T20 World Cup 2022: ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ (Team India) ಯಾರೆಲ್ಲಾ ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಪ್ರಸ್ತುತ ತಂಡದಲ್ಲಿರುವ ಯಾವ ಆಟಗಾರನಿಗೆ ಚಾನ್ಸ್ ಸಿಗಲಿದೆ? ಯಾರು ಹೊರಬೀಳಲಿದ್ದಾರೆ ಎಂಬ ಲೆಕ್ಕಚಾರಗಳು ಜೋರಾಗಿ ನಡೆಯುತ್ತಿದೆ. ಏಕೆಂದರೆ 2021 ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ರಾಹುಲ್ ದ್ರಾವಿಡ್ (Rahul Dravid) ಅವರ ನೇತೃತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ (T20 World Cup 2022 Squad) ಆಡಲಿದೆ. ಹೀಗಾಗಿಯೇ ತಂಡದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇತ್ತ ಟೀಮ್ ಇಂಡಿಯಾದಲ್ಲಿ ಅನುಭವಿಗಳ ದಂಡೇ ಇದ್ದು, ಅದರ ಜೊತೆಗೆ ಯುವ ಆಟಗಾರರ ಎಂಟ್ರಿ ಕೂಡ ಆಗಿದೆ. ಹೀಗಾಗಿಯೇ ಆಯ್ಕೆಗಾರರು ಟೀಮ್ ಇಂಡಿಯಾ ಪರ ಆಡುತ್ತಿರುವ ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಅತ್ತ ಅನುಭವಿ ವೇಗದ ಬೌಲರ್ರೊಬ್ಬರು ತಂಡದಿಂದಲೇ ಹೊರಬಿದ್ದಿರುವ ಸುದ್ದಿಯೊಂದು ಬಹಿರಂಗವಾಗಿದೆ.
ಹೌದು, ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಈ ಬಾರಿ ಟಿ20 ವಿಶ್ವಕಪ್ ತಂಡದ ಭಾಗವಾಗುವುದಿಲ್ಲ ಎಂದು ಎಎನ್ಐ ವರದಿ ಮಾಡಿದೆ. ಟಿ20 ಸ್ವರೂಪಕ್ಕೆ ಶಮಿ ಯೋಗ್ಯರಲ್ಲದ ಕಾರಣ ಆಯ್ಕೆಗಾರರು ಅವರನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮುನ್ನ ಯುವ ಆಟಗಾರರಿಗೆ ಅವಕಾಶ ನೀಡಲು ಆಯ್ಕೆದಾರರು ಬಯಸಿದ್ದಾರೆ. ಹೀಗಾಗಿ ಮೊಹಮ್ಮದ್ ಶಮಿ ಟಿ20 ತಂಡದ ಆಯ್ಕೆಯ ಪಟ್ಟಿಯಲ್ಲೇ ಇಲ್ಲ ಎಂದು ಬಿಸಿಸಿಐಯ ಮೂಲಗಳು ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ಮೊಹಮ್ಮದ್ ಶಮಿ ಅವರ ಬದಲಿಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಹಿರಿಯ ಬೌಲರ್ ಆಗಿ ಆಯ್ಕೆ ಮಾಡಬಹುದು. ಇದಲ್ಲದೆ ಇದೀಗ ಉಮ್ರಾನ್ ಮಲಿಕ್ ಕೂಡ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಮುಂಬರುವ ಸರಣಿಗಳಲ್ಲಿ ಮಲಿಕ್ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ ಸಫಲರಾದರೆ ಉಮ್ರಾನ್ ಮಲಿಕ್ಗೂ (Umran Malik) ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗಲಿದೆ.
ಸದ್ಯ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಜುಲೈ 1 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ದದ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಶಮಿ ಕಣಕ್ಕಿಳಿಯಲಿದ್ದಾರೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್ಗಳ ಸರಣಿ ನಡೆಯಲಿದ್ದು, ಇದಕ್ಕಾಗಿ ತಂಡದ ಆಯ್ಕೆ ನಡೆಯಬೇಕಿದೆ. ಆದರೆ ಈ ಸರಣಿಗೂ ಶಮಿ ಆಯ್ಕೆಯಾಗುವುದು ಅನುಮಾನ.
ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರು. ತಂಡದ ಹಿರಿಯ ವೇಗಿಯಾಗಿ ಕಾಣಿಸಿಕೊಂಡಿದ್ದ ಶಮಿ 20 ವಿಕೆಟ್ ಉರುಳಿಸಿ ಮಿಂಚಿದ್ದರು. ಇದಾಗ್ಯೂ ಸೌತ್ ಆಫ್ರಿಕಾ ಹಾಗೂ ಐರ್ಲೆಂಡ್ ವಿರುದ್ದದ ಟಿ20 ಸರಣಿಗಳಿಗೆ ಶಮಿಯನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಮೊಹಮ್ಮದ್ ಶಮಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಇದೇ ಕಾರಣದಿಂದಾಗಿ ಅವರನ್ನು ಟಿ20 ಸರಣಿಗಳಿಗೆ ಆಯ್ಕೆ ಮಾಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ.