Mohammed Siraj: ಮೊಹಮ್ಮದ್ ಸಿರಾಜ್ಗೆ ಅದ್ಧೂರಿ ಸ್ವಾಗತ
T20 World Cup 2024: ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ 176 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 7 ರನ್ಗಳ ರೋಚಕ ಜಯ ಸಾಧಿಸಿ ಟೀಮ್ ಇಂಡಿಯಾ 2ನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ವಿಶ್ವಕಪ್ನಲ್ಲಿ ಭಾರತದ ಪರ ಆಡಿದ ಸಿರಾಜ್ ಅವರಿಗೆ ಇದೀಗ ಹೈದರಾಬಾದ್ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ.
ಟಿ20 ವಿಶ್ವಕಪ್ ಗೆದ್ದು ತವರಿಗೆ ಆಗಮಿಸಿರುವ ಮೊಹಮ್ಮದ್ ಸಿರಾಜ್ಗೆ (Mohammed Siraj) ಅದ್ಧೂರಿ ಸ್ವಾಗತ ನೀಡಲಾಗಿದೆ. ಮುಂಬೈನಲ್ಲಿ ವಿಜಯೋತ್ಸವ ಆಚರಿಸಿ ಹೈದರಾಬಾದ್ಗೆ ಬಂದಿಳಿದ ಸಿರಾಜ್ ಅವರನ್ನು ಕಾರಿನಲ್ಲಿ ನಿಲ್ಲಿಸಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಅಭಿಮಾನಿಗಳು ಟೀಮ್ ಇಂಡಿಯಾ ಪರ ಹಾಗೂ ಸಿರಾಜ್ಗೆ ಜೈಕಾರ ಹಾಕಿದರು. ಇದೀಗ ಮೊಹಮ್ಮದ್ ಸಿರಾಜ್ಗೆ ನೀಡಲಾದ ಅದ್ಧೂರಿ ಸ್ವಾಗತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಮೊಹಮ್ಮದ್ ಸಿರಾಜ್ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ನ್ಯೂಯಾರ್ಕ್ ಪಿಚ್ನಲ್ಲಿ ಆಡಲಾದ ಮೂರು ಪಂದ್ಯಗಳಲ್ಲೂ ಸಿರಾಜ್ ಅವಕಾಶ ಪಡೆದಿದ್ದರು. ಈ ವೇಳೆ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ 7 ರನ್ ಬಾರಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದ್ದರು. ಅಂತಿಮವಾಗಿ ಈ ಪಂದ್ಯದಲ್ಲಿ ಭಾರತ ತಂಡ 6 ರನ್ಗಳಿಂದ ರೋಚಕ ಜಯ ಸಾಧಿಸಿತ್ತು.
ಇನ್ನು ಮೂರು ಪಂದ್ಯಗಳಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದ ಸಿರಾಜ್, ಎರಡು ಬಾರಿ ಡ್ರೆಸ್ಸಿಂಗ್ ರೂಮ್ನಲ್ಲಿ ನೀಡಲಾಗುವ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದಿದ್ದರು. ಇದೀಗ ವಿಶ್ವಕಪ್ ಗೆದ್ದ ತಂಡದ ಭಾಗವಾಗಿರುವ ಹೈದರಾಬಾದ್ ಆಟಗಾರನಿಗೆ ತವರಿನ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದ್ದಾರೆ.
ಸದ್ಯ ಝಿಂಬಾಬ್ವೆ ಸರಣಿಯಿಂದ ಹೊರಗುಳಿದಿರುವ ಟೀಮ್ ಇಂಡಿಯಾ ಮೊಹಮ್ಮದ್ ಸಿರಾಜ್ ಇದೇ ತಿಂಗಳ ಅಂತ್ಯದಲ್ಲಿ ಶುರುವಾಗಲಿರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.