ಐಪಿಎಲ್ 2022 ಮುಕ್ತಾಯದ ಬಳಿಕ ಆರಂಭಗೊಂಡ ರಣಜಿ ಕ್ವಾರ್ಟರ್‌ಫೈನಲ್ (Ranji Trophy 2022, Quarterfinals) ಪಂದ್ಯದಲ್ಲಿ ಪೃಥ್ವಿ ಶಾ (Prithvi Shaw) ನಾಯಕತ್ವದ ಮುಂಬೈ ತಂಡ ವಿಶ್ವ ದಾಖಲೆ ನಿರ್ಮಿಸಿದೆ. ಉತ್ತರಕಂಡ ವಿರುದ್ಧದ ಕಾದಾಟದಲ್ಲಿ ಮುಂಬೈ (Mumbai vs Uttarakhand) ಬರೋಬ್ಬರಿ 725 ರನ್ಗಳ ಅಮೋಘ ಗೆಲುವು ಕಂಡಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಒಂದು ನೂತನ ದಾಖಲೆ. ಫಸ್ಟ್ ಕ್ಲಾಸ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ಗಳ ಅಂತರದಲ್ಲಿ ಗೆದ್ದ ತಂಡ ಇದೀಗ ಮುಂಬೈ ಆಗಿದೆ. ಇದಕ್ಕೂ ಮುನ್ನ 1929/30 ರಲ್ಲಿ ನ್ಯೂ ಸೌತ್ ವೇಲ್ಸ್ ತಂಡ 685 ರನ್ಗಳ ಜಯ ಸಾಧಿಸಿದ್ದು ಇತಿಹಾಸವಾಗಿತ್ತು. ನಂತರ 1928/29 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 675 ರನ್ಗಳ ಜಯ ಮತ್ತು 1920/21 ರಲ್ಲಿ ಸೌತ್ ಆಸ್ಟ್ರೇಲಿಯಾ ವಿರುದ್ಧ ನ್ಯೂ ಸೌತ್ ವೇಲ್ಸ್ 638 ರನ್ಗಳ ಜಯ ಕಂಡಿತ್ತು.
ಉತ್ತರಕಂಡ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಬೆಟ್ಟದಂತಹ ಮೊತ್ತ ಕಲೆಹಾಕಿತು. ಆರಂಭಿಕರಾದ ನಾಯಕ ಪೃಥ್ವಿ ಶಾ (21) ಹಾಗೂ ಯಶಸ್ವಿ ಜೈಸ್ವಾಲ್ (35) ಬೇಗನೆ ಔಟಾದರೂ ಅರ್ಮನ್ ಜಫರ್ 60 ರನ್ ಗಳಿಸಿದರು. ನಂತರ ಶುರುವಾಗಿದ್ದು ಸುವೇದ್ ಪರ್ಕರ್ ಹಾಗೂ ಸರ್ಫರಾಜ್ ಖಾನ್ ಜೊತೆಯಾಟ. ಉತ್ತರಕಂಡ ಬೌಲರ್ಗಳಿಗೆ ಸರಿಯಾಗಿ ಉತ್ತರ ನೀಡಿದ ಇವರಿಬ್ಬರು ಬೊಂಬಾಟ್ ಆಟ ಪ್ರದರ್ಶಿಸಿದರು.
IND vs SA: ಮೊದಲ ಟಿ20 ಫೈಟ್ಗೆ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಫೋಟೋ
176 ರನ್ಗೆ 3ನೇ ವಿಕೆಟ್ ಕಳೆದುಕೊಂಡ ಮುಂಬೈ ತನ್ನ 4ನೇ ವಿಕೆಟ್ ಕಳೆದುಕೊಂಡಿದ್ದು 443 ರನ್ಗೆ. ಪರ್ಕರ್ ಹಾಗೂ ಸರ್ಫರಾಜ್ 267 ರನ್ಗಳ ಅಮೋಘ ಜೊತೆಯಾಟ ಆಡಿದರು. ಇದರಲ್ಲಿ ಸುವೇದ್ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದರೆ, ಸರ್ಫರಾಜ್ ಶತಕ ಚಚ್ಚಿದರು. 447 ಎಸೆತಗಳಲ್ಲಿ 21 ಫೋರ್, 4 ಸಿಕ್ಸರ್ನೊಂದಿಗೆ ಸುವೇದ್ 252 ರನ್ ಗಳಿಸಿ ಔಟಾದರೆ, ಖಾನ್ 205 ಎಸೆತಗಳಲ್ಲಿ 14 ಫೋರ್, 4 ಸಿಕ್ಸರ್ ಸಿಡಿಸಿ 153 ರನ್ ಬಾರಿಸಿದರು. ಶಾಮ್ಸ್ ಮುಲಾನಿ 59 ರನ್ಗಳ ಕಾಣಿಕೆ ನೀಡಿದರು. ಪರಿಣಾಮ ಮುಂಬೈ 166.4 ಓವರ್ನಲ್ಲಿ 8 ವಿಕಟ್ ಕಳೆದುಕೊಂಡು 647 ರನ್ಗೆ ಡಿಕ್ಲೇರ್ ಘೋಷಿಸಿತು.
ಇತ್ತ ಬ್ಯಾಟಿಂಗ್ಗೆ ಇಳಿದ ಉತ್ತರಕಂಡ ತಂಡ ಮುಂಬೈ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋಯಿತು. ಕಮಲ್ ಸಿಂಗ್ 40 ರನ್ ಗಳಿಸಿದ್ದೇ ಹೆಚ್ಚು. ಮೂರು ಬ್ಯಾಟರ್ಗಳ ಸ್ಕೋರ್ ಮಾತ್ರ ಎರಡಂಕಿ ದಾಟಿತು. 41.1 ಓವರ್ನಲ್ಲಿ 114 ರನ್ಗೆ ಸರ್ವಪತನ ಕಂಡಿತು. ಮುಂಬೈ ಪರ ಶಾಮ್ಸ್ ಮುಲಾನಿ 5 ವಿಕೆಟ್ ಕಿತ್ತರೆ, ಮೋಹಿತ್ ಅವಸ್ತಿ 2 ವಿಕೆಟ್ ಪಡೆದರು.
ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಯಶಸ್ವಿ ಜೈಸ್ವಾಲ್ 150 ಎಸೆತಗಳಲ್ಲಿ 103 ರನ್ ಗಳಿಸಿದರೆ, ನಾಯಕ ಪೃಥ್ವಿ ಶಾ 72 ರನ್ ಹಾಗೂ ಆದಿತ್ಯ ತಾರೆ 57 ರನ್ ಬಾರಿಸಿದರು. 58 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿದ್ದಾಗ ಮುಂಬೈ ಡಿಕ್ಲೇರ್ ಘೋಷಿಸಿ ಎದುರಾಳಿಗೆ 795 ರನ್ಗಳ ಟಾರ್ಗೆಟ್ ನೀಡಿತು. ಆದರೆ, ಉತ್ತರಕಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 69 ರನ್ಗೆ ಆಲೌಟ್ ಆಯಿತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:58 pm, Thu, 9 June 22