T20 World Cup: ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದ ಸ್ಯಾಮ್ ಕರನ್; ಕೊಹ್ಲಿ ದಾಖಲೆ ಪುಡಿಗಟ್ಟಿದ ಆಂಗ್ಲ ವೇಗಿ!
T20 World Cup 2022: 20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಖ್ಯಾತಿಗೂ ಕರನ್ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ (ವಯಸ್ಸು 25) ಹೆಸರಿನಲ್ಲಿತ್ತು.
2022ರ ಟಿ20 ವಿಶ್ವಕಪ್ಗೆ (T20 World Cup 2022) ಅದ್ಧೂರಿ ತೆರೆಬಿದ್ದಿದೆ. ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಬಾಬರ್ ನಾಯಕತ್ವದ ಪಾಕಿಸ್ತಾನವನ್ನು ಮಣಿಸುವುದರೊಂದಿಗೆ ಎರಡನೇ ಬಾರಿಗೆ ಚುಟುಕು ಮಾದರಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ವೇಗಿ ಸ್ಯಾಮ್ ಕರನ್ ದಾಳಿಗೆ ನಲುಗಿ ನಿಗದಿತ 20 ಓವರ್‌ಗಳಲ್ಲಿ ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು, 6 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ (Ben Stokes) ಅಜೇಯ 52 ರನ್ ಗಳಿಸಿದರೆ ಬೌಲಿಂಗ್ನಲ್ಲಿ ಮಿಂಚಿದ ಸ್ಯಾಮ್ ಕರನ್ (Sam Curran) 4 ಓವರ್‌ಗಳಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದರು. ಈ ಅದ್ಭುತ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವುದರೊಂದಿಗೆ ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದಕ್ಕಾಗಿ ಕರನ್ಗೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯೂ ಲಭಿಸಿತು.
ಇಡೀ ಟೂರ್ನಿಯಲ್ಲಿ ಇಂಗ್ಲೆಂಡ್ ಪರ ಅದ್ಭುತ ಪ್ರದರ್ಶನ ನೀಡಿದ ಎಡಗೈ ವೇಗಿ ಸ್ಯಾಮ್ ಕರನ್ ಆಡಿದ ಮೊದಲ ಪಂದ್ಯದಲ್ಲಿಯೇ 5 ವಿಕೆಟ್ ಪಡೆಯುವ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸಿದರು. ಅಲ್ಲದೆ ಮೆಲ್ಬೋರ್ನ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕರನ್ 12 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಒಟ್ಟಾರೆಯಾಗಿ ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಚುಟುಕು ವಿಶ್ವ ಸಮರದಲ್ಲಿ ಕರನ್ ಪ್ರಮುಖ 13 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನದ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕರನ್ ನೋಂದಾಯಿಸಿದ್ದಾರೆ.
ಕರನ್ಗೆ 4 ವಿಕೆಟ್
ಇಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಬ್ಯಾಟ್ಸ್ಮನ್ಗಳಿಗೆ ಆಂಗ್ಲ ಬೌಲರ್ಗಳು ದುಸ್ವಪ್ನದಂತೆ ಕಾಡಿದರು. ಇದರ ಫಲವಾಗಿ ಇಡೀ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ ತಂಡ ಒಟ್ಟು 48 ಬಾಲ್ಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಅಲ್ಲದೆ ಪಾಕ್ ಇನ್ನಿಂಗ್ಸ್ನಲ್ಲಿ ಉದುರಿದ 8 ವಿಕೆಟ್ಗಳಲ್ಲಿ ಪ್ರಮುಖ 6 ವಿಕೆಟ್ಗಳನ್ನು ವೇಗಿಗಳೇ ಪಡೆದರು. ಈ ಪಂದ್ಯದಲ್ಲಿ ಕರನ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 12 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕರನ್ ಮೊದಲಿಗೆ ಪಾಕ್ ತಂಡದ ಆರಂಭಿಕ ಮೊಹಮ್ಮದ್ ರಿಜ್ವಾನ್ ವಿಕೆಟ್ ಪಡೆದರೆ, ನಂತರ ತಂಡದ ಪರ ಗರಿಷ್ಠ 38 ರನ್ ಗಳಿಸಿದ ಬ್ಯಾಟ್ಸ್‌ಮನ್ ಶಾನ್ ಮಸೂದ್ ಅವರನ್ನು ಬಲಿ ಪಡೆದರು. ಹಾಗೆಯೇ 3ನೇ ವಿಕೆಟ್ ರೂಪದಲ್ಲಿ 5 ರನ್ ಗಳಿಸಿದ್ದ ಮೊಹಮ್ಮದ್ ನವಾಜ್ಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಕರನ್ ಯಶಸ್ವಿಯಾದರು.
ಅತ್ಯಂತ ಕಿರಿಯ ಕ್ರಿಕೆಟಿಗ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಖ್ಯಾತಿಗೂ ಕರನ್ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ (ವಯಸ್ಸು 25) ಹೆಸರಿನಲ್ಲಿತ್ತು. ಪಂದ್ಯದ ನಂತರ ಮಾತನಾಡಿದ ಕರನ್, ಬೆನ್ ಸ್ಟೋಕ್ಸ್‌ಗೆ ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ಎಂದರು. ಅಲ್ಲದೆ ಸ್ಟೋಕ್ಸ್ ಆಡಿದ ರೀತಿ, ಫೈನಲ್‌ನಲ್ಲಿ ಅವರ ಅರ್ಧಶತಕ, ಜೊತೆಗೆ ಇಡೀ ಟೂರ್ನಿಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ ಹಾಗಾಗಿ ನಾನು ಈ ಪ್ರಶಸ್ತಿಗೆ ಅರ್ಹನಲ್ಲ ಎಂದ ಭಾವಿಸುತ್ತೇನೆ ಎಂದು ಕರನ್ ಹೇಳಿಕೊಂಡಿದ್ದಾರೆ.
ಭಾರತೀಯ ಪ್ರೇಕ್ಷಕರಿಗೆ ನಿರಾಸೆ
ಸ್ಯಾಮ್ ಕರನ್ಗೆ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಸಿಕ್ಕಿರುವುದು ಭಾರತೀಯ ಪ್ರೇಕ್ಷಕರಿಗೆ ಸಾಕಷ್ಟು ನಿರಾಸೆ ಮೂಡಿಸಿದೆ. ಫೈನಲ್‌ಗೆ ತಲುಪದಿದ್ದರೂ, ವಿರಾಟ್ ಕೊಹ್ಲಿ ಪಂದ್ಯಾವಳಿಯುದ್ದಕ್ಕೂ ಉತ್ತಮ ಆಟ ಪ್ರದರ್ಶಿಸಿದ್ದರು. ಹೀಗಾಗಿ ಕೊಹ್ಲಿಗೆ ಈ ಬಾರಿಯ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಸಿಗುವ ಭರವಸೆಯಲ್ಲಿ ಅಭಿಮಾನಿಗಳಿದ್ದರು.
Published On - 8:03 pm, Sun, 13 November 22