Yashasvi Jaiswal: ಅತ್ಯಂತ ನಿಧಾನಗತಿಯ ಅರ್ಧಶತಕ ಬಾರಿಸಿದ ಯಶಸ್ವಿ ಜೈಸ್ವಾಲ್
IPL 2025 PBKS vs RR: ಐಪಿಎಲ್ನ 18ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 69 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 155 ರನ್ಗಳಿಸಲಷ್ಟೇ ಶಕ್ತರಾದರು.
Updated on: Apr 06, 2025 | 9:04 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತ್ಯಂತ ವೇಗದ ಅರ್ಧಶತಕದ ದಾಖಲೆ ಬರೆದಿರುವ ಯಶಸ್ವಿ ಜೈಸ್ವಾಲ್ (Yashasvi Jaiswal) ಇದೀಗ ಅತ್ಯಂತ ನಿಧಾನಗತಿಯಲ್ಲಿ ಹಾಫ್ ಸೆಂಚುರಿ ಸಿಡಿಸಿ ಸುದ್ದಿಯಾಗಿದ್ದಾರೆ. ಮುಲ್ಲನ್ಪುರ್ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಈ ಬ್ಯಾಟಿಂಗ್ನೊಂದಿಗೆ ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಜೈಸ್ವಾಲ್ ಅವರ ಐಪಿಎಲ್ ಕೆರಿಯರ್ನಲ್ಲೇ ಅತ್ಯಂತ ನಿಧಾನಗತಿಯ ಅರ್ಧಶತಕ ಎಂಬುದು ವಿಶೇಷ. ಅಂದರೆ ಈವರೆಗೆ ಅವರು ಅರ್ಧಶತಕ ಬಾರಿಸಲು 40 ಎಸೆತಗಳನ್ನು ತೆಗೆದುಕೊಂಡಿರಲಿಲ್ಲ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 39 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು, ಅವರ ನಿಧಾನಗತಿಯ ಬ್ಯಾಟಿಂಗ್ ಆಗಿತ್ತು.

ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧ 40 ಎಸೆತಗಳನ್ನು ಎದುರಿಸುವ ಮೂಲಕ ಐಪಿಎಲ್ನಲ್ಲಿ ನಿಧಾನಗತಿಯಲ್ಲಿ ಅರ್ಧಶತಕ ಪೂರೈಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ 45 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 5 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 67 ರನ್ ಸಿಡಿಸಿ ಮಿಂಚಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಬೃಹತ್ ಮೊತ್ತ ಪೇರಿಸಲು ಭದ್ರ ಬುನಾದಿ ಹಾಕಿಕೊಟ್ಟರು.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ನಿಧಾನಗತಿಯ ಅರ್ಧಶತಕ ಬಾರಿಸಿದ ದಾಖಲೆ ಸೌತ್ ಆಫ್ರಿಕಾದ ಜೆಪಿ ಡುಮಿನಿ ಹೆಸರಿನಲ್ಲಿದೆ. 2009ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದ ಡುಮಿನಿ ಅರ್ಧಶತಕ ಬಾರಿಸಲು ಬರೋಬ್ಬರಿ 55 ಎಸೆತಗಳನ್ನು ತೆಗೆದುಕೊಂಡಿದ್ದರು. ಇದುವೇ ಐಪಿಎಲ್ ಇತಿಹಾಸದ ಅತ್ಯಂತ ನಿಧಾನಗತಿಯ ಅರ್ಧಶತಕವಾಗಿದೆ.

ಇದೀಗ 40 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಯಶಸ್ವಿ ಜೈಸ್ವಾಲ್ ತನ್ನ ಕೆರಿಯರ್ನ ನಿಧಾನಗತಿಯ ಹಾಫ್ ಸೆಂಚುರಿಯನ್ನು ಬಾರಿಸಿದ್ದಾರೆ. ಇದಾಗ್ಯೂ ಐಪಿಎಲ್ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಕೂಡ ಜೈಸ್ವಾಲ್ ಹೆಸರಿನಲ್ಲಿದೆ. 2023 ರಲ್ಲಿ ಯಶಸ್ವಿ ಜೈಸ್ವಾಲ್ ಕೆಕೆಆರ್ ವಿರುದ್ಧ ಕೇವಲ 13 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಈ ದಾಖಲೆ ನಿರ್ಮಿಸಿದ್ದಾರೆ.



















