IPL 2025: PBKS vs DC ನಡುವೆ ಮರು ಪಂದ್ಯ: ಸೋತರೆ 1 ಪಾಯಿಂಟ್ ಮಿಸ್..!
PBKS vs DC: ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮೇ 8 ರಂದು ನಡೆಯಬೇಕಿದ್ದ ಪಂದ್ಯವನ್ನು ಮೇ 24 ಕ್ಕೆ ಮುಂದೂಡಲಾಗಿದೆ. ಅಲ್ಲದೆ ಈ ಪಂದ್ಯವನ್ನು ಜೈಪುರದ ಸವಾಯಿ ಮಾನ್ಸಿಂಗ್ ಸ್ಡೇಡಿಯಂನಲ್ಲಿ ಆಯೋಜಿಸಲಿದ್ದಾರೆ. ಈ ಮೂಲಕ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಪಂದ್ಯವನ್ನು ಮರು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
Updated on: May 13, 2025 | 10:55 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಪುನರಾರಂಭಕ್ಕೆ ಡೇಟ್ ಫಿಕ್ಸ್ ಆಗಿದೆ. ಮೇ 8 ರಂದು ಸ್ಥಗಿತಗೊಂಡಿದ್ದ ಪಂದ್ಯಾವಳಿಗೆ ಮೇ 17 ರಂದು ಮತ್ತೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಅದರಂತೆ ಶನಿವಾರದಿಂದ ಐಪಿಎಲ್ ಮತ್ತೆ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಮುಖಾಮುಖಿಯಾಗಲಿದೆ.

ಇನ್ನು ಮೇ 8 ರಂದು ಅರ್ಧದಲ್ಲೇ ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ಆಯೋಜಿಸಲು ನಿರ್ಧರಿಸಲಾಗಿದೆ. ಈ ಪಂದ್ಯವು ಮೇ 24 ರಂದು ನಡೆಯಲಿದ್ದು, ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯವಹಿಸಲಿದೆ.

ಇದಕ್ಕೂ ಮುನ್ನ ಮೇ 8 ರಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 10.1 ಓವರ್ಗಳಲ್ಲಿ 122 ರನ್ ಕಲೆಹಾಕಿತ್ತು. ಈ ಪಂದ್ಯದ ನಡುವೆ ಭಾರತ-ಪಾಕ್ ನಡುವೆ ಯುದ್ಧ ಭೀತಿ ಎದುರಾಗಿದ್ದು, ಹೀಗಾಗಿ ಅರ್ಧದಲ್ಲೇ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಅಲ್ಲದೆ ಈ ಪಂದ್ಯ ಸ್ಥಗಿತಗೊಂಡಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿತ್ತು. ಆದರೆ ಯುದ್ಧ ಭೀತಿ ಹಿನ್ನಲೆ ಪಂದ್ಯ ಸ್ಥಗಿತಗೊಂಡಿದ್ದರಿಂದ, ಮ್ಯಾಚ್ ಅನ್ನು ಮರು ನಿಗದಿ ಮಾಡುವಂತೆ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಮನವಿ ಮಾಡಿದೆ.

ಅದರಂತೆ ಇದೀಗ ಮೇ 24 ರಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮತ್ತೆ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 2 ಅಂಕಗಳು ಸಿಗುವುದು ಖಚಿತ. ಆದರೆ ಸೋಲುವ ತಂಡ ಒಂದು ಅಂಕವನ್ನು ಕಳೆದುಕೊಳ್ಳಲಿದೆ. ಏಕೆಂದರೆ ಪಂದ್ಯ ಸ್ಥಗಿತಗೊಂಡಾಗ ಉಭಯ ತಂಡಗಳಿಗೆ ಒಂದೊಂದು ಅಂಕಗಳನ್ನು ಹಂಚಲಾಗಿತ್ತು.

ಇದೀಗ ಪಾಯಿಂಟ್ಸ್ ಟೇಬಲ್ನಿಂದ ಆ ಅಂಕವನ್ನು ಕಳೆಯಲಾಗಿದೆ. ಹೀಗಾಗಿ ಮರು ನಿಗದಿಯಾದ ಪಂದ್ಯದಲ್ಲಿ ಸೋಲುವ ತಂಡಕ್ಕೆ ಒಂದು ಪಾಯಿಂಟ್ಸ್ ನಷ್ಟವಾಗಲಿದೆ. ಇತ್ತ ಗೆಲ್ಲುವ ತಂಡ 2 ಅಂಕಗಳ ಮೂಲಕ ಪ್ಲೇಆಫ್ ಹಾದಿಯನ್ನು ಸುಗಮಗೊಳಿಸಲಿದೆ. ಹಾಗಾಗಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
