ಸೌತ್​ ಆಫ್ರಿಕಾ ಸರಣಿಯಿಂದ ಕೊನೇ ಕ್ಷಣದಲ್ಲಿ ಹೊರ ನಡೆದ ಕನ್ನಡಿಗ ರಾಹುಲ್​; ಪಂತ್​ಗೆ ನಾಯಕತ್ವ

TV9kannada Web Team

TV9kannada Web Team | Edited By: Rajesh Duggumane

Updated on: Jun 08, 2022 | 7:35 PM

ಐದು ಪಂದ್ಯಗಳ ಸರಣಿಯನ್ನು ಕನ್ನಡಿಗ ಕೆ.ಎಲ್​. ರಾಹುಲ್ ಮುನ್ನಡೆಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರು ಗಾಯಕ್ಕೊಳಗಾದ ಕಾರಣ, ಸರಣಿಯಿಂದಲೇ ಹೊರ ನಡೆದಿದ್ದಾರೆ. ರಿಷಬ್ ಪಂತ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಸೌತ್​ ಆಫ್ರಿಕಾ ಸರಣಿಯಿಂದ ಕೊನೇ ಕ್ಷಣದಲ್ಲಿ ಹೊರ ನಡೆದ ಕನ್ನಡಿಗ ರಾಹುಲ್​; ಪಂತ್​ಗೆ ನಾಯಕತ್ವ
ರಾಹುಲ್-ರಿಷಭ್

ಐಪಿಎಲ್​ 2022 ಪೂರ್ಣಗೊಳ್ಳುತ್ತಿದ್ದಂತೆ ಅಂತಾರಾಷ್ಟ್ರೀಯ ಪಂದ್ಯಗಳು ಆರಂಭಗೊಳ್ಳುತ್ತಿವೆ. ಈ ಬಾರಿಯ ಐಪಿಎಲ್ (IPL 2022)​ ಬಳಿಕ ಭಾರತ ಸೌತ್​ ಆಫ್ರಿಕಾ ತಂಡವನ್ನು ಎದುರಿಸುತ್ತಿದೆ. ಜೂನ್​ 9ರಿಂದ ಪಂದ್ಯ ಆರಂಭಗೊಳ್ಳಲಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು ಕನ್ನಡಿಗ ಕೆ.ಎಲ್​. ರಾಹುಲ್ (KL Rahul) ಮುನ್ನಡೆಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಾಹುಲ್ ಗಾಯಕ್ಕೊಳಗಾದ ಕಾರಣ, ಸರಣಿಯಿಂದಲೇ ಹೊರ ನಡೆದಿದ್ದಾರೆ. ರಿಷಭ್​ ಪಂತ್ (Rishabh Pant) ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಪ್ರಮುಖ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮೊದಲಾದವರಿಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ, ರಾಹುಲ್​ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿತ್ತು. ರಾಹುಲ್ ಅವರು ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್ ಹಾಗೂ ಲಖ್ನೋ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಈ ಕಾರಣಕ್ಕೆ ಅವರಿಗೆ ಟಿ20 ಸರಣಿಯ ನಾಯಕತ್ವ ನೀಡಲಾಗಿತ್ತು. ಆದರೆ ಅವರು ತೊಡೆಸಂದು ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ, ಉಪ ನಾಯಕನ ಸ್ಥಾನದಲ್ಲಿದ್ದ ಪಂತ್ ಅವರಿಗೆ ನಾಯಕತ್ವ ಸಿಕ್ಕಿದೆ. ಐಪಿಎಲ್​ನಲ್ಲಿ ಗುಜರಾತ್​ ಟೈಟಾನ್ಸ್​​ ಮೊದಲ ಸೀಸನ್​ನಲ್ಲೇ ಕಪ್ ತಂದು ಕೊಟ್ಟ ಹಾರ್ದಿಕ್​ ಪಾಂಡ್ಯ ಉಪ ನಾಯಕನ ಸ್ಥಾನ ಅಲಂಕರಿಸಿದ್ದಾರೆ. ಸ್ಪಿನ್ನರ್ ಕುಲ್ದೀಪ್ ಯಾದವ್​ ಕೂಡ ಗಾಯಗೊಂಡಿದ್ದು ಅವರು ಕೂಡ ಈ ಸರಣಿಯಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಾಳೆ (ಜೂನ್ 9) ಮೊದಲ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಈ ಪಂದ್ಯ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಸತತ 12 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡಕ್ಕೆ ವಿಶ್ವ ದಾಖಲೆ ಬರೆಯಲು ಒಂದು ಗೆಲುವಿನ ಅವಶ್ಯಕತೆಯಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಸತತವಾಗಿ 13 ಪಂದ್ಯ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆ ಸಿಗಲಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada