
ಇಡೀ ದೇಶವೇ ಬಣ್ಣದೊಕ್ಕುಳಿಯಲ್ಲಿ ಮುಳುಗೇಳುತ್ತಿದೆ. ಇದಕ್ಕೆ ಕಾರಣ ರಂಗು ರಂಗಿನ ಹೋಳಿ ಹಬ್ಬ (Holi Celebrations). ಭಾರತೀಯರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಈ ಹೋಳಿ ಹಬ್ಬವು ಒಂದು. ತಮ್ಮ ಆಪ್ತರು, ಸ್ನೇಹಿತರು, ಕುಟುಂಬದವರೆಲ್ಲ ಪರಸ್ಪರ ಒಬ್ಬರಿಗೊಬ್ಬರು ಬಣ್ಣವನ್ನು ಬಳಿಯುತ್ತ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಹೋಳಿ ಹಬ್ಬವನ್ನು ಆಚರಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ (Mohammed Shami) ಅವರ ಮಗಳು ಐರಾಗೆ ಇದೀಗ ‘ಧರ್ಮ’ ಸಂಕಟ ಎದುರಾಗಿದೆ. ತನ್ನ ಮಗಳ ಹೋಳಿ ಆಚರಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಐರಾ ತಾಯಿ ಹಸಿನ್ ಜಹಾನ್ ಅವರನ್ನು ಕೆಲವು ಕಿಡಿಗೇಡಿಗಳು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಮುಸ್ಲಿಂ ಆಗಿದ್ದರೂ ರಂಜಾನ್ ತಿಂಗಳಲ್ಲಿ ಹೋಳಿ ಆಡುವುದು ಅಪರಾಧ ಎಂದು ಜರಿದಿದ್ದಾರೆ.
ಹೋಳಿ ಹಬ್ಬವನ್ನು ಸಾಮಾನ್ಯವಾಗಿ ಹಿಂದೂ ಧರ್ಮದ ಜನರು ಆಚರಿಸುತ್ತಾರೆ. ಹಸೀನ್ ಜಹಾನ್ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರೂ, ಅವರು ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಹೀಗಾಗಿ ಐರಾ ಕೂಡ ತನ್ನ ಸ್ನೇಹಿತರೊಂದಿಗೆ ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ. ಅದರ ಫೋಟೋಗಳನ್ನು ಹಸೀನ್ ಜಹಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಕೆಲವು ನೆಟ್ಟಿಗರು, ಐರಾ ಅವರನ್ನು ತರಹೆವಾರಿ ಕಾಮೆಂಟ್ಗಳ ಮೂಲಕ ನಿಂಧಿಸಲಾರಂಭಿಸಿದ್ದಾರೆ.
ಅದರಲ್ಲಿ ಒಬ್ಬ ಬಳಕೆದಾರ, ಹಸೀನ್ ಜಹಾನ್ ಅವರನ್ನು ಅಜ್ಞಾನಿ ವ್ಯಕ್ತಿ ಎಂದು ಕರೆದಿದ್ದರೆ, ಮತ್ತೊಬ್ಬ, ‘ಇದು ರಂಜಾನ್ ತಿಂಗಳು, ನಿಮಗೆ ನಾಚಿಕೆಯಾಗಬೇಕು’ ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ, ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಐರಾ ಹಾಗೂ ಹಸೀನ್ ಜಹಾನ್ ಅವರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ವಾಸ್ತವವಾಗಿ ಹೋಳಿ ಹಬ್ಬಕ್ಕೆ ಒಂದು ದಿನ ಮೊದಲು, ಹಸೀನ್ ಜಹಾನ್ ತಮ್ಮ ಮಗಳು ಐರಾಳ ವೀಡಿಯೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಐರಾ, ಹೋಳಿ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದಾಗಿದೆ. ಇದಕ್ಕೂ ಕಿಡಿಕಾರಿರುವ ಕೆಲವರು, ರಂಜಾನ್‌ನಲ್ಲಿ ಹೀಗೆ ಮಾಡುವುದು ಪಾಪ, ಹಸೀನ್ ಜಹಾನ್ ಐರಾಳನ್ನು ಹಾಳು ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ ಅವರ ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿ ವರ್ಷಗಳೇ ಕಳೆದಿವೆ. ಈ ಇಬ್ಬರು ಪ್ರಸ್ತುತ ಒಟ್ಟಿಗೆ ಬಾಳುತ್ತಿಲ್ಲ. ಆದಾಗಲೇ ಇಬ್ಬರ ನಡುವೆ ವಿಚ್ಛೇದನವಾಗಿದೆ. ಆದಾಗ್ಯೂ ಮೊಹಮ್ಮದ್ ಶಮಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ತೆಗಳುವ ಕೆಲಸವನ್ನು ಹಸಿನ್ ಜಹಾನ್ ಮಾಡುತ್ತಿರುತ್ತಾರೆ. ಆದರೆ ಶಮಿ ಮಾತ್ರ ಅವರ ಮಾಜಿ ಮಡದಿಯ ಬಗ್ಗೆ ಎಲ್ಲಿಯೂ ಪ್ರಾಸ್ತಾಪಿಸುವುದಿಲ್ಲ. ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಚಿಯರ್‌ಲೀಡರ್ ಆಗಿ ಕೆಲಸ ಮಾಡುತ್ತಿದ್ದ ಹಸಿನ್ ಜಹಾನ್ ಅವರನ್ನು ಮೊಹಮ್ಮದ್ ಶಮಿ 2012 ರ ಐಪಿಎಲ್ ಸಮಯದಲ್ಲಿ ಭೇಟಿಯಾದರು.
ಇದನ್ನೂ ಓದಿ: ಇಡೀ ತಂಡ ಟ್ರೋಫಿ ಹಿಡಿದು ಸಂಭ್ರಮಿಸುತ್ತಿದ್ದರೆ ಏಕಾಂಗಿಯಾಗಿ ನಿಂತಿದ್ದ ಶಮಿ..! ಕಾರಣವೇನು? ವಿಡಿಯೋ
ಆ ಸಮಯದಲ್ಲಿ ಶಮಿ ಕೆಕೆಆರ್ ತಂಡದ ಪರ ಆಡುತ್ತಿದ್ದರು. ನಂತರ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಅದು ಪ್ರೀತಿಯಾಗಿ ಬದಲಾಯಿತು. ಇಬ್ಬರ ನಡುವಿನ ಸಂಬಂಧ ನಂತರ ಮದುವೆಯವರೆಗೂ ತಲುಪಿ, 2014 ರಲ್ಲಿ ವಿವಾಹವಾದರು. ಇದಾದ ನಂತರ, ಹಸೀನ್ ಜಹಾನ್ ಚಿಯರ್‌ಲೀಡರ್ ಮತ್ತು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ತೊರೆದರು. ಒಂದು ವರ್ಷದ ನಂತರ 2015 ರಲ್ಲಿ, ಮಗಳು ಐರಾ ಜನಿಸಿದಳು. ಆದರೆ, 2018 ರ ವೇಳೆಗೆ ಶಮಿ ಮತ್ತು ಹಸೀನ್ ನಡುವಿನ ಸಂಬಂಧ ಹದಗೆಟ್ಟಿತು. ಇದಾದ ನಂತರ ಇಬ್ಬರೂ ಕಾನೂನಿನ ಪ್ರಕಾರ ಬೇರ್ಪಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ