Anil Kumble: ಬರೋಬ್ಬರಿ 10 ವಿಕೆಟ್ಸ್​: ಅನಿಲ್​ ಕುಂಬ್ಳೆಯ ಐತಿಹಾಸಿಕ ಸಾಧನೆಗೆ 25 ವರ್ಷಗಳು

Anil Kumble: ಟೀಮ್ ಇಂಡಿಯಾದ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್​ನಲ್ಲಿ 10 ವಿಕೆಟ್​ ಕಬಳಿಸಿ ಇಂದಿಗೆ 25 ವರ್ಷಗಳಾಗಿವೆ. ಈ ಐತಿಹಾಸಿಕ ಸಾಧನೆಯೊಂದಿಗೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದ ಕುಂಬ್ಳೆ ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆಯನ್ನೂ ಕೂಡ ಹೊಂದಿದ್ದಾರೆ.

Anil Kumble: ಬರೋಬ್ಬರಿ 10 ವಿಕೆಟ್ಸ್​: ಅನಿಲ್​ ಕುಂಬ್ಳೆಯ ಐತಿಹಾಸಿಕ ಸಾಧನೆಗೆ 25 ವರ್ಷಗಳು
Anil Kumble
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 07, 2024 | 11:11 AM

ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್​ನಲ್ಲಿ 10 ವಿಕೆಟ್ ಉರುಳಿಸಿದ್ದು ಕೇವಲ ಮೂವರು ಬೌಲರ್​ಗಳು. ಅವರಲ್ಲಿ ಮೊದಲಿಗರು ಜಿಮ್ಮಿ ಲೇಕರ್ (Jimmy Laker). 1956 ರಲ್ಲಿ ಇಂಗ್ಲೆಂಡ್ ಬೌಲರ್ ಲೇಕರ್ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ 53 ರನ್​ ನೀಡಿ 10 ವಿಕೆಟ್ ಉರುಳಿಸಿ ವಿಶ್ವ ದಾಖಲೆ ಬರೆದಿದ್ದರು. ಆ ಬಳಿಕ ಈ ದಾಖಲೆಯನ್ನು ಸರಿಗಟ್ಟಿದ್ದು ಕನ್ನಡಿಗ ಅನಿಲ್ ಕುಂಬ್ಳೆ (Anil Kumble). 1999 ರಲ್ಲಿ 74 ರನ್ ನೀಡಿ 10 ವಿಕೆಟ್ ಉರುಳಿಸುವ ಮೂಲಕ ಕುಂಬ್ಳೆ ವಿಶೇಷ ಸಾಧನೆ ಮಾಡಿದ್ದರು.

ಪಾಕ್ ವಿರುದ್ಧ ಕನ್ನಡಿಗನ ಪರಾಕ್ರಮ:

1999 ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಡಗೋಪನ್ ರಮೇಶ್ (60) ಹಾಗೂ ಮೊಹಮ್ಮದ್ ಅಝರುದ್ದೀನ್ (67) ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 252 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡವು ಅನಿಲ್ ಕುಂಬ್ಳೆ ಹಾಗೂ ಹರ್ಭಜನ್ ಸಿಂಗ್ ಅವರ ಸ್ಪಿನ್ ಮೋಡಿಗೆ ತಿಣುಕಾಡಿದರು. ಪರಿಣಾಮ ಪಾಕ್ ತಂಡ ಕೇವಲ 172 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಂಬ್ಳೆ 4 ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ 3 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಆರಂಭಿಕ ಸಡಗೋಪನ್ ರಮೇಶ್ 96 ರನ್ ಬಾರಿಸಿದರೆ, ಸೌರವ್ ಗಂಗೂಲಿ ಅಜೇಯ 62 ರನ್ ಸಿಡಿಸಿದರು. ಈ ಮೂಲಕ ಭಾರತ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 339 ರನ್​ ಕಲೆಹಾಕಿತು.

ಮೊದಲ ಇನಿಂಗ್ಸ್​ನ 80 ರನ್​ಗಳ ಹಿನ್ನಡೆಯೊಂದಿಗೆ ಪಾಕಿಸ್ತಾನ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 420 ರನ್​ಗಳ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಪಾಕ್ ತಂಡಕ್ಕೆ ಸಯೀದ್ ಅನ್ವರ್ (69) ಹಾಗೂ ಶಾಹಿದ್ ಅಫ್ರಿದಿ (41) ಉತ್ತಮ ಆರಂಭ ಒದಗಿಸಿದ್ದರು.

ಆದರೆ 25ನೇ ಓವರ್​ನ 2ನೇ ಮತ್ತು 3ನೇ ಎಸೆತಗಳಲ್ಲಿ ಅಫ್ರಿದಿ ಹಾಗೂ ಇಜಾಝ್ ಅಹ್ಮದ್ (0) ರನ್ನು ಔಟ್ ಮಾಡುವಲ್ಲಿ ಕುಂಬ್ಳೆ ಯಶಸ್ವಿಯಾದರು. ಇದಾದ ಬಳಿಕ ಕುಂಬ್ಳೆ ಹಿಂತಿರುಗಿ ನೋಡಲಿಲ್ಲ ಎನ್ನಬಹುದು.

ಇದನ್ನೂ ಓದಿ: VPL 2024: ಹೊಸ ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಸಿಡಿಲಬ್ಬರದ ಸಿಡಿಲಮರಿ ಸೆಹ್ವಾಗ್

ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಾ ಸಾಗಿದ ಅನಿಲ್ ಕುಂಬ್ಳೆ ಪಾಕ್ ತಂಡವನ್ನು 207 ರನ್​ಗಳಿಗೆ ಆಲೌಟ್ ಮಾಡಿದರು. ಈ ಪಂದ್ಯದಲ್ಲಿ 26.3 ಎಸೆತಗಳನ್ನು ಎಸೆದ ಕುಂಬ್ಳೆ 74 ರನ್ ನೀಡಿ 10 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದರು. ಅನಿಲ್ ಕುಂಬ್ಳೆ ಈ ಐತಿಹಾಸಿಕ ದಾಖಲೆ ನಿರ್ಮಿಸಿ ಇಂದಿಗೆ (ಫೆಬ್ರವರಿ 7) 25 ವರ್ಷಗಳು ಪೂರ್ಣವಾಗಿವೆ.

ಎಜಾಝ್ ಪಟೇಲ್ ದಾಖಲೆ:

ಅನಿಲ್ ಕುಂಬ್ಳೆ ಅವರ ಬಳಿಕ 2021 ರಲ್ಲಿ ನ್ಯೂಝಿಲೆಂಡ್ ಸ್ಪಿನ್ನರ್ ಎಜಾಝ್ ಪಟೇಲ್ 10 ವಿಕೆಟ್​ಗಳ ಸಾಧನೆ ಮಾಡಿದ್ದರು. ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 47.5 ಓವರ್​ಗಳನ್ನು ಎಸೆದ ಎಜಾಝ್ 119 ರನ್ ನೀಡಿ 10 ವಿಕೆಟ್ ಪಡೆದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್​ನ 10 ವಿಕೆಟ್​ಗಳನ್ನು ಕಬಳಿಸಿದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡರು.