KCL 2024: 9 ಭರ್ಜರಿ ಸಿಕ್ಸ್​ಗಳೊಂದಿಗೆ ಅಬ್ಬರಿಸಿದ ಅಝರ್

|

Updated on: Sep 03, 2024 | 1:36 PM

Mohammed Azharuddeen: ಮೊಹಮ್ಮದ್ ಅಝರುದ್ದೀನ್ ಆರ್​ಸಿಬಿ ತಂಡದ ಮಾಜಿ ಆಟಗಾರ. 2021 ಆರ್​ಸಿಬಿ ಬಳಗದಲ್ಲಿ ಕಾಣಿಸಿಕೊಂಡಿದ್ದ ಯುವ ವಿಕೆಟ್ ಕೀಪರ್​ಗೆ ಒಂದೇ ಒಂದು ಪಂದ್ಯದಲ್ಲೂ ಚಾನ್ಸ್ ನೀಡಿರಲಿಲ್ಲ. ಇದೀಗ ಕೇರಳ ಕ್ರಿಕೆಟ್ ಲೀಗ್ ಮೂಲಕ ಮೊಹಮ್ಮದ್ ಅಝರುದ್ದೀನ್ ಅಬ್ಬರಿಸಲಾರಂಭಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ಗೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.

KCL 2024: 9 ಭರ್ಜರಿ ಸಿಕ್ಸ್​ಗಳೊಂದಿಗೆ ಅಬ್ಬರಿಸಿದ ಅಝರ್
Mohammed Azharuddeen- MSD
Follow us on

ಕೇರಳ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲೇ ಯುವ ದಾಂಡಿಗ ಮೊಹಮ್ಮದ್ ಅಝರುದ್ದೀನ್ ಅಬ್ಬರಿಸಿದ್ದಾರೆ. ಅದು ಸಹ 9 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಎಂಬುದು ವಿಶೇಷ. ತಿರುವನಂತಪುರದ ಗ್ರೀನ್​ಫೀಲ್ಡ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಲೆಪ್ಪಿ ರಿಪ್ಪಲ್ಸ್ ಹಾಗೂ ತ್ರಿಶೂರ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಅಲೆಪ್ಪಿ ರಿಪ್ಪಲ್ಸ್ ತಂಡದ ನಾಯಕ ಮೊಹಮ್ಮದ್ ಅಝರುದ್ದೀನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ತ್ರಿಶೂರ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅಭಿಷೇಕ್ (0) ಶೂನ್ಯಕ್ಕೆ ಔಟಾದರೆ, ವರುಣ್ ನಾಯನಾರ್ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕ್ಷಯ್ ಮನೋಹರ್ 44 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 1 ಫೋರ್​​ನೊಂದಿಗೆ 57 ರನ್​ ಬಾರಿಸಿದರು. ಇನ್ನು ಅರ್ಜುನ್ ವೇಣುಗೋಪಾಲ್ 20 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ತ್ರಿಶೂರ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು.

ಅಝರ್ ಅಬ್ಬರ- ಸಿಡಿಲಬ್ಬರ:

162 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಅಲೆಪ್ಪಿ ರಿಪ್ಪಲ್ಸ್ ಪರ ಮೊಹಮ್ಮದ್ ಅಝರುದ್ದೀನ್ ಹಾಗೂ ಕೃಷ್ಣ ಪ್ರಸಾದ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ 1 ರನ್​ಗಳಿಸಿ ಕೃಷ್ಣ ಪ್ರಸಾದ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಅಕ್ಷಯ್ ಶಿವ್ (3) ಕೂಡ ವಿಕೆಟ್ ಕೈಚೆಲ್ಲಿದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಅಝರುದ್ದೀನ್ ನಾಯಕನಾಟ ಪ್ರದರ್ಶಿಸಿದರು. ತನ್ನ ಸ್ಪೋಟಕ ಬ್ಯಾಟಿಂಗ್​ನಿಂದಲೇ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಅಝರ್ ಸಿಕ್ಸ್-ಫೋರ್​ಗಳ ಸುರಿಮಳೆಗೈದರು.

ಅಲ್ಲದೆ ಕೇವಲ 47 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 92 ರನ್​ ಚಚ್ಚಿದರು. ಆದರೆ ಶತಕದಂಚಿನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತರು. ಅಷ್ಟರಲ್ಲಾಗಲೇ ಅಲೆಪ್ಪಿ ರಿಪ್ಪಲ್ಸ್ ತಂಡವು 15 ಓವರ್​ಗಳಲ್ಲಿ 139 ರನ್​ ಕಲೆಹಾಕಿತು. ಅಂತಿಮವಾಗಿ 18.3 ಓವರ್​ಗಳಲ್ಲಿ 163 ರನ್​ಗಳ ಗುರಿ ಮುಟ್ಟುವ ಮೂಲಕ ಅಲೆಪ್ಪಿ ರಿಪ್ಪಲ್ಸ್ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಆರ್​ಸಿಬಿ ತಂಡದ ಮಾಜಿ ಆಟಗಾರ:

ವಿಶೇಷ ಎಂದರೆ ಮೊಹಮ್ಮದ್ ಅಝರುದ್ದೀನ್ ಈ ಹಿಂದೆ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರು. 2021 ಆರ್​ಸಿಬಿ ಬಳಗದಲ್ಲಿ ಕಾಣಿಸಿಕೊಂಡಿದ್ದ ಯುವ ವಿಕೆಟ್ ಕೀಪರ್​ಗೆ ಒಂದೇ ಒಂದು ಪಂದ್ಯದಲ್ಲೂ ಚಾನ್ಸ್ ನೀಡಿರಲಿಲ್ಲ. ಇದೀಗ ಕೇರಳ ಕ್ರಿಕೆಟ್ ಲೀಗ್ ಮೂಲಕ ಮೊಹಮ್ಮದ್ ಅಝರುದ್ದೀನ್ ಅಬ್ಬರಿಸಲಾರಂಭಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ಗೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.