ರನ್ಗಳ ಕಾಣಿಕೆ ನೀಡಿದರು.

ಇತ್ತ ದಕ್ಷಿಣ ಆಫ್ರಿಕಾ ಪರ ಮಾರಕ ದಾಳಿ ನಡೆಸಿದ ಕಗಿಸೊ ರಬಾಡ 5 ವಿಕೆಟ್ ಪಡೆದರು. ಈ ಮೂಲಕ ರಬಾಡ ದಕ್ಷಿಣ ಆಫ್ರಿಕಾ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದುವರೆಗೆ 332 ವಿಕೆಟ್‌ಗಳನ್ನು ಪಡೆದಿರುವ ರಬಾಡ ಈ ವಿಷಯದಲ್ಲಿ 330 ವಿಕೆಟ್‌ಗಳನ್ನು ಪಡೆದಿದ್ದ ಅಲನ್ ಡೊನಾಲ್ಡ್‌ರನ್ನು ಹಿಂದಿಕ್ಕಿದ್ದಾರೆ.

ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಕೂಡ ಆರಂಭಿಕ ಆಘಾತ ಎದುರಿಸಿದೆ. ಆದಾಗ್ಯೂ ತಂಡಕ್ಕೆ ಪುಟಿದೇಳುವ ಸಾಮರ್ಥ್ಯವಿದೆ. ಇತ್ತ ಆಸ್ಟ್ರೇಲಿಯಾ ಕೂಡ ಆಫ್ರಿಕಾವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕಲು ನೋಡುತ್ತಿದೆ. ಇದೆಲ್ಲದರ ನಡುವೆ ಡಬ್ಲ್ಯುಟಿಸಿ ಫೈನಲ್ಗೇರದ ಭಾರತಕ್ಕೆ ಸಿಗುವ ಬಹುಮಾನ ಎಷ್ಟು ಎಂಬುದು ಕುತೂಹಲ ಕೆರಳಿಸಿದೆ.

ವಾಸ್ತವವಾಗಿ ಈ ಬಾರಿಯೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಟೀಂ ಇಂಡಿಯಾಕ್ಕೆ ಉತ್ತಮ ಅವಕಾಶವಿತ್ತು. ಆದರೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಹಾಗೂ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ ಫೈನಲ್ನಿಂದ ವಂಚಿತವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಲಷ್ಟೇ ಶಕ್ತವಾಯಿತು.

ವಾಸ್ತವವಾಗಿ ಈ ಬಾರಿ ಡಬ್ಲ್ಯುಟಿಸಿ ಬಹುಮಾನದ ಮೊತ್ತದಲ್ಲಿ ಐಸಿಸಿ ಸಾಕಷ್ಟು ಹೆಚ್ಚಳ ಮಾಡಿದೆ. ಆ ಪ್ರಕಾರ ಡಬ್ಲ್ಯುಟಿಸಿ ಫೈನಲ್‌ನ ಮೂರನೇ ಆವೃತ್ತಿಯಾಗಿದ್ದು, ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಒಟ್ಟು 3.6 ಮಿಲಿಯನ್ ಡಾಲರ್ ಬಹುಮಾನ ದೊರೆಯಲಿದೆ. ಅಂದರೆ, ವಿಜೇತ ತಂಡಕ್ಕೆ ಸುಮಾರು 30.88 ಕೋಟಿ ರೂ. ಬಹುಮಾನ ಸಿಗಲಿದೆ. ಈ ಬಹುಮಾನದ ಹಣವು ಕಳೆದ ಎರಡು ಆವೃತ್ತಿಗಳಾದ 2021 ಮತ್ತು 2023 ಗಿಂತ ಹೆಚ್ಚಾಗಿದೆ.

ಕಳೆದ ಎರಡು ಆವೃತ್ತಿಗಳಲ್ಲಿ ಒಟ್ಟು ಬಹುಮಾನದ ಹಣ 1.6 ಮಿಲಿಯನ್ ಡಾಲರ್ ಆಗಿತ್ತು. ಇನ್ನು ಫೈನಲ್‌ನಲ್ಲಿ ಸೋತ ತಂಡಕ್ಕೆ 2.16 ಮಿಲಿಯನ್ ಡಾಲರ್ ಅಂದರೆ ಸುಮಾರು 18.50 ಕೋಟಿ ರೂ. ಸಿಗಲಿದೆ. ಟೆಸ್ಟ್ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಐಸಿಸಿ ಬಹುಮಾನದ ಗಾತ್ರವನ್ನು ಹೆಚ್ಚಿಸಿದೆ. ಅಂದರೆ ಈ ಬಹುಮಾನದ ಮೊತ್ತ ಐಪಿಎಲ್ ಬಹುಮಾನದ ಗಾತ್ರಕ್ಕೂ ಹೆಚ್ಚಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಿಂದ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಡಬ್ಲ್ಯುಟಿಸಿ ಫೈನಲ್ ರೇಸ್ನಿಂದ ಟೀಂ ಇಂಡಿಯಾ ಹೊರಗುಳಿದಿತು. ಈ ಬಾರಿ ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ರೂ. 12.33 ಕೋಟಿ ಬಹುಮಾನ ಸಿಗಲಿದೆ ಎಂದು ವರದಿಯಾಗಿದೆ.









