ಆಸ್ಟ್ರೇಲಿಯಾ ಸರಣಿಗೆ ಭಾರತ ಎ ತಂಡ ಪ್ರಕಟ: ಕನ್ನಡಿಗ ಆಯ್ಕೆ
India A Squad: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವೆ 2 ಪಂದ್ಯಗಳ ಸರಣಿ ನಡೆಯಲಿದ್ದು, ಈ ಸರಣಿಗಾಗಿ ತಂಡವನ್ನು ಘೋಷಿಸಲಾಗಿದೆ. ಅಕ್ಟೋಬರ್ 31 ರಿಂದ ಶುರುವಾಗಲಿರುವ ಈ ಸರಣಿಗಾಗಿ ಒಟ್ಟು 15 ಆಟಗಾರರು ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಆಟಗಾರರು ರಣಜಿ ಟೂರ್ನಿಯನ್ನು ಅರ್ಧದಲ್ಲೇ ತೊರೆಯಲಿದ್ದಾರೆ.
ಅಕ್ಟೋಬರ್ 31 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಸರಣಿಗಾಗಿ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದು, ಉಪನಾಯಕನಾಗಿ ಅಭಿಮನ್ಯು ಈಶ್ವರನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಕಿಶನ್ ಅವರನ್ನು ಆ ಬಳಿಕ ಬಿಸಿಸಿಐನ ಕೇಂದ್ರೀಯ ಒಪ್ಪಂದದಿಂದ ಕೈ ಬಿಡಲಾಗಿತ್ತು. ಅಲ್ಲದೆ ಅವರನ್ನು ಯಾವುದೇ ಸರಣಿಗೂ ಆಯ್ಕೆ ಮಾಡಲಾಗಿರಲಿಲ್ಲ. ಇದೀಗ ಒಂದು ವರ್ಷದ ಬಳಿಕ ಮತ್ತೆ ಪ್ರಮುಖ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಇಶಾನ್ ಕಿಶನ್ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.
ಹಾಗೆಯೇ ಈ ತಂಡದಲ್ಲಿ ಕರ್ನಾಟಕದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಕೂಡ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಪಡಿಕ್ಕಲ್ ಇದೀಗ ವಿದೇಶಿ ಸರಣಿಗೆ ಆಯ್ಕೆಯಾಗಿದ್ದಾರೆ. ಅದರಂತೆ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಲ್ಲಿ ಮಿಂಚುವ ಮೂಲಕ ಮತ್ತೆ ಭಾರತ ತಂಡದ ಕದ ತಟ್ಟುವ ಇರಾದೆಯಲ್ಲಿದ್ದಾರೆ.
ಇನ್ನು ಈ ತಂಡದಲ್ಲಿ ಯುವ ಆಟಗಾರರಾದ ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಪೊರೆಲ್ ಕಾಣಿಸಿಕೊಂಡಿದ್ದು, ಇವರೊಂದಿಗೆ ಅನುಭವಿ ಆಟಗಾರರಾದ ಖಲೀಲ್ ಅಹ್ಮದ್ ಹಾಗೂ ಮುಖೇಶ್ ಕುಮಾರ್ ಸಹ ಸ್ಥಾನಗಿಟ್ಟಿಸಿದ್ದಾರೆ. ಅದರಂತೆ ಆಸ್ಟ್ರೇಲಿಯಾ ಸರಣಿಗೆ ಭಾರತ ಎ ತಂಡ ಈ ಕೆಳಗಿನಂತಿದೆ…
ಭಾರತ ಎ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ರಿಕಿ ಭುಯಿ, ಬಾಬಾ ಇಂದ್ರಜಿತ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಯಶ್ ದಯಾಳ್, ನವದೀಪ್ ಸೈನಿ, ಮಾನವ್ ಸುತಾರ್, ತನುಷ್ ಕೋಟ್ಯಾನ್.
ಭಾರತ ಎ vs ಆಸ್ಟ್ರೇಲಿಯಾ ಎ ಸರಣಿ ವೇಳಾಪಟ್ಟಿ:
ಅಕ್ಟೋಬರ್ 31 ರಿಂದ ನವೆಂಬರ್ 3: ಮೊದಲ ಪ್ರಥಮ ದರ್ಜೆ ಪಂದ್ಯ – GBRA ಸ್ಟೇಡಿಯಂ, ಮ್ಯಾಕೆ.
ನವೆಂಬರ್ 7 ರಿಂದ 10: ಎರಡನೇ ಪ್ರಥಮ ದರ್ಜೆ ಪಂದ್ಯ – MCG ಸ್ಡೇಡಿಯಂ, ಮೆಲ್ಬೋರ್ನ್.
ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?
ಈ ಎರಡು ಪಂದ್ಯಗಳ ಬಳಿಕ ಭಾರತ ಎ ತಂಡವು ಟೀಮ್ ಇಂಡಿಯಾ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಅಂದರೆ ಭಾರತ ತಂಡವು ನವೆಂಬರ್ 22 ರಿಂದ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿ ಆಡಲಿದ್ದು, ಅದಕ್ಕೂ ಮುನ್ನ ಪರ್ತ್ನಲ್ಲಿ ಭಾರತ ಎ ಮತ್ತು ಟೀಮ್ ಇಂಡಿಯಾ ಒಂದು ಅಭ್ಯಾಸ ಪಂದ್ಯವನ್ನಾಡಲಿದೆ.