ಮೊದಲು ಸರಣಿ ಸೋಲು, ನಂತರ ಚಾಂಪಿಯನ್; ಭಾರತದ ಗೆಲುವಿನಲ್ಲಿ ಹೀಗೊಂದು ಕಾಕತಾಳೀಯ
Champions Trophy: 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಭಾರತದ ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಆಗಿದೆ. ಆಸಕ್ತಿದಾಯಕವಾಗಿ, 2013ರ ಗೆಲುವಿನಂತೆ, ಈ ಗೆಲುವಿನಲ್ಲೂ ಎರಡು ಕುತೂಹಲಕಾರಿ ಹೋಲಿಕೆಗಳಿವೆ. ಈ ಟೂರ್ನಿಗೂ ಮುನ್ನ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಭಾರತ ಯಾವ ತಂಡದ ವಿರುದ್ಧ ಸರಣಿ ಸೋತಿತ್ತೋ, ಅದೇ ತಂಡವನ್ನು ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಣಿಸಿ ಚಾಂಪಿಯನ್ ಆಗಿದೆ.

ಚಾಂಪಿಯನ್ಸ್ ಟ್ರೋಫಿ (Champions Trophy 2025) ಗೆಲ್ಲಬೇಕೆಂಬ ಭಾರತದ 12 ವರ್ಷಗಳ ಬಯಕೆ ಕೊನೆಗೂ ಈಡೇರಿದೆ. ಮಾರ್ಚ್ 9, 2025 ರ ಸಂಜೆ, ದುಬೈ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವು, ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಇದು ಟೀಂ ಇಂಡಿಯಾದ (Team India) ಮೂರನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2013 ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಚ್ಚರಿಯೆಂದರೆ, ಭಾರತದ 2025 ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲೂ ಹಾಗೂ 2013 ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲೂ 2 ಪ್ರಮುಖ ಘಟನೆಗಳು ಒಂದೇ ರೀತಿಯಲ್ಲಿ ಸಂಭವಿಸಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಮೊದಲ ಕಾಕತಾಳೀಯ
ಮೊದಲ ಕಾಕತಾಳೀಯವೆಂದರೆ, 2013 ರ ಚಾಂಪಿಯನ್ಸ್ ಟ್ರೋಫಿ ನಡೆಯುವುದಕ್ಕೂ ಮುನ್ನ ಟೀಂ ಇಂಡಿಯಾ, 2012 ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಸೋತಿತ್ತು. ಈ ಸೋಲಿನೊಂದಿಗೆ 2013 ರ ಚಾಂಪಿಯನ್ಸ್ ಟ್ರೋಫಿಗೆ ಕಾಲಿಟ್ಟಿದ್ದ ಟೀಂ ಇಂಡಿಯಾ, ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಅದೇ ರೀತಿ, 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಭಾರತ ಸೋತಿತ್ತು. ಈ ಸೋಲಿನೊಂದಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಇದೀಗ, ಫೈಣಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವುದರೊಂದಿಗೆ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ: Ravindra Jadeja: 4 ಪದಗಳ ಉತ್ತರ; ನಿವೃತ್ತಿ ವದಂತಿಯ ಬಗ್ಗೆ ಮೌನ ಮುರಿದ ರವೀಂದ್ರ ಜಡೇಜಾ
ಎರಡನೇ ಕಾಕತಾಳೀಯ
ಇದಲ್ಲದೆ, ಚಾಂಪಿಯನ್ಸ್ ಟ್ರೋಫಿ ಗೆಲುವಿನ ಎರಡನೇ ಕಾಕತಾಳೀಯ ತಂಡದ ಮಾಜಿ ನಾಯಕ ಹಾಗೂ ಹಾಲಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಸಂಬಂಧಿಸಿದ್ದಾಗಿದೆ. ವಾಸ್ತವವಾಗಿ 2024 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ 76 ರನ್ ಕಲೆಹಾಕುವ ಮೂಲಕ ಭಾರತ ತಂಡವನ್ನು ಚಾಂಪಿಯನ್ ಮಾಡಿದ್ದರು. ಅದೇ ರೀತಿ, ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ರೋಹಿತ್ ಶರ್ಮಾ ಕೂಡ 76 ರನ್ ಬಾರಿಸುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ