- Kannada News Photo gallery Cricket photos TNPL Auction 2024: Sai Kishore become most-expensive player
TNPL 2024: ದಾಖಲೆ ಮೊತ್ತಕ್ಕೆ ಸಾಯಿ ಕಿಶೋರ್ ಹರಾಜು..!
Sai Kishore: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಸಾಯಿ ಕಿಶೋರ್ 3 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ ಆಕ್ಷನ್ನಲ್ಲೂ ಯುವ ಎಡಗೈ ಆಲ್ರೌಂಡರ್ ಬೃಹತ್ ಮೊತ್ತಕ್ಕೆ ಹರಾಜಾಗಿದ್ದಾರೆ. ಈ ಮೂಲಕ ಟಿಎನ್ಪಿಎಲ್ನ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
Updated on: Feb 07, 2024 | 12:58 PM

ತಮಿಳುನಾಡು ಪ್ರೀಮಿಯರ್ ಲೀಗ್ನ (TNPL) 8ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಟೀಮ್ ಇಂಡಿಯಾ ಆಟಗಾರ ಸಾಯಿ ಕಿಶೋರ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದಾರೆ. 3 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಯುವ ಎಡಗೈ ಆಲ್ರೌಂಡರ್ ಖರೀದಿಗೆ 8 ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಿತು.

ಪರಿಣಾಮ ಕ್ಷಣಾರ್ಧದಲ್ಲೇ ಸಾಯಿ ಕಿಶೋರ್ ಅವರ ಮೌಲ್ಯವು 15 ಲಕ್ಷ ರೂ. ದಾಟಿದೆ. ಇದಾಗ್ಯೂ ತಿರುಪ್ಪೂರ್ ತಮಿಳನ್ಸ್ ಹಾಗೂ ತಿರುಚ್ಚಿ ಗ್ರ್ಯಾಂಡ್ ಚೋಳಾಸ್ ಫ್ರಾಂಚೈಸಿಗಳ ನಡುವೆ ಪೈಪೋಟಿ ಮುಂದುವರೆಯಿತು. ಅಂತಿಮವಾಗಿ ಬರೋಬ್ಬರಿ 22 ಲಕ್ಷ ರೂ. ನೀಡುವ ಮೂಲಕ ತಿರುಪ್ಪೂರ್ ತಮಿಳನ್ಸ್ ತಂಡವು ಸಾಯಿ ಕಿಶೋರ್ ಅವರನ್ನು ಖರೀದಿಸಿದೆ.

ಇದರೊಂದಿಗೆ ತಮಿಳುನಾಡು ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ಹೆಗ್ಗಳಿಕೆಗೆ ಸಾಯಿ ಕಿಶೋರ್ ಪಾತ್ರರಾದರು. ಇದಕ್ಕೂ ಮುನ್ನ TNPLನ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆ ಸಾಯಿ ಸುದರ್ಶನ್ ಅವರ ಹೆಸರಿನಲ್ಲಿತ್ತು.

TNPL 2023ರ ಹರಾಜಿನಲ್ಲಿ ಕೋವೈ ಕಿಂಗ್ಸ್ ತಂಡವು ಸಾಯಿ ಸುದರ್ಶನ್ ಅವರನ್ನು ಬರೋಬ್ಬರಿ 21.6 ಲಕ್ಷ ರೂ.ಗೆ ಖರೀದಿಸಿ ದಾಖಲೆ ಬರೆದಿತ್ತು. ಇದೀಗ ತಿರುಪ್ಪೂರ್ ತಮಿಳನ್ಸ್ ತಂಡವು ಸಾಯಿ ಕಿಶೋರ್ ಅವರಿಗೆ 22 ಲಕ್ಷ ರೂ. ಪಾವತಿಸಿ ಹೊಸ ಇತಿಹಾಸ ನಿರ್ಮಿಸಿದೆ.

ವಿಶೇಷ ಎಂದರೆ ಈ ದಾಖಲೆ ಬೆನ್ನಲ್ಲೇ ಸಂಜಯ್ ಯಾದವ್ ಕೂಡ 22 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ತಿರುಚ್ಚಿ ಗ್ರ್ಯಾಂಡ್ ಚೋಳಾಸ್ ಫ್ರಾಂಚೈಸಿಯು ಎಡಗೈ ಆಲ್ರೌಂಡರ್ ಸಂಜಯ್ಗಾಗಿ ದುಬಾರಿ ಮೊತ್ತ ಪಾವತಿಸಿದೆ. ಇದರೊಂದಿಗೆ ತಮಿಳುನಾಡು ಪ್ರೀಮಿಯರ್ ಲೀಗ್ನ ಅತ್ಯಂತ ದುಬಾರಿ ಆಟಗಾರರಲ್ಲಿ ಸಾಯಿ ಕಿಶೋರ್ ಹಾಗೂ ಸಂಜಯ್ ಯಾದವ್ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಕಳೆದ 7 ವರ್ಷಗಳಿಂದ ಆಯೋಜಿಸಲಾಗುತ್ತಿರುವ ತಮಿಳನಾಡು ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತಿವೆ. ಚೆಪಾಕ್ ಸೂಪರ್ ಗಿಲ್ಲೀಸ್, ನೆಲ್ಲೈ ರಾಯಲ್ ಕಿಂಗ್ಸ್, ತಿರುಪ್ಪೂರ್ ತಮಿಳನ್ಸ್, ತಿರುಚ್ಚಿ ಗ್ರ್ಯಾಂಡ್ ಚೋಳಾಸ್, ಲೈಕಾ ಕೋವೈ ಕಿಂಗ್ಸ್, ಸೇಲಂ ಸ್ಪಾರ್ಟನ್ಸ್, ಮಧುರೈ ಪ್ಯಾಂಥರ್ಸ್, ದಿಂಡಿಗಲ್ ಡ್ರಾಗನ್ಸ್ ತಂಡಗಳು ಈ ಬಾರಿ ಕೂಡ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ.
