IPL 2025: ಐಪಿಎಲ್​ಗೆ ಧೋನಿ ವಿದಾಯ? ಮೊದಲ ಬಾರಿಗೆ ಮಾಹಿ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬಂದ ಅಪ್ಪ-ಅಮ್ಮ

MS Dhoni Retirement Speculation: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ, ಧೋನಿಯ ಪೋಷಕರು ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಇದು ಧೋನಿ ಅವರ ನಿವೃತ್ತಿಗೆ ಸುಳಿವು ಎಂದು ಅಭಿಮಾನಿಗಳು ಭಾವಿಸಿದ್ದಾರೆ. 20 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿ ಧೋನಿ ಅವರ ಅಪ್ಪ ಅಮ್ಮ ಕ್ರೀಡಾಂಗಣಕ್ಕೆ ಬಂದಿರುವುದು ಅಭಿಮಾನಿಗಳ ಅನುಮಾನಕ್ಕೆ ಪುಷ್ಠಿ ನೀಡಿದೆ.

IPL 2025: ಐಪಿಎಲ್​ಗೆ ಧೋನಿ ವಿದಾಯ? ಮೊದಲ ಬಾರಿಗೆ ಮಾಹಿ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬಂದ ಅಪ್ಪ-ಅಮ್ಮ
Ms Dhoni

Updated on: Apr 05, 2025 | 5:21 PM

2025 ರ ಐಪಿಎಲ್​ನ (IPL 2025) 17ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (CSK vs DC) ನಡುವೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಎಂಎಸ್ ಧೋನಿ (MS Dhoni) ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ರುತುರಾಜ್ ಗಾಯಗೊಂಡಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಧೋನಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಪಂದ್ಯಕ್ಕೂ ಮುನ್ನ ರುತುರಾಜ್ ಫಿಟ್ ಆದ ಕಾರಣ ಅವರೇ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಈ ಪಂದ್ಯದ ವೇಳೆ ಕಂಡುಬಂದ ಅದೊಂದು ದೃಶ್ಯ ಸಿಎಸ್​ಕೆ ಅಭಿಮಾನಿಗಳಲ್ಲಿ ಅದರಲ್ಲೂ ಎಂ ಎಸ್ ಧೋನಿ ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಮಗನ ಆಟವನ್ನು ಕಣ್ತುಂಬಿಕೊಳ್ಳಲು ಧೋನಿ ಅವರ ಅಪ್ಪ-ಅಮ್ಮ ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಬಂದಿರುವುದು ಅಭಿಮಾನಿಗಳ ಈ ಆತಂಕಕ್ಕೆ ಕಾರಣವಾಗಿದೆ.

ಐಪಿಎಲ್​ಗೆ ಧೋನಿ ವಿದಾಯ?

ಸುಮಾರು 5 ವರ್ಷಗಳ ಹಿಂದೆ ಆಗಸ್ಟ್ 15 ರಂದು ಸಂಜೆ 7:29 ಕ್ಕೆ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ ಭಾರತೀಯ ಅಭಿಮಾನಿಗಳಿಗೆ ಆಘಾತ ಎದುರಾಗಿತ್ತು. ಏಕೆಂದರೆ ನಿವೃತ್ತಿಯಾಗುವ ಯಾವ ಸುಳಿವನ್ನು ಬಿಟ್ಟುಕೊಡದ ಧೋನಿ ತಮ್ಮ ತತಕ್ಷಣದ ನಿರ್ಧಾರದ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದಾಗ್ಯೂ ಧೋನಿ ಐಪಿಎಲ್‌ನಲ್ಲಿ ಆಡುತ್ತಿದ್ದರಿಂದ ಅಭಿಮಾನಿಗಳು ಧೋನಿಯ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೀಗ ಐಪಿಎಲ್​ಗೂ ಧೋನಿ ವಿದಾಯ ಹೇಳ್ತಾರಾ ಎಂಬ ಅನುಮಾನ ಮೂಡಿದೆ.

ಕ್ರೀಡಾಂಗಣಕ್ಕೆ ಬಂದ ಧೋನಿ ಅಪ್ಪ-ಅಮ್ಮ

ಇದಕ್ಕೆ ಕಾರಣವೂ ಇದ್ದು, ಧೋನಿಯ ಸುಮಾರು 20 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ, ಧೋನಿಯ ಪೋಷಕರು ಅವರ ಆಟವನ್ನು ನೋಡಲು ಕ್ರೀಡಾಂಗಣಕ್ಕೆ ಬಂದಿದ್ದಾರೆ. ಮೇಲೆ ಹೇಳಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಧೋನಿ ಕಳೆದ 5 ವರ್ಷಗಳಿಂದ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಆದರೀಗ ಧೋನಿ ಐಪಿಎಲ್‌ನಿಂದಲೂ ನಿವೃತ್ತರಾಗುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಧೋನಿಯ ಪೋಷಕರು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿರುವುದು ಈ ನಿವೃತ್ತಿಯ ವದಂತಿಗೆ ಪುಷ್ಠಿ ನೀಡಿದೆ. ಏಪ್ರಿಲ್ 5, ಶನಿವಾರ ಚೆಪಾಕ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಪ್ರಾರಂಭವಾಗುವ ಮೊದಲು, ಜಿಯೋ-ಹಾಟ್‌ಸ್ಟಾರ್‌ನ ನಿರೂಪಕ ಧೋನಿಯ ಪೋಷಕರು ಪಂದ್ಯವನ್ನು ವೀಕ್ಷಿಸಲು ಬಂದಿರುವುದಾಗಿ ತಿಳಿಸಿದರು. ಅಂದಿನಿಂದ ಧೋನಿ ನಿವೃತ್ತಿಯ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ.

20 ವರ್ಷಗಳಲ್ಲಿ ಯಾವುದೇ ಪಂದ್ಯವನ್ನು ನೋಡಿಲ್ಲ

ಧೋನಿ 2004 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಂತರ 2007 ರಲ್ಲಿ ಮೊದಲ ಬಾರಿಗೆ ನಾಯಕತ್ವವಹಿಸಿ ತಂಡವನ್ನು ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದರು. ಆ ಬಳಿಕ ಧೋನಿ ಎಲ್ಲರ ಮನೆ ಮಾತಾದರು. ಆದರೆ ಆ ಸಮಯದಲ್ಲಿಯೂ ಸಹ, ಅವರ ತಂದೆ ಪಾನ್ ಸಿಂಗ್ ಮತ್ತು ತಾಯಿ ದೇವಕಿ ದೇವಿ ಮಗನ ಆಟವನ್ನು ನೋಡಲು ಜಗತ್ತಿನ ಯಾವುದೇ ಕ್ರೀಡಾಂಗಣಕ್ಕೆ ಭೇಟಿ ನೀಡಿರಲಿಲ್ಲ.

IPL 2025: ಸಿಎಸ್​ಕೆ ತಂಡಕ್ಕೆ ಎಂಎಸ್ ಧೋನಿ ನಾಯಕ..! ಫ್ರಾಂಚೈಸಿಯ ಅಚ್ಚರಿಯ ನಿರ್ಧಾರ

2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡ ಧೋನಿ ತಮ್ಮ ನಾಯಕತ್ವದಲ್ಲಿ ತಂಡವನ್ನು 5 ಬಾರಿ ಚಾಂಪಿಯನ್ ಆಗಿ ಮಾಡಿದರು. ಆಗಲೂ ಸಹ ಅವರ ಹೆತ್ತವರು ಯಾವುದೇ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿರಲಿಲ್ಲ. ಆದರೆ ಈಗ ಅವರ ಈ ಹಠಾತ್ ಆಗಮನವು ಬಹುಶಃ ಇದು ಧೋನಿಯ ಕೊನೆಯ ಪಂದ್ಯವಾಗಿರಬಹುದು ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Sat, 5 April 25