ಭಾರತ ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ (Mohammed Shami) ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಮತ್ತಷ್ಟು ವಿಳಂಬವಾಗಲಿದೆ. ಇದಕ್ಕೆ ಮುಖ್ಯ ಕಾರಣ ಅವರು ಚಿಕಿತ್ಸೆಗಾಗಿ ಲಂಡನ್‌ಗೆ ತೆರಳುತ್ತಿರುವುದು. ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಶಮಿ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿರಲಿಲ್ಲ.
ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರನ್ನು ಪರಿಗಣಿಸಲಾಗಿತ್ತಾದರೂ, ಸಂಪೂರ್ಣ ಗುಣಮುಖರಾಗದ ಕಾರಣ ತಂಡದಿಂದ ಕೈ ಬಿಡಲಾಗಿತ್ತು. ಅಲ್ಲದೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಆಯ್ಕೆ ಮಾಡಲಾದ ಭಾರತ ತಂಡಲದಲ್ಲೂ ಅವರು ಕಾಣಿಸಿಕೊಂಡಿಲ್ಲ.
ಇದಾಗ್ಯೂ 3ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಅವರು ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಶಮಿ ಸಂಪೂರ್ಣ ಫಿಟ್ನೆಸ್ ಸಾಧಿಸಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಚಿಕಿತ್ಸೆ ಪಡೆಯುತ್ತಿರುವ ಶಮಿ ಎನ್‌ಸಿಎಯ ಸ್ಪೋರ್ಟ್ಸ್ ಸೈನ್ಸ್ ಮುಖ್ಯಸ್ಥ ನಿತಿನ್ ಪಟೇಲ್ ಅವರೊಂದಿಗೆ ಲಂಡನ್‌ಗೆ ತೆರಳಲಿದ್ದಾರೆ. ಅಲ್ಲದೆ ನುರಿತ ತಜ್ಞರಿಂದ ಅವರಿಗೆ ಚಿಕಿತ್ಸೆಗೆ ಕೊಡಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಅವರು ಭಾರತ ತಂಡವನ್ನು ಕೂಡಿಕೊಳ್ಳುವುದು ಅನುಮಾನ ಎನ್ನಲಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಇದೇ ತಿಂಗಳ 25 ರಿಂದ ಶುರುವಾಗಲಿದೆ. 5 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಇನ್ನು 2ನೇ ಪಂದ್ಯವು ವಿಶಾಖಪಟ್ಟಣಂನಲ್ಲಿರುವ ವೈಎಸ್ಆರ್ ಸ್ಟೇಡಿಯಂನಲ್ಲಿ ನಡೆದರೆ, 3ನೇ ಪಂದ್ಯವು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ಜರುಗಲಿದೆ. ನಾಲ್ಕನೇ ಟೆಸ್ಟ್ ಪಂದವು ರಾಂಚಿಯ ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೊನೆಯ ಟೆಸ್ಟ್ ಪಂದ್ಯಕ್ಕೆ ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ಉಭಯ ತಂಡಗಳು ಈ ಕೆಳಗಿನಂತಿದೆ.
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ
ಭಾರತ ಟೆಸ್ಟ್ ತಂಡ (ಮೊದಲೆರಡು ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್ ಕೀಪರ್), ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೇಲ್ (ವಿಕೇಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.