Mohammed Siraj Injury: ಭಾರತಕ್ಕೆ ಶಾಕ್ ಮೇಲೆ ಶಾಕ್: ಇಂದು ಈ ಆಟಗಾರ ಕಣಕ್ಕಿಳಿಯುವುದು ಅನುಮಾನ

| Updated By: Vinay Bhat

Updated on: Jan 04, 2022 | 9:31 AM

South Africa vs India: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ಜೊಹಾನ್ಸ್‌ಬರ್ಗ್​ನ ವಾಂಡರರ್ಸ್​ ಸ್ಟೇಡಿಯಂ ವೇಗಿಗಳ ಪಾಲಿನ ಸ್ವರ್ಗವಾಗಿದೆ. ಆದರೆ, ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ವೇಳೆ ಗಾಯ ಮಾಡಿಕೊಂಡಿದ್ದಾರೆ. ಇವರು ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.

Mohammed Siraj Injury: ಭಾರತಕ್ಕೆ ಶಾಕ್ ಮೇಲೆ ಶಾಕ್: ಇಂದು ಈ ಆಟಗಾರ ಕಣಕ್ಕಿಳಿಯುವುದು ಅನುಮಾನ
Mohammed Siraj Injury IND vs SA
Follow us on

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಭಾರತಕ್ಕೆ (India vs South Africa) ಕಠಿಣವಾಗುವಂತೆ ಗೋಚರಿಸುತ್ತಿದೆ. ಪಂದ್ಯ ಶುರುವಾಗುವುದಕ್ಕೂ ಮುನ್ನ ವಿರಾಟ್ ಕೊಹ್ಲಿ (Virat Kohli Injury) ಗಾಯಕ್ಕೆ ತುತ್ತಾದ ಪರಿಣಾಮ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ಕೆಎಲ್ ರಾಹುಲ್ (KL Rahul) ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಕೊಹ್ಲಿ ಜಾಗದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಆಡಿಸುವ ಎಂದರೆ ಅವರಿಗೆ ಆರೋಗ್ಯದ ಸಮಸ್ಯೆ ಕಂಡುಬಂತು. ಇವೆಲ್ಲದರ ನಡುವೆ ಟೀಮ್ ಇಂಡಿಯಾ (Team India) ಮೊದಲ ಬ್ಯಾಟ್ ಮಾಡಿ ನಿರೀಕ್ಷೆಗೆ ತಕ್ಕ ಪ್ರದರ್ಶನ ಕೂಡ ನೀಡಲಿಲ್ಲ. ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ಸಂಕಷ್ಟದಲ್ಲಿದೆ. ಹೀಗಿರುವಾಗ ಇದೀಗ ಭಾರತಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ವೇಗಿಗಳ ಸ್ವರ್ಗವಾಗಿರುವ ಜೊಹಾನ್ಸ್‌ಬರ್ಗ್​ನ ವಾಂಡರರ್ಸ್​ನಲ್ಲಿ (Wanderers, Johannesburg) ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ (Mohammed Siraj Injury) ಬೌಲಿಂಗ್ ವೇಳೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಇವರು ಅರ್ಧದಲ್ಲೇ ಬೌಲಿಂಗ್ ಬಿಟ್ಟು ಮೈದಾನ ತೊರೆದರು. ಎರಡನೇ ದಿನ ಇವರು ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.

ಭಾರತ ಮೊದಲ ದಿನವೇ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ದಕ್ಷಿಣ ಆಫ್ರಿಕಾಕ್ಕೆ ಬೌಲಿಂಗ್ ಮಾಡುತ್ತಿರುವಾಗ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್‌ ಸಿರಾಜ್‌ ಅವರ ಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ನಾಲ್ಕನೇ ಓವರ್‌ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಟೀಮ್ ಇಂಡಿಯಾ ಫಿಸಿಯೋ ಮೈದಾನಕ್ಕೆ ಆಗಮಿಸಿ ಸಿರಾಜ್​ ಅವರನ್ನು ಡ್ರೆಸ್ಸಿಂಗ್ ಕೊಠಡಿಗೆ ಕರೆದೊಯ್ದರು. ನಂತರ ಕೊನೆಯ ಎಸೆತವನ್ನು ಶಾರ್ದುಲ್‌ ಠಾಕೂರ್‌ ಪೂರ್ಣಗೊಳಿಸಿದರು.

 

ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ನಾಯಕ ವಿರಾಟ್‌ ಕೊಹ್ಲಿ ಬೆನ್ನು ನೋವಿನಿಂದಾಗಿ ಹೊರಗುಳಿದಿದ್ದಾರೆ. ಇವರ ಜೊತೆ ಹೊಟ್ಟೆ ನೋವಿನ ಸಮಸ್ಯೆಯಿಂದ ಶ್ರೇಯಸ್‌ ಅಯ್ಯರ್‌ ಕೂಡ ಎರಡನೇ ಪಂದ್ಯದ ಆಯ್ಕೆಗೆ ಲಭ್ಯರಿರಲಿಲ್ಲ. ಇದೀಗ ಇವರ ಪಟ್ಟಿಗೆ ಮೊಹಮ್ಮದ್‌ ಸಿರಾಜ್‌ ಸೇರ್ಪಡೆಯಾಗಿದ್ದಾರೆ. ಅಶ್ವಿನ್ ಇಂಜುರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಆದರೆ, ಆರ್. ಅಶ್ವಿನ್ ಮಾತನಾಡಿದ್ದು, ಸಿರಾಜ್ ಎರಡನೇ ದಿನದಾಟದ ವೇಳೆಗೆ ಕಮ್​ಬ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂ ಆರಂಭವಾಗಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಮೊದಲ ದಿನವೇ ಸಾಕಷ್ಟು ವಿಚಾರಗಳಿಗೆ ಕುತೂಹಲ ಕೆರಳಿಸಿತು. ಖಾಯಂ ನಾಯಕ ವಿರಾಟ್ ಕೊಹ್ಲಿ ಇಂಜುರಿಯಿಂದ ಹೊರಗುಳಿದ ಪರಿಣಾಮ ಕೆಎಲ್ ರಾಹುಲ್ ಕ್ಯಾಪ್ಟನ್ ಜವಾಬ್ದಾರಿ ಹೊರಬೇಕಾಯಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಯಕನ ಹೊರತಾಗಿ ಉಳಿದ ಬ್ಯಾಟರ್​ಗಳು ನಿರೀಕ್ಷೆಗೆ ತಕ್ಕಂತೆ ಬ್ಯಾಟ ಮಾಡಲಿಲ್ಲ. ಆರ್. ಅಶ್ವಿನ್ ಕೊಂಚ ಬ್ಯಾಟ್ ಬೀಸಿದ ಪರಿಣಾಮ ತಂಡದ ಮೊತ್ತ 200ರ ಗಡಿ ದಾಟಿತು ಎನ್ನಬಹುದು.

ಟೀಮ್ ಇಂಡಿಯಾ 202 ರನ್​​ಗೆ ಸರ್ವಪತನ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ. 167 ರನ್​ಗಳ ಹಿನ್ನಡೆಯಲ್ಲಿದೆ. ವಾಂಡರರ್ಸ್ ಪಿಚ್ ಇಂದಿನ ಎರಡನೇ ದಿನ ವೇಗಿಗಳಿಗೆ ಮತ್ತಷ್ಟು ಸಹಕಾರ ನೀಡಲಿದೆ. ಹೀಗಾಗಿ ಇಂದಿನ ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ.

South Africa vs India: ವಾವ್ ವಾಂಡರರ್ಸ್ ಪಿಚ್: ಮತ್ತಷ್ಟು ರೋಚಕತೆ ಪಡೆಯಲಿದೆ ಇಂದಿನ ಎರಡನೇ ದಿನದಾಟ

(Mohammed Siraj have suffered a hamstring injury and he doubtful for India vs South Africa second test Day 2)

Published On - 8:29 am, Tue, 4 January 22