ಕ್ರಿಕೆಟ್ ಬಿಟ್ಟು ಮೌಲ್ವಿ ಆಗು; ಕಳಪೆ ಆಟದಿಂದ ಅಪಹಾಸ್ಯಕ್ಕೀಡಾದ ಮೊಹಮ್ಮದ್ ರಿಜ್ವಾನ್

Mohammed Rizwan's CPL Debut Flops: ಏಷ್ಯಾಕಪ್‌ನಿಂದ ಹೊರಗುಳಿದ ಮಾಜಿ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಅವರು ಸಿಪಿಎಲ್‌ನಲ್ಲಿಯೂ ಕಳಪೆ ಪ್ರದರ್ಶನ ನೀಡಿದ್ದಾರೆ. ಬಾರ್ಬಡೋಸ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ ಮೂರು ರನ್ ಗಳಿಸಿ ಔಟಾದರು. ಸೋಷಿಯಲ್ ಮೀಡಿಯಾದಲ್ಲಿ ಅವರ ಔಟು ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಕ್ರಿಕೆಟ್ ಬಿಟ್ಟು ಮೌಲ್ವಿ ಆಗು; ಕಳಪೆ ಆಟದಿಂದ ಅಪಹಾಸ್ಯಕ್ಕೀಡಾದ ಮೊಹಮ್ಮದ್ ರಿಜ್ವಾನ್
Mohammed Rizwan

Updated on: Aug 22, 2025 | 9:34 PM

ಒಂದು ಸಮಯದಲ್ಲಿ ಪಾಕಿಸ್ತಾನ ತಂಡದ ನಂಬಿಕಸ್ಥ ಬ್ಯಾಟರ್​ಗಳಾಗಿದ್ದ ಮಾಜಿ ನಾಯಕರಾದ ಬಾಬರ್ ಆಝಂ (Babar Azam) ಹಾಗೂ ಮೊಹಮ್ಮದ್ ರಿಜ್ವಾನ್ (Mohammed Rizwan) ತಮ್ಮ ಕಳಪೆ ಫಾರ್ಮ್​ನಿಂದಾಗಿ ಏಷ್ಯಾಕಪ್ ತಂಡದಿಂದ ಹೊರಬಿದ್ದಿದ್ದಾರೆ. ಆದಾಗ್ಯೂ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (CPL 2025) ತಮ್ಮ ಅದೃಷ್ಟ ಪರೀಕ್ಷೆಗಿಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್​ಗೆ ಇಲ್ಲೂ ಕೂಡ ಅದೃಷ್ಟ ಕೈಕೊಟ್ಟಿದೆ. ಸಿಪಿಎಲ್​ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ತಂಡದ ಪರ ಆಡುತ್ತಿರುವ ರಿಜ್ವಾನ್ ಮೊದಲ ಪಂದ್ಯದಲ್ಲಿ ಕೇವಲ ಮೂರು ರನ್ ಗಳಿಸಿ ಔಟಾದರು. ಫುಲ್ ಟಾಸ್ ಎಸೆತವನ್ನು ಸ್ವೀಪ್ ಮಾಡುವ ಪ್ರಯತ್ನದಲ್ಲಿ ತಮ್ಮ ಸಮತೋಲನವನ್ನು ಕಳೆದುಕೊಂಡ ರಿಜ್ವಾನ್ ಕ್ಲೀನ್ ಬೌಲ್ಡ್ ಆದರು. ರಿಜ್ವಾನ್ ಅವರ ಈ ಪ್ರದರ್ಶನವನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ.

ಸಿಪಿಎಲ್​ನಲ್ಲಿ ರಿಜ್ವಾನ್ ವಿಫಲ

ಬಾರ್ಬಡೋಸ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ಎಲ್ಲಾ ಅಭಿಮಾನಿಗಳು ಮೊಹಮ್ಮದ್ ರಿಜ್ವಾನ್ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ರಿಜ್ವಾನ್​ಗೆ ಆಡಿದ ಮೊದಲ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗದೆ ಮೂರು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅದರಲ್ಲೂ ಮೊಹಮ್ಮದ್ ರಿಜ್ವಾನ್ ಔಟಾದ ರೀತಿ, ಅವರದೇ ತಂಡದ ಆಟಗಾರರು ನಗುವಂತೆ ಮಾಡಿತು.

ಇದೀಗ ರಿಜ್ವಾನ್ ಅವರು ಔಟಾದ ವಿಡಿಯೋವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ಅದಕ್ಕೆ ಕೆಲವರು ವಿಧವಿಧದ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಕ್ರಿಕೆಟ್ ಬಿಟ್ಟು ಮೌಲಾನಾ ಆಗಿ ಎಂದು ಕಾಮೆಂಟ್ ಮಾಡಿದ್ದಾರೆ.

ರಿಜ್ವಾನ್ ತಂಡಕ್ಕೆ ಗೆಲುವು

ಈ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೂ, ಅವರ ತಂಡ ಬಾರ್ಬಡೋಸ್ ರಾಯಲ್ಸ್ ವಿರುದ್ಧ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು. ಕೈಲ್ ಮೇಯರ್ಸ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು. ಈ ಪಂದ್ಯದಲ್ಲಿ, ಅವರು 28 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 42 ರನ್‌ಗಳ ಇನ್ನಿಂಗ್ಸ್ ಆಡಿದರು. ಹಾಗೆಯೇ ಹೋಲ್ಡರ್ 38 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರೆ, ಆಂಡ್ರೆ ಫ್ಲೆಚರ್ 25 ರನ್‌ಗಳ ಕೊಡುಗೆ ನೀಡಿದರು. ನಸೀಮ್ ಶಾ ಔಟಾಗದೆ 19 ರನ್ ಗಳಿಸಿದರು. ಬಾರ್ಬಡೋಸ್ ಪರ ರಾಮನ್ ಸಿಮಂಡ್ಸ್ ಮೂರು ವಿಕೆಟ್‌ಗಳನ್ನು ಪಡೆದರು.

ನಿವೃತ್ತಿ ಘೋಷಿಸಿ..; ಬಾಬರ್- ರಿಜ್ವಾನ್​ಗೆ ವಿದಾಯದ ಸಲಹೆ ನೀಡಿದ ಪಾಕ್ ಮಾಜಿ ವೇಗಿ

ಗುರಿಯನ್ನು ಬೆನ್ನಟ್ಟಿದ ಬಾರ್ಬಡೋಸ್ ರಾಯಲ್ಸ್ ತಂಡವು 162 ರನ್‌ಗಳಿಗೆ ಆಲೌಟ್ ಆಯಿತು. ಕದೀಮ್ ಅಲೆನ್ ತಂಡದ ಪರ 42 ರನ್ ಗಳಿಸಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಬ್ರಾಂಡನ್ ಕಿಂಗ್ 22 ರನ್ ಗಳಿಸಿದರೆ, ನಾಯಕ ರೋವ್‌ಮನ್ ಪೊವೆಲ್ 21 ರನ್ ಗಳಿಸಿದರು. ಸೇಂಟ್ ಕಿಟ್ಸ್ ಪರ ಜೇಸನ್ ಹೋಲ್ಡರ್ 3.2 ಓವರ್‌ಗಳಲ್ಲಿ 14 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Fri, 22 August 25