
14 ವರ್ಷಗಳ ಟೆಸ್ಟ್ ಕೆರಿಯರ್ಗೆ ವಿರಾಟ್ ಕೊಹ್ಲಿ (Virat Kohli) ವಿದಾಯ ಹೇಳಿದ್ದಾರೆ. 2011 ರಲ್ಲಿ ಶುರುವಾದ ತಮ್ಮ ಕೆರಿಯರ್ನಲ್ಲಿ ಕಿಂಗ್ ಕೊಹ್ಲಿ ಹಲವು ಆಟಗಾರರಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಂತವರಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಇದೀಗ ವಿರಾಟ್ ಕೊಹ್ಲಿಯ ನಿವೃತ್ತಿಯನ್ನು ಸಿರಾಜ್ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ನೋವಿನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಗೆ ಧನ್ಯವಾದ ತಿಳಿಸಿ ಬಹಿರಂಗ ಪತ್ರ ಬರೆದಿದ್ದಾರೆ.
ನನ್ನ ಸೂಪರ್ ಹೀರೋಗೆ… ಟೆಸ್ಟ್ ಕ್ರಿಕೆಟ್‌ನಲ್ಲಿ ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ನೀವು ನನ್ನಂತಹ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಿದ್ದೀರಿ. ನಿಮ್ಮ ಸಾಧನೆಗಳನ್ನು ಮತ್ತು ಅದನ್ನು ಮುಂದುವರಿಸುತ್ತೀರಿ ಭಯ್ಯಾ. ನೀವು ಇಲ್ಲದ ಡ್ರೆಸ್ಸಿಂಗ್ ರೂಮ್, ಈ ಹಿಂದಿನಂತೆ ಇರುವುದಿಲ್ಲ.
ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಶುಭ ಹಾರೈಸುತ್ತೇನೆ. ಕಿಂಗ್ ವಿರಾಟ್ ಕೊಹ್ಲಿ ಭಯ್ಯಾ ಎಂದು ಮೊಹಮ್ಮದ್ ಸಿರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತನ್ನನ್ನು ಕೆರಿಯರ್ನ ಉದ್ದಕ್ಕೂ ಬೆಂಬಲಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಸಿರಾಜ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2020 ರಲ್ಲಿ ಮೊಹಮ್ಮದ್ ಸಿರಾಜ್ ಭಾರತ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿ ಕಾಣಿಸಿಕೊಂಡ ಸಿರಾಜ್ ಈವರೆಗೆ ಒಟ್ಟು 36 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 67 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 100 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಅದರಲ್ಲೂ 2021 ರಲ್ಲಿ ಲಾರ್ಡ್ಸ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯವು ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಪಾಲಿಗೆ ಸ್ಮರಣೀಯ. ಏಕೆಂದರೆ ಈ ಪಂದ್ಯದಲ್ಲಿ ಅತ್ಯಧ್ಭುತ ನಾಯಕತ್ವ ಪ್ರದರ್ಶಿಸಿದ್ದ ಕೊಹ್ಲಿ, ಸಿರಾಜ್ ಕಡೆಯಿಂದ ಮಾರಕ ದಾಳಿ ಸಂಘಟಿಸಿದ್ದರು.
ಈ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಬಳಿಸುವ ಮೂಲಕ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ 151 ರನ್ಗಳ ಭರ್ಜರಿ ಜಯ ತಂದುಕೊಟ್ಟಿದ್ದರು. ಇದು ಕಿಂಗ್ ಕೊಹ್ಲಿಯ ನಾಯಕತ್ವದಲ್ಲಿ ಮೂಡಿಬಂದ ಮಿಯಾ ಮ್ಯಾಜಿಕ್ ಎಂದು ಈಗಲೂ ವರ್ಣಿಸಲಾಗುತ್ತದೆ.
ಇದನ್ನೂ ಓದಿ: IPL 2025: PBKS vs DC ನಡುವೆ ಮರು ಪಂದ್ಯ: ಸೋತರೆ 1 ಪಾಯಿಂಟ್ ಮಿಸ್..!
ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಯುಗಾಂತ್ಯವಾಗಿದೆ. ಈ ಯುಗಾಂತ್ಯದ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಭಾವುಕ ಪತ್ರ ಹಂಚಿಕೊಳ್ಳುವ ಮೂಲಕ ತನ್ನ ನೆಚ್ಚಿನ ನಾಯಕನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.