Mohammed Shami: ಇದನ್ನೇ ಕರ್ಮ ಎನ್ನುವುದು: ಪಾಕ್ ಸೋಲಿನ ಬಳಿಕ ಅಖ್ತರ್​ಗೆ ತಿರುಗೇಟು ನೀಡಿದ ಮೊಹಮ್ಮದ್ ಶಮಿ

| Updated By: Vinay Bhat

Updated on: Nov 14, 2022 | 8:28 AM

Pakistan vs England, T20 World Cup Final: ಇಂಗ್ಲೆಂಡ್ ವಿರುದ್ಧ ಪಾಕ್ ಸೋತ ಬೆನ್ನಲ್ಲೇ ಅಖ್ತರ್‌ ಅವರು 'ಛಿದ್ರ ಹೃದಯ'ದ ಇಮೋಜಿಯನ್ನು ಹಂಚಿಕೊಂಡಿದ್ದಾರೆ. ಅಖ್ತರ್ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಏನು ಹೇಳಿದ್ದಾರೆ ನೋಡಿ.

Mohammed Shami: ಇದನ್ನೇ ಕರ್ಮ ಎನ್ನುವುದು: ಪಾಕ್ ಸೋಲಿನ ಬಳಿಕ ಅಖ್ತರ್​ಗೆ ತಿರುಗೇಟು ನೀಡಿದ ಮೊಹಮ್ಮದ್ ಶಮಿ
Shoaib Akhtar and Mohammed Shami
Follow us on

ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಮಹಾ ಟೂರ್ನಿಗೆ ತೆರೆಬಿದ್ದಿದೆ. ಭಾನುವಾರ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ (Pakistan vs England) ತಂಡ ಗೆದ್ದು ಬೀಗಿತು. ಬೆನ್ ಸ್ಟೋಕ್ಸ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ ಸ್ಯಾಮ್ ಕುರ್ರನ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ 5 ವಿಕೆಟ್​ಗಳ ಜಯ ಸಾಧಿಸಿರುವ ಆಂಗ್ಲರು ಎರಡನೇ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇತ್ತ ಇತಿಹಾಸ ಮರುಕಳಿಸುತ್ತೇವೆ ಎಂದು ಹೊರಟಿದ್ದ ಬಾಬರ್ ಅಜಮ್ (Babar Azam) ಪಡೆಗೆ ಭಾರೀ ಹಿನ್ನಡೆಯಾಗಿದೆ. ನಿಧಾನಗತಿಯ ಬ್ಯಾಟಿಂಗ್ ಮತ್ತು ಸಾಧಾರಣ ಬೌಲಿಂಗ್ ಪ್ರದರ್ಶನಕ್ಕೆ ಬೆಲೆ ತೆತ್ತ ಪಾಕ್ ಸೋಲು ಕಾಣಬೇಕಾಯಿತು. ಈ ಫಲಿತಾಂಶ ಪಾಕ್​ನ ಹಾಲಿ ಆಟಗಾರರೊಂದಿಗೆ ಮಾಜಿ ಆಟಗಾರರಿಗೂ ಅಚ್ಚರಿ ತಂದಿದೆ. ಈ ಬಗ್ಗೆ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್ ಟ್ವಿಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಫಲಿತಾಂಶದ ನಂತರ ಅಖ್ತರ್‌ ಅವರು ‘ಛಿದ್ರ ಹೃದಯ’ದ ಇಮೋಜಿಯನ್ನು ತನ್ನ ಟ್ವಿಟರ್ ಖಾತೆಯಲ್ಲಿ ಬೇಸರದಿಂದ ಹಂಚಿಕೊಂಡಿದ್ದಾರೆ. ಅಖ್ತರ್ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಇದು ‘ಕರ್ಮ’ ಎಂದು ರೀ ಟ್ವೀಟ್ ಮಾಡಿದ್ದಾರೆ. ‘ಸಾರಿ ಬ್ರದರ್‌, ಇದನ್ನೇ ಕರ್ಮ ಎನ್ನುವುದು…’ ಎಂದು ಶಮಿ ರಿಪ್ಲೇ ಮಾಡಿದ್ದಾರೆ.

ಇದನ್ನೂ ಓದಿ
T20 World Cup: ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದ ಸ್ಯಾಮ್ ಕರನ್; ಕೊಹ್ಲಿ ದಾಖಲೆ ಪುಡಿಗಟ್ಟಿದ ಆಂಗ್ಲ ವೇಗಿ!
T20 World Cup: ಧೋನಿ ಟು ಬಟ್ಲರ್; ಟಿ20 ವಿಶ್ವಕಪ್ ಗೆದ್ದಿರುವ 7 ಚಾಂಪಿಯನ್ ತಂಡಗಳ ನಾಯಕರಿವರು
ಚಾಂಪಿಯನ್ ಇಂಗ್ಲೆಂಡ್​ಗೆ ಸಿಕ್ಕಿದ್ದು 14 ಕೋಟಿ! ಸೇಮಿಸ್ ಸೋತ ಭಾರತದ ಖಜಾನೆಗೆ ಸೇರಿದ್ದೆಷ್ಟು..?
ಕಿಂಗ್ ಕೊಹ್ಲಿ ನಂ.1.. ಟಾಪ್ 3ರಲ್ಲಿ ಸೂರ್ಯ! ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರಿವರು

 

ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಒಂದೇ ಒಂದು ವಿಕೆಟನ್ನೂ ಪಡೆಯದೇ ಸೋತ ಭಾರತವನ್ನು ಅಖ್ತರ್ ಲೇವಡಿ ಮಾಡಿದ್ದರು. ಇದಕ್ಕೀಗ ಶಮಿ ತಿರುಗೇಟು ನೀಡಿದ್ದಾರೆ. ಕೇವಲ ಶಮಿ ಮಾತ್ರವಲ್ಲದೆ ಈ ಪೋಸ್ಟ್​ಗೆ ತರಹೇವಾರಿ ಕಮೆಂಟ್​ಗಳು ಬಂದಿದ್ದು, ಶೋಯೆಬ್​ ಬೆವರಿಳಿಸಿದ್ದಾರೆ. ಆಟದಲ್ಲಿ ಸೋಲು ಗೆಲುವು ಸಹಜ. ಅದನ್ನು ಸ್ಫೂರ್ತಿದಾಯಕವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ, ಈ ಹಿಂದೆ ಪಾಕಿಸ್ತಾನ ಭಾರತದ ಎದುರು ಹೀನಾಯ ಆಟವಾಡಿದ ಬಗ್ಗೆಯೂ ಕಮೆಂಟ್​ ಮಾಡಲಾಗಿದೆ. ಸದ್ಯ ಅಖ್ತರ್ ಅವರ ಪೋಸ್ಟ್ ಕುರಿತು ಶಮಿ ಅವರ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಎಮ್​ಸಿಜಿಯಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಬಿಗುವಿನ ಆಟವಾಡಿದ ಇಂಗ್ಲೆಂಡ್​, ಅದೃಷ್ಟದ ಮೂಲಕ ಅಂತಿಮ ಸುತ್ತಿಗೆ ಬಂದಿರುವ ಪಾಕಿಸ್ತಾನವನ್ನು 8 ವಿಕೆಟ್​ಗೆ 137 ರನ್​ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಇಂಗ್ಲೆಂಡ್​ನ ಡೆತ್​ಓವರ್​ ಸ್ಪೆಷಲಿಸ್ಟ್​ಗಳ ಬಲೆಗೆ ಬಿದ್ದ ಪಾಕಿಸ್ತಾನ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದರು. ತಂಡದ ಸ್ಟಾರ್​ ಬ್ಯಾಟರ್​ಗಳಾದ ಮೊಹಮದ್​ ರಿಜ್ವಾನ್​, ನಾಯಕ ಬಾಬರ್​ ಅಜಮ್ ದೊಡ್ಡ ಇನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ರಿಜ್ವಾನ್​ 15 ರನ್​ ಗಳಿಸಿ ಔಟಾದರೆ ಹ್ಯಾರೀಸ್​ 8 ರನ್​, ಇಫ್ತಿಕಾರ್​ ಅಹ್ಮದ್​ ಸೊನ್ನೆ ಸುತ್ತಿದರು. ಬಾಬರ್​ ನಿಧಾನಗತಿಯಲ್ಲಿ ಬ್ಯಾಟ್​ ಮಾಡಿ 28 ಎಸೆತಗಳಲ್ಲಿ 32 ರನ್​ ಗಳಿಸಿ ಔಟಾದರು. ಶಾನ್​ ಮಸೂದ್​ ಉತ್ತಮ ಬ್ಯಾಟಿಂಗ್​ ನಿಭಾಯಿಸಿ 28 ಸೆತಗಳಲ್ಲಿ 38 ರನ್​ ಮಾಡಿ ವಿಕೆಟ್​ ನೀಡಿದರು. ಇಂಗ್ಲೆಂಡ್​ ಪರ ಸ್ಯಾಮ್ ಕುರ್ರನ್ 4 ಓವರ್​ಗಳಲ್ಲಿ 12 ರನ್​ ನೀಡಿ ಪ್ರಮುಖ 3 ವಿಕೆಟ್​ ಕಿತ್ತರು.

ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್​ಗೆ ಆಫ್ರಿದಿ ಆರಂಭದಲ್ಲೇ ಪೆಟ್ಟು ನೀಡಿದರು. ಕಳೆದ ಪಂದ್ಯದ ಹೀರೋ ಅಲೆಕ್ಸ್​ ಹೇಲ್ಸ್​ 1 ರನ್​ಗೆ ಕ್ಲೀನ್​ ಬೌಲ್ಡ್ ಆದರು. ನಾಯಕ ಜೋಸ್​ ಬಟ್ಲರ್​ 26, ಫಿಲಿಪ್​ ಸಾಲ್ಟ್​ 10 ಹ್ಯಾರಿ ಬ್ರೂಕ್ಸ್​ 20, ಮೊಯೀನ್​ ಅಲಿ 19 ರನ್​ ಗಳಿಸಿದರು. ಆದರೆ, ಫೈನಲ್​ ಪಂದ್ಯದಲ್ಲಿ ತನ್ನ ಘನತೆಗೆ ತಕ್ಕಂತೆ ಆಡಿದ ಬೆನ್ ಸ್ಟೋಕ್ಸ್​ 5 ಬೌಂಡರಿ 1 ಸಿಕ್ಸರ್​ ಸಮೇತ ಹೋರಾಟ ನಡೆಸಿ ಔಟಾಗದೇ 52 ರನ್​ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇಂಗ್ಲೆಂಡ್​ ಒಂದು ಓವರ್​ ಬಾಕಿ ಇರುವಂತೆಯೇ 5 ವಿಕೆಟ್​ಗೆ 138 ರನ್​ ಗಳಿಸಿ ಜಯಭೇರಿ ಬಾರಿಸಿತು. ಟಿ20 ವಿಶ್ವಕಪ್​ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಸ್ಯಾಮ್​ ಕುರ್ರನ್​ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡರು.