
ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಎರಡು ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯುತ್ತಿದೆ. ಈ ಸರಣಿಯ ನಡುವೆ ಟೀಂ ಇಂಡಿಯಾಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಮಹತ್ವದ ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಲಭ್ಯರಾಗಲಿದ್ದಾರೆ. ಶಮಿ ಪ್ರಸ್ತುತ ಭಾರತದಲ್ಲಿದ್ದಾರೆ, ಆದರೆ ಅವರ ಪ್ಲೇಯಿಂಗ್ ಕಿಟ್ ಅನ್ನು ಈಗಾಗಲೇ ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಶಮಿ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳುವ ಸಾಧ್ಯತೆಗಳಿವೆ.
ಸದ್ಯದ ವರದಿಯ ಪ್ರಕಾರ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಆಡುವುದನ್ನು ಕಾಣಬಹುದು. ಪಿಟಿಐ ವರದಿ ಮಾಡಿರುವ ಪ್ರಕಾರ, ಮೊಹಮ್ಮದ್ ಶಮಿ ಅವರ ಪ್ಲೇಯಿಂಗ್ ಕಿಟ್ ಈಗಾಗಲೇ ಆಸ್ಟ್ರೇಲಿಯಾವನ್ನು ತಲುಪಿದ್ದು, ಎನ್‌ಸಿಎ ವೈದ್ಯಕೀಯ ತಂಡದಿಂದ ಫಿಟ್‌ನೆಸ್ ಕ್ಲಿಯರೆನ್ಸ್ ಪಡೆದ ಕೂಡಲೇ ಶಮಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಂದರೆ ಬಿಸಿಸಿಐ ಶೀಘ್ರದಲ್ಲೇ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲಿದೆ.
ಡಿಸೆಂಬರ್ 14 ರಿಂದ ಬ್ರಿಸ್ಬೇನ್‌ನಲ್ಲಿ ಪ್ರಾರಂಭವಾಗುವ ಮೂರನೇ ಟೆಸ್ಟ್‌ನಲ್ಲಿ ಮೊಹಮ್ಮದ್ ಶಮಿ ಆಡುವ ಸಾಧ್ಯತೆಗಳು ತೀರ ಕಡಿಮೆ. ಏಕೆಂದರೆ ಈ ಪಂದ್ಯಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಆದರೆ ಶಮಿ ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತಂಡದ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಎನ್‌ಸಿಎಯಿಂದ ಫಿಟ್‌ನೆಸ್ ಪ್ರಮಾಣಪತ್ರವನ್ನು ಶೀಘ್ರದಲ್ಲೇ ಸ್ವೀಕರಿಸಲಾಗುವುದು ಎಂದು ಶಮಿ ಆಪ್ತ ಮೂಲಗಳು ಪಿಟಿಐಗೆ ತಿಳಿಸಿವೆ. ಅಲ್ಲದೆ ಶಮಿ ಅವರ ಕ್ರಿಕೆಟ್ ಕಿಟ್ ಅನ್ನು ಈಗಾಗಲೇ ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗಿದೆ. ಶಮಿ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯನ್ನು ಪೂರ್ಣಗೊಳಿಸಿದ ನಂತರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಬಂಗಾಳದ ಮುಖ್ಯ ಕೋಚ್ ಲಕ್ಷ್ಮಿ ರತನ್ ಶುಕ್ಲಾ, ಶಮಿ ಆಸ್ಟ್ರೇಲಿಯಾಕ್ಕೆ ತೆರಳುವ ಬಗ್ಗೆ ಸುಳಿವು ನೀಡಿದ್ದು, ‘ಶಮಿ ಚಂಡೀಗಢ ವಿರುದ್ಧದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಂಡದ ಪರ ಆಡಲಿದ್ದಾರೆ. ಹೀಗಾಗಿ ಅವರು ನಾಳೆಯೊಳಗೆ ಬೆಂಗಳೂರಿನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ, ನಾವು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರೆ ಶಮಿ ಆಡಲು ಲಭ್ಯವಾಗುತ್ತಾರೆಯೇ ಎಂದು ನನಗೆ ತಿಳಿದಿಲ್ಲ. ಸದ್ಯ ಶಮಿ ಸಂಪೂರ್ಣ ಫಿಟ್ ಆಗಿದ್ದು, ಅವರು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯವನ್ನಾಡಲು ಆಸೀಸ್ಗೆ ತೆರಳಬಹುದು ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ