- Kannada News Photo gallery Cricket photos Jasprit Bumrah's IPL Return Imminent: Mumbai Indians Receive Crucial Boost
IPL 2025: ಜಸ್ಪ್ರೀತ್ ಬುಮ್ರಾ ಐಪಿಎಲ್ ಎಂಟ್ರಿಗೆ ದಿನಾಂಕ ಫಿಕ್ಸ್; ಯಾವ ತಂಡದ ವಿರುದ್ಧ ಕಣಕ್ಕೆ?
Jasprit Bumrah's IPL Return Imminent: ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತಕಾರಿ ಸೋಲುಗಳ ನಂತರ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಮರಳುವಿಕೆ ಸಿಹಿ ಸುದ್ದಿಯಾಗಿದೆ. ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ಫಿಟ್‌ನೆಸ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರು ಶೀಘ್ರದಲ್ಲೇ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ, ಆದರೆ ಮುಂಬೈನ ಮುಂದಿನ ಎರಡು ಪಂದ್ಯಗಳಲ್ಲಿ ಅವರು ಆಡುವುದು ಅನುಮಾನ.
Updated on: Apr 05, 2025 | 4:44 PM

ಆಡಿರುವ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮುಂಬೈ ತನ್ನ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತ್ತು. ಆದರೆ ಆ ಬಳಿಕ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಕೊನೆ ಹಂತದಲ್ಲಿ ಕೈಚೆಲಿತು.

ಏತನ್ಮಧ್ಯೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮರಳಿರುವ ಬಗ್ಗೆ ದೊಡ್ಡ ಸುದ್ದಿ ಸಿಕ್ಕಿದೆ. ವರದಿ ಪ್ರಕಾರ ಮುಂದಿನ ಕೆಲವು ದಿನಗಳಲ್ಲಿ ಬುಮ್ರಾ ತಂಡಕ್ಕೆ ಮರಳಲಿದ್ದು, ಶೀಘ್ರದಲ್ಲೇ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆ ಬೆನ್ನುನೋವಿಗೆ ತುತ್ತಾಗಿದ್ದ ಬುಮ್ರಾ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಕೂಡ ಸಾಧ್ಯವಾಗಲಿಲ್ಲ. ಅಂದಿನಿಂದ, ಬುಮ್ರಾ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ತಮ್ಮ ಪುನರ್ವಸತಿಯನ್ನು ಪೂರ್ಣಗೊಳಿಸುತ್ತಿದ್ದಾರೆ.

ಇತ್ತೀಚೆಗೆ ಬುಮ್ರಾ ಬೆಂಗಳೂರು ಮೂಲದ ಸಿಒಇಯಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿತ್ತು. ಬುಮ್ರಾ ವೈದ್ಯಕೀಯವಾಗಿ ಫಿಟ್ ಆಗಿದ್ದಾರೆಂದು ಘೋಷಿಸಲಾಗಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಅವರ ಬೌಲಿಂಗ್ ಕೆಲಸದ ಹೊರೆ ಕ್ರಮೇಣ ಹೆಚ್ಚಾದ ಕಾರಣ ಅವರಿಗೆ ಗ್ರೀನ್ ಸಿಗ್ನಲ್ ಸಿಗಲಿಲ್ಲ.

ಈಗ ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ ಬುಮ್ರಾ ಅಂತಿಮ ಸುತ್ತಿನ ಫಿಟ್‌ನೆಸ್ ಪರೀಕ್ಷೆಗೆ ಸನಿಹ ಬಂದಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅವರು COE ನಲ್ಲಿ ಫಿಟ್ನೆಸ್ ಪರೀಕ್ಷೆಯನ್ನು ನಡೆಸಲಿದ್ದು, ಇದರಲ್ಲಿ ಪೂರ್ಣ ಸಾಮರ್ಥ್ಯದಲ್ಲಿ ಬೌಲಿಂಗ್ ಮಾಡುವಾಗ ಅವರ ಕೆಲಸದ ಹೊರೆಯನ್ನು ಪರಿಶೀಲಿಸಲಾಗುತ್ತದೆ. ಬುಮ್ರಾ ಅವರ ಪ್ರಸ್ತುತ ಸ್ಥಿತಿಯನ್ನು ನೋಡಿದರೆ, ಅವರು ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.

ಆದಾಗ್ಯೂ, ಅವರು ಏಪ್ರಿಲ್ 4 ರಂದು ಲಕ್ನೋ ವಿರುದ್ಧ ಮತ್ತು ನಂತರ ಏಪ್ರಿಲ್ 9 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುವ ಮುಂಬೈನ ಮುಂದಿನ 2 ಪಂದ್ಯಗಳಲ್ಲಿ ಆಡುವ ಸಾಧ್ಯತೆಗಳಿಲ್ಲ. ಆದರೆ ಬುಮ್ರಾ ಏಪ್ರಿಲ್ 13 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವುದನ್ನು ಕಾಣಬಹುದು. ಈ ಪಂದ್ಯದಲ್ಲಿ ಇಲ್ಲದಿದ್ದರೆ, ಏಪ್ರಿಲ್ 17 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅವರನ್ನು ಮತ್ತೆ ಮೈದಾನದಲ್ಲಿ ಕಾಣಬಹುದು.
























