ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ ಆಗಿದ್ದಾರೆ. ಅಲ್ಲದೆ ಮತ್ತೆ ಬೌಲಿಂಗ್ ಅಭ್ಯಾಸವನ್ನು ಸಹ ಶುರು ಮಾಡಿದ್ದಾರೆ. ಇದಾಗ್ಯೂ ಅವರ ಕಂಬ್ಯಾಕ್ ಮಾತ್ರ ವಿಳಂಬವಾಗಲಿದೆ. ಏಕೆಂದರೆ ಭಾರತ ತಂಡದ ಮುಂಬರುವ ಸರಣಿಗೂ ಮುನ್ನ ಶಮಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿದೆ. ಇದಕ್ಕಾಗಿ ಅವರು ಕೆಲ ದೇಶೀಯ ಪಂದ್ಯಗಳನ್ನಾಡುವುದು ಅನಿವಾರ್ಯ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಮೊಹಮ್ಮದ್ ಶಮಿ ಎರಡು-ಮೂರು ರಣಜಿ ಪಂದ್ಯಗಳನ್ನಾಡಲಿದ್ದಾರೆ. ಈ ವೇಳೆ ಅವರ ಫಿಟ್ನೆಸ್ ಮೇಲೆ ಆಯ್ಕೆ ಸಮಿತಿ ನಿಗಾ ಇಡಲಿದ್ದು, ಆ ಬಳಿಕವಷ್ಟೇ ಅವರನ್ನು ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಸದ್ಯ ಪೂರ್ಣ ರನ್-ಅಪ್‌ನೊಂದಿಗೆ ಬೌಲಿಂಗ್ ಮಾಡಲು ಆರಂಭಿಸಿರುವ ಶಮಿ ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದು, ಈ ಮೂಲಕ ದೀರ್ಘವಧಿಯವರೆಗೆ ಓವರ್ ಎಸೆಯುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಮುನ್ನ ಅವರು ಕನಿಷ್ಠ 20 ರಿಂದ 25 ಓವರ್ಗಳನ್ನು ಬೌಲ್ ಮಾಡಿ ತಮ್ಮ ಸಾಮರ್ಥ್ಯವನ್ನು ತೆರೆದಿಡಬೇಕಾಗುತ್ತದೆ. ಹೀಗಾಗಿಯೇ ಇದೀಗ ಬೆಂಗಳೂರಿನ ಎನ್ಸಿಎ ಮೈದಾನದಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ಮೊಹಮ್ಮದ್ ಶಮಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕು. ಇದಕ್ಕಾಗಿ ಒಂದು ತಿಂಗಳ ಅವಧಿಯಿದ್ದು, ಅದಕ್ಕೂ ಮುನ್ನ ಅವರು ಬಂಗಾಳ ಪರ ರಣಜಿ ಪಂದ್ಯವನ್ನಾಡಲಿದ್ದಾರೆ.
ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಅವರು ರಣಜಿ ಪಂದ್ಯವಾಡಲು ಸಾಧ್ಯವಾಗದಿದ್ದರೆ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಕೂಡ ಹೊರಗುಳಿಯುವುದು ಖಚಿತ. ಅಲ್ಲದೆ ಅವರ ಕಂಬ್ಯಾಕ್ಗಾಗಿ ಚಾಂಪಿಯನ್ಸ್ ಟ್ರೋಫಿಯವರೆಗೆ ಕಾಯಬೇಕಾಗುತ್ತದೆ.
ಏಕದಿನ ವಿಶ್ವಕಪ್ 2023 ರ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಅವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ.
ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿತ್ತು. ಅದರಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಐಪಿಎಲ್ನಲ್ಲೂ ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ: IPL 2025: ವಿರಾಟ್ ಕೊಹ್ಲಿ ಖಚಿತ: ಉಳಿದವರೇ RCB ತಂಡದ ದೊಡ್ಡ ಚಿಂತೆ
ಇದೀಗ ಮೊಹಮ್ಮದ್ ಶಮಿ ಫಿಟ್ ಆಗಿದ್ದು, ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.