VPL 2024: ಹೊಸ ಲೀಗ್ನಲ್ಲಿ ಕಣಕ್ಕಿಳಿಯಲಿದ್ದಾರೆ ಸಿಡಿಲಬ್ಬರದ ಸಿಡಿಲಮರಿ ಸೆಹ್ವಾಗ್
IVPL 2024: ಇಂಡಿಯನ್ ಪ್ರೀಮಿಯರ್ ಲೀಗ್, ಲೆಜೆಂಡ್ಸ್ ಲೀಗ್ ಬಳಿಕ ಇದೀಗ ಭಾರತದಲ್ಲಿ ಮತ್ತೊಂದು ಲೀಗ್ ಶುರುವಾಗುತ್ತಿದೆ. ಈ ಲೀಗ್ನಲ್ಲಿ ವಿಶ್ವದ ಖ್ಯಾತನಾಮ ದಿಗ್ಗಜ ಆಟಗಾರರು ಕಣಕ್ಕಿಳಿಯಲಿದ್ದಾರೆ. ಆರು ತಂಡಗಳು ಕಣಕ್ಕಿಳಿಯುವ ಈ ಲೀಗ್ನಲ್ಲಿ ಮುಂಬೈ ಚಾಂಪಿಯನ್ಸ್ ತಂಡದ ನಾಯಕರಾಗಿ ವೀರೇಂದ್ರ ಸೆಹ್ವಾಗ್ ಆಯ್ಕೆಯಾಗಿರುವುದು ವಿಶೇಷ.
Updated on: Feb 07, 2024 | 9:30 AM

ಕ್ರಿಕೆಟ್ ಅಂಗಳಕ್ಕೆ ಮತ್ತೊಂದು ಹೊಸ ಲೀಗ್ ಸೇರ್ಪಡೆಯಾಗುತ್ತಿದೆ. ಆದರೆ ಇದು ಲೆಜೆಂಡ್ಸ್ ಆಟಗಾರರನ್ನು ಒಳಗೊಂಡ ಲೀಗ್ ಎಂಬುದಷ್ಟೇ ವ್ಯತ್ಯಾಸ. ಹೌದು, ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ (IVPL) ಅನ್ನು ಆಯೋಜಿಸಲು ಭಾರತೀಯ ಹಿರಿಯ ಕ್ರಿಕೆಟ್ ಮಂಡಳಿ (BVCI) ಮುಂದಾಗಿದೆ.

ಇದಕ್ಕಾಗಿ ಈಗಾಗಲೇ 6 ತಂಡಗಳನ್ನು ಘೋಷಿಸಲಾಗಿದೆ. ಅದರಂತೆ ಹೊಸ ಲೀಗ್ನಲ್ಲಿ ವಿವಿಐಪಿ ಉತ್ತರಪ್ರದೇಶ್, ರೆಡ್ ಕಾರ್ಪೆಟ್ ಡೆಲ್ಲಿ, ಮುಂಬೈ ಚಾಂಪಿಯನ್ಸ್, ರಾಜಸ್ಥಾನ್ ಲೆಜೆಂಡ್ಸ್, ಚತ್ತೀಸ್ಗಢ್ ವಾರಿಯರ್ಸ್ ಮತ್ತು ತೆಲಂಗಾಣ ಟೈಗರ್ಸ್ ತಂಡಗಳು ಕಣಕ್ಕಿಳಿಯಲಿದೆ.

ವಿಶೇಷ ಎಂದರೆ ಈ ತಂಡಗಳಲ್ಲಿ ಮುಂಬೈ ಚಾಂಪಿಯನ್ಸ್ ತಂಡದ ನಾಯಕರಾಗಿ ವೀರೇಂದ್ರ ಸೆಹ್ವಾಗ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳನ್ನು ಮುನ್ನಡೆಸಿದ್ದ ವೀರು ಇದೀಗ ಹೊಸ ಲೀಗ್ನಲ್ಲಿ ಮುಂಬೈ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಸುರೇಶ್ ರೈನಾ ವಿವಿಐಪಿ ಉತ್ತರಪ್ರದೇಶ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ತೆಲಂಗಾಣ ಟೈಗರ್ಸ್ ತಂಡದ ನಾಯಕರಾಗಿ ಮಾಜಿ ಆರ್ಸಿಬಿ ಆಟಗಾರ ಕ್ರಿಸ್ ಗೇಲ್ ಆಯ್ಕೆಯಾಗಿದ್ದಾರೆ.

ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ರೆಡ್ ಕಾರ್ಪೆಟ್ ಡೆಲ್ಲಿ ತಂಡದ ಸಾರಥ್ಯವಹಿಸಿಕೊಂಡಿದ್ದಾರೆ. ಹಾಗೆಯೇ ಉಳಿದ ಎರಡು ತಂಡಗಳನ್ನು ಯೂಸುಫ್ ಪಠಾಣ್ ಹಾಗೂ ಶ್ರೀಶಾಂತ್ ಮುನ್ನಡೆಸಲಿದ್ದಾರೆ.

ಫೆಬ್ರವರಿ 23 ರಿಂದ ಮಾರ್ಚ್ 3 ರವರೆಗೆ ನಡೆಯಲಿರುವ ಚೊಚ್ಚಲ ವೆಟರನ್ ಪ್ರೀಮಿಯರ್ ಲೀಗ್ಗೆ ಡೆಹ್ರಾಡೂನ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಟೂರ್ನಿಯ ಪಂದ್ಯಗಳನ್ನು ಯುರೋಸ್ಪೋರ್ಟ್ ಚಾನೆಲ್, ಡಿಡಿ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್ ಆ್ಯಪ್ನಲ್ಲಿ ವೀಕ್ಷಿಸಬಹುದು.
