‘ಉದ್ದೇಶಪೂರ್ವಕವಾಗಿಯೇ ಕೊಹ್ಲಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ’; ಮೊಹಮ್ಮದ್ ಶಮಿ

|

Updated on: Jul 20, 2024 | 4:12 PM

Mohammed Shami: ಅನೇಕ ಮಾಜಿ ಕ್ರಿಕೆಟಿಗರು ಕೊಹ್ಲಿ ವಿರುದ್ಧ ಏನಾದರೂ ಹೇಳಿದಾಗ ಮರುದಿನ ಪತ್ರಿಕೆಗಳ ಮೊದಲ ಪುಟದಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳುತ್ತದೆ ಎಂಬುದನ್ನು ತಿಳಿದಿದ್ದಾರೆ. ಆದ್ದರಿಂದ ಅವರು ಉದ್ದೇಶಪೂರ್ವಕವಾಗಿ ಹಾಗೆ ಮಾಡುತ್ತಾರೆ ಎಂದು ಹೇಳುವ ಮೂಲಕ ವಿರಾಟ್ ವಿರುದ್ಧ ಮಾತನಾಡಿದವರಿಗೆ ತಕ್ಕ ಉತ್ತರ ನೀಡುವ ಕೆಲಸವನ್ನು ಶಮಿ ಮಾಡಿದ್ದಾರೆ.

‘ಉದ್ದೇಶಪೂರ್ವಕವಾಗಿಯೇ ಕೊಹ್ಲಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಾರೆ’; ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
Follow us on

2023 ರ ಏಕದಿನ ವಿಶ್ವಕಪ್ ವೇಳೆ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಸ್ತುತ ಚೇತರಿಕೆಯ ಹಾದಿಯಲ್ಲಿದ್ದಾರೆ. ಶಮಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೇಗ ಚೇತರಿಸಿಕೊಂಡು ತಂಡವನ್ನು ಕೂಡಿಕೊಳ್ಳುವ ಇರಾದೆಯಲ್ಲಿರುವ ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮಾಜಿ ಕ್ರಿಕೆಟಿಗರ ಹಾಗೂ ಟೀಕಾಕಾರರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ರಾತ್ರೋರಾತ್ರಿ ತಮ್ಮ ಹೆಸರನ್ನು ಮುನ್ನಲೆಗೆ ತರುವ ಉದ್ದೇಶದಿಂದ ಕೆಲವರು ಈ ರೀತಿ ಮಾಡುತ್ತಾರೆ ಎಂದು ಶಮಿ ಹೇಳಿದ್ದಾರೆ.

ಅಮಿತ್ ಮಿಶ್ರಾ ಸ್ಫೋಟಕ ಹೇಳಿಕೆ

ಶುಭಂಕರ್ ಮಿಶ್ರಾ ಅವರ ಪೋಡ್​ಕಾಸ್ಟ್​ನಲ್ಲಿ ಮಾತನಾಡಿದ ಮೊಹಮ್ಮದ್ ಶಮಿ, ಪ್ರತಿ ದಿನ ಕೆಲವು ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲಿ ಕೆಲವರು ಕೊಹ್ಲಿಯ ಒಳ್ಳೆಯತನದ ಬಗ್ಗೆ ಮಾತನಾಡಿದರೆ, ಮತ್ತೆ ಕೆಲವರು ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಾರೆ ಎಂದಿದ್ದಾರೆ. ವಾಸ್ತವವಾಗಿ ಇತ್ತೀಚೆಗಷ್ಟೇ ಭಾರತದ ಲೆಜೆಂಡರಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ‘ಹಣ ಮತ್ತು ಖ್ಯಾತಿ ಪಡೆದ ನಂತರ ಕೊಹ್ಲಿ ಬದಲಾಗಿದ್ದಾರೆ’ ಎಂದು ಹೇಳಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಧೋನಿ, ಕಪಿಲ್ ದೇವ್ ಮತ್ತು ಸಚಿನ್ ಅವರಿಗೆ ಸಿಗುವ ಗೌರವ ಎಂದಿಗೂ ಕೊಹ್ಲಿಗೆ ಸಿಗುವುದಿಲ್ಲ ಎಂದಿದ್ದರು. ಮಿಶ್ರಾ ಅವರ ಈ ಹೇಳಿಕೆ ಸಖತ್ ವೈರಲ್ ಆಗಿತ್ತು. ಮಿಶ್ರಾಗೂ ಮುನ್ನ ಹಲವು ಅನುಭವಿಗಳು ವಿರಾಟ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದೀಗ ಮೊಹಮ್ಮದ್ ಶಮಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಹಾಗೆ ಮಾಡುತ್ತಾರೆ

ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶಮಿ, ‘ಅನೇಕ ಮಾಜಿ ಕ್ರಿಕೆಟಿಗರು ಕೊಹ್ಲಿ ವಿರುದ್ಧ ಏನಾದರೂ ಹೇಳಿದಾಗ ಮರುದಿನ ಪತ್ರಿಕೆಗಳ ಮೊದಲ ಪುಟದಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳುತ್ತದೆ ಎಂಬುದನ್ನು ತಿಳಿದಿದ್ದಾರೆ. ಆದ್ದರಿಂದ ಅವರು ಉದ್ದೇಶಪೂರ್ವಕವಾಗಿ ಹಾಗೆ ಮಾಡುತ್ತಾರೆ’ ಎಂದು ಹೇಳುವ ಮೂಲಕ ವಿರಾಟ್ ವಿರುದ್ಧ ಮಾತನಾಡಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.

ವಿರಾಟ್ ಜೊತೆ ಶಮಿ ಬಾಂಧವ್ಯ ಹೇಗಿದೆ?

ಇನ್ನು ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ ಶಮಿ, ‘ನಮ್ಮಿಬ್ಬರ ಒಡನಾಟ ತುಂಬಾ ಚೆನ್ನಾಗಿದೆ. ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ನನ್ನ ಬೌಲಿಂಗ್ ಅನ್ನು ಇಷ್ಟಪಡುತ್ತಾರೆ. ನಾವು ನೆಟ್ಸ್‌ನಲ್ಲಿ ಪರಸ್ಪರ ಸವಾಲು ಹಾಕುತ್ತೇವೆ, ಇದು ಖುಷಿ ನೀಡುತ್ತದೆ ಮತ್ತು ಇದು ನಮ್ಮ ಸ್ನೇಹ ಮತ್ತು ಬಾಂಧವ್ಯವನ್ನು ತೋರಿಸುತ್ತದೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ಇಶಾಂತ್ ಶರ್ಮಾ ನನ್ನ ಇಬ್ಬರು ಉತ್ತಮ ಸ್ನೇಹಿತರು. ನಾನು ಇಂಜುರಿಯಿಂದ ಬಳಲುತ್ತಿರುವಾಗಲೆಲ್ಲ ಕೊಹ್ಲಿ ನನಗೆ ಫೋನ್ ಮಾಡಿ ವಿಚಾರಿಸುತ್ತಿರುತ್ತಾರೆ ಎಂದು ಶಮಿ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Sat, 20 July 24