Asia Cup 2022: ಅಫ್ರಿದಿ ಬದಲಿಗೆ ಅನುಮಾನಾಸ್ಪದ ಯುವ ಬೌಲರ್​ನ ಆಯ್ಕೆ ಮಾಡಿದ ಪಾಕಿಸ್ತಾನ್

Mohammad Hasnain: ಮೊಹಮ್ಮದ್ ಹಸ್ನೈನ್ ಈ ಹಿಂದೆಯೇ ಪಾಕ್ ಪರ ಪದಾರ್ಪಣೆ ಮಾಡಿದ್ದರೂ ಹೆಚ್ಚು ಸುದ್ದಿಯಾಗಿದ್ದು ಬೌಲಿಂಗ್ ಶೈಲಿಯಿಂದ ಎಂಬುದು ವಿಶೇಷ.

Asia Cup 2022: ಅಫ್ರಿದಿ ಬದಲಿಗೆ ಅನುಮಾನಾಸ್ಪದ ಯುವ ಬೌಲರ್​ನ ಆಯ್ಕೆ ಮಾಡಿದ ಪಾಕಿಸ್ತಾನ್
Mohammad Hasnain- Shaheen Afridi
Updated By: ಝಾಹಿರ್ ಯೂಸುಫ್

Updated on: Aug 22, 2022 | 1:55 PM

ಏಷ್ಯಾಕಪ್​ಗಾಗಿ (Asia Cup 2022) ಪಾಕಿಸ್ತಾನ ತಂಡದಲ್ಲಿ ಶಾಹೀನ್ ಶಾ ಆಫ್ರಿದಿ (Shaheen Shah Afridi) ಬದಲಿಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಗಾಯಗೊಂಡು ಹೊರಗುಳಿದಿರುವ ಅಫ್ರಿದಿ ಸ್ಥಾನದಲ್ಲಿ ಯುವ ವೇಗಿ ಮೊಹಮ್ಮದ್ ಹಸ್ನೈನ್ (Mohammad Hasnain) ಅವರನ್ನು ಆಯ್ಕೆ ಮಾಡಲಾಗಿದೆ. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅಫ್ರಿದಿ ಈ ಹಿಂದೆ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದರು. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿಗೆ ಬದಲಿ ವೇಗದ ಬೌಲರ್​ನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯಯಿತ್ತು.

ಇದೀಗ 22ರ ಹರೆಯ ಹಸ್ನೈನ್​ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಈ ಹಿಂದೆ ಪಾಕ್ ಪರ 18 ಟಿ20 ಪಂದ್ಯಗಳನ್ನಾಡಿರುವ ಮೊಹಮ್ಮದ್ ಹಸ್ನೈನ್ ಒಟ್ಟು 17 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್‌ನಲ್ಲಿ ಆಡುತ್ತಿರುವ ಯುವ ವೇಗಿ ಅಲ್ಲಿಂದಲೇ ಏಷ್ಯಾ ಕಪ್‌ಗಾಗಿ ಯುಎಇಗೆ ತೆರಳಲಿದ್ದಾರೆ.

ಅನುಮಾನಾಸ್ಪದ ಬೌಲರ್:

ಮೊಹಮ್ಮದ್ ಹಸ್ನೈನ್ ಈ ಹಿಂದೆಯೇ ಪಾಕ್ ಪರ ಪದಾರ್ಪಣೆ ಮಾಡಿದ್ದರೂ ಹೆಚ್ಚು ಸುದ್ದಿಯಾಗಿದ್ದು ಬೌಲಿಂಗ್ ಶೈಲಿಯಿಂದ ಎಂಬುದು ವಿಶೇಷ. ಅಂದರೆ ಅನುಮಾನಸ್ಪದ ಬೌಲಿಂಗ್ ಶೈಲಿಯ ಕಾರಣ ಈ ಹಿಂದೆ ಹಸ್ನೈನ್​ ಅವರನ್ನು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್​ನಿಂದ ಬ್ಯಾನ್ ಮಾಡಲಾಗಿತ್ತು. ಇದಾದ ಬಳಿಕ ಐಸಿಸಿ ಬೌಲಿಂಗ್ ಟೆಸ್ಟ್​ಗೆ ಒಳಗಾಗಿದ್ದ ಯುವ ವೇಗಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಮೈದಾನಕ್ಕೆ ಮರಳಿದ್ದರು. ಅಲ್ಲದೆ ದಿ ಹಂಡ್ರೆಡ್ ಲೀಗ್​ನಲ್ಲಿ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದರು.

ದಿ ಹಂಡ್ರೆಡ್ ಲೀಗ್​ನಲ್ಲಿ ಓವಲ್ ಇನ್ವಿನ್ಸಿಬಲ್ಸ್‌ ಪರ ಆಡುತ್ತಿರುವ ಹಸ್ನೈನ್ ಬೌಲಿಂಗ್ ಶೈಲಿ​ ಬಗ್ಗೆ ಮಾರ್ಕಸ್ ಸ್ಟೋಯಿನಿಸ್ ಮೈದಾನದಲ್ಲೇ ಸಂಶಯ ವ್ಯಕ್ತಪಡಿಸಿದ ಘಟನೆ ಕೆಲ ದಿನಗಳ ಹಿಂದೆಯಷ್ಟೇ ನಡೆದಿತ್ತು. ಹಸ್ನೈನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದಿದ್ದ ಸ್ಟೋಯಿನಿಸ್ ಬೌಲಿಂಗ್ ಥ್ರೋ ಮಾಡ್ತಿದ್ದಾನೆ ಎಂದು ಸನ್ನೆ ಮಾಡುವ ಮೂಲಕ ಮೈದಾನದಿಂದ ಹೊರನಡೆದಿದ್ದರು. ಒಂದೆಡೆ ಯುವ ವೇಗಿಯ ಬೌಲಿಂಗ್ ಶೈಲಿ ಚರ್ಚೆಯಾಗುತ್ತಿದ್ದರೆ, ಪಾಕ್ ಕ್ರಿಕೆಟ್ ಮಂಡಳಿ ಅದೇ ಬೌಲರ್​ನನ್ನೇ ಏಷ್ಯಾಕಪ್​ಗೆ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಏಷ್ಯಾಕಪ್​ಗಾಗಿ ಪಾಕಿಸ್ತಾನ್ ತಂಡ ಹೀಗಿದೆ:

ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್