ಇಡೀ ತಂಡ ಟ್ರೋಫಿ ಹಿಡಿದು ಸಂಭ್ರಮಿಸುತ್ತಿದ್ದರೆ ಏಕಾಂಗಿಯಾಗಿ ನಿಂತಿದ್ದ ಶಮಿ..! ಕಾರಣವೇನು? ವಿಡಿಯೋ
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗೆಲುವಿನ ನಂತರ, ಮೊಹಮ್ಮದ್ ಶಮಿ ಅವರು ವಿಜಯೋತ್ಸವದ ವೇದಿಕೆಯಿಂದ ದೂರ ಉಳಿದಿದ್ದ ವಿಡಿಯೋ ವೈರಲ್ ಆಗಿದೆ. ಇಸ್ಲಾಂನಲ್ಲಿ ಶಾಂಪೇನ್ ಕುಡಿಯುವುದು ಮತ್ತು ಮುಟ್ಟುವುದು ನಿಷೇಧಿಸಲಾಗಿದೆ. ಬಹುಶಃ ಅದಕ್ಕಾಗಿಯೇ ಶಮಿ ವೇದಿಕೆಯಿಂದ ಹಿಂದೆ ಸರಿದಿದ್ದಾರೆ ಎನ್ನಬಹುದು.

2025 ರ ಚಾಂಪಿಯನ್ಸ್ ಟ್ರೋಫಿಗೆ (Champions Trophy 2025) ಅದ್ಧೂರಿ ತೆರೆ ಬಿದ್ದಿದೆ. ಟೀಂ ಇಂಡಿಯಾ 12 ವರ್ಷಗಳ ನಂತರ ಮತ್ತೊಮ್ಮೆ ಈ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ದುಬೈನಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರೆ, ತಂಡದ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ (Mohammad Shami) ಮಾತ್ರ ಇಡೀ ತಂಡವನ್ನು ತೊರೆದು, ಸ್ಟೇಜ್ನಿಂದ ಸ್ವಲ್ಪ ದೂರ ಸರಿದು ಏಕಾಂಗಿಯಾಗಿ ನಿಂತುಬಿಟ್ಟಿದ್ದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ವೇದಿಕೆಯಿಂದ ದೂರ ಸರಿದ ಶಮಿ
ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಂದ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯನ್ನು ಸ್ವೀಕರಿಸುತ್ತಿದ್ದಂತೆ ತಂಡದ ಎಲ್ಲಾ ಆಟಗಾರರು ವೇದಿಕೆಯ ಮೇಲೆ ಬಂದು ನಿಂತರು. ಎಲ್ಲಾರಂತೆ ಶಮಿ ಕೂಡ ತಂಡದೊಂದಿಗೆ ವೇದಿಕೆಗೆ ಬಂದರು. ಆದರೆ ವೇದಿಕೆಯ ಮೇಲೆ ಷಾಂಪೇನ್ ಬಾಟಲಿಯನ್ನು ಓಪನ್ ಮಾಡುತ್ತಿದ್ದಂತೆ, ಮೊಹಮ್ಮದ್ ಶಮಿ ತಂಡವನ್ನು ತೊರೆದು ಸ್ಟೇಜ್ನಿಂದ ದೂರ ಹೋಗಿ ನಿಂತರು. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಾಸ್ತವವಾಗಿ, ಇಸ್ಲಾಂನಲ್ಲಿ ಶಾಂಪೇನ್ ಕುಡಿಯುವುದು ಮತ್ತು ಮುಟ್ಟುವುದು ನಿಷೇಧಿಸಲಾಗಿದೆ. ಬಹುಶಃ ಅದಕ್ಕಾಗಿಯೇ ಶಮಿ ವೇದಿಕೆಯಿಂದ ಹಿಂದೆ ಸರಿದಿದ್ದಾರೆ ಎನ್ನಬಹುದು.
The Videopic.twitter.com/NnEtw4AXys https://t.co/YA04UmfWiR
— زماں (@Delhiite_) March 9, 2025
ಈ ಹಿಂದೆಯೂ ಶಮಿ ವಿರುದ್ಧ ಆರೋಪ
ಭಾರತ ತಂಡ ಮಾರ್ಚ್ 4 ರಂದು ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಿತ್ತು. ಈ ವೇಳೆ ಶಮಿ ಬೌಂಡರಿ ಲೈನ್‌ನಲ್ಲಿ ಎನರ್ಜಿ ಡ್ರಿಂಕ್ ಕುಡಿಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಂಜಾನ್ ಸಮಯದಲ್ಲಿ ಉಪವಾಸ ಮಾಡದಿದ್ದಕ್ಕಾಗಿ ಕೆಲವು ಬಳಕೆದಾರರು ಅವರನ್ನು ಟ್ರೋಲ್ ಮಾಡಿದ್ದರು. ಇದರ ಹೊರತಾಗಿ ರಂಜಾನ್ ತಿಂಗಳಂದು ಉಪವಾಸ ಆಚರಿಸದ ಶಮಿಯನ್ನು ಅಖಿಲ ಭಾರತೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಶಹಬುದ್ದಿನ್ ರಜ್ವಿ ಬರೇಲ್ವಿ ಕ್ರಿಮಿನಲ್ ಎಂದು ಜರಿದಿದ್ದರು.
ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಉಪವಾಸ ಮಾಡದಿದ್ದರೆ ಅವನು ಪಾಪಿ. ಮೊಹಮ್ಮದ್ ಶಮಿ ಇಸ್ಲಾಮಿಕ್ ಷರಿಯಾ ನಿಯಮಗಳನ್ನು ಪಾಲಿಸಲಿಲ್ಲ ಮತ್ತು ಉಪವಾಸವನ್ನು ಆಚರಿಸಲಿಲ್ಲ, ಅದು ಅವರಿಗೆ ಕಡ್ಡಾಯವಾಗಿತ್ತು. ಈ ನಿಯಮವನ್ನು ಪಾಲಿಸದಿರುವುದು ಶರಿಯಾ ದೃಷ್ಟಿಯಲ್ಲಿ ದೊಡ್ಡ ಪಾಪ. ಮೊಹಮ್ಮದ್ ಶಮಿ ಇಸ್ಲಾಮಿಕ್ ಜವಾಬ್ದಾರಿಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದು ಮೌಲಾನಾ ಆರೋಪಿಸಿದ್ದರು. ಆದಾಗ್ಯೂ, ಅನೇಕ ಮಾಜಿ ಭಾರತೀಯ ಆಟಗಾರರು ಮತ್ತು ಅನೇಕ ಇಸ್ಲಾಮಿಕ್ ಧಾರ್ಮಿಕ ಮುಖಂಡರು ಈ ವಿಷಯದಲ್ಲಿ ಶಮಿಯನ್ನು ಬೆಂಬಲಿಸಿದ್ದರು ಮತ್ತು ವಿಮರ್ಶಕರ ಬಾಯಿ ಮುಚ್ಚಿದ್ದರು.
ಇದನ್ನೂ ಓದಿ: IND vs NZ: ರೋಚಕ ಘಟ್ಟದಲ್ಲಿ ಭಾರತದ ಡ್ರೆಸ್ಸಿಂಗ್ ರೂಂ ವಾತಾವರಣ ಹೇಗಿತ್ತು? ಗೆದ್ದ ಬಳಿಕ ಏನಾಯ್ತು? ವಿಡಿಯೋ ನೋಡಿ
ಶಮಿ ಅದ್ಭುತ ಪ್ರದರ್ಶನ
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದರು. ಈ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ಶಮಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಶಮಿ ಆಡಿದ 5 ಪಂದ್ಯಗಳಲ್ಲಿ 9 ವಿಕೆಟ್ ಪಡೆದರೆ, ಇತ್ತ ಜಂಟಿಯಾಗಿ ಮೊದಲ ಸ್ಥಾನದಲ್ಲಿರುವ ವರುಣ್ ಚಕ್ರವರ್ತಿ 3 ಪಂದ್ಯಗಳಲ್ಲಿ 9 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 pm, Mon, 10 March 25