
ಮುಂಬೈನ ಯುವ ಕ್ರಿಕೆಟಿಗ ಮತ್ತು ಭಾರತೀಯ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ (Musheer Khan) ಇಂಗ್ಲೆಂಡ್‌ನಲ್ಲಿ ರನ್‌ಗಳ ಮಳೆ ಸುರಿಸುತ್ತಿದ್ದಾರೆ. ಮುಂಬೈ ಉದಯೋನ್ಮುಖ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಮುಶೀರ್ ಖಾನ್, ಪ್ರಸ್ತುತ ಆಡಿರುವ ಮೂರು ಪಂದ್ಯಗಳಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ ಪಂದ್ಯದಲ್ಲಿ 125 ರನ್‌ಗಳ ಇನ್ನಿಂಗ್ಸ್ ಆಡಿದ್ದ ಮುಶೀರ್, ಎರಡನೇ ಪಂದ್ಯದಲ್ಲೂ 123 ರನ್ ಬಾರಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲೂ ಶತಕದ ಇನ್ನಿಂಗ್ಸ್ ಆಡಿರುವ ಅವರು ಅಜೇಯ 154 ರನ್ ಬಾರಿಸಿ ಹ್ಯಾಟ್ರಿಕ್ ಶತಕಗಳನ್ನು ಪೂರೈಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಹ್ಯಾಟ್ರಿಕ್ ಸೆಂಚುರಿ ಬಾರಿಸಿರುವ ಮುಶೀರ್ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಮೊದಲೆರಡು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಸಹ ಪಡೆದಿದ್ದರು.
ನಾಟ್ಸ್ ಸೆಕೆಂಡ್ ಇಲೆವೆನ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮುಶೀರ್ 123 ರನ್ ಬಾರಿಸಿದರೆ, ಎರಡನೇ ಪಂದ್ಯದಲ್ಲಿ ಚಾಲೆಂಜರ್ಸ್ ವಿರುದ್ಧ 125 ರನ್ ಕಲೆಹಾಕಿದ್ದರು. ಹಾಗೆಯೇ ಬೌಲಿಂಗ್‌ನಲ್ಲಿಯೂ ಬರೋಬ್ಬರಿ 10 ವಿಕೆಟ್‌ಗಳನ್ನು ಉರುಳಿಸಿದ್ದರು. ಇದೀಗ ಲೌಬರೋ ವಿಶ್ವವಿದ್ಯಾಲಯ ಸೆಂಟರ್ ಆಫ್ ಕ್ರಿಕೆಟಿಂಗ್ ಎಕ್ಸಲೆನ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ 150 ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.
ಲೌಬರೋ ವಿಶ್ವವಿದ್ಯಾಲಯ ಸೆಂಟರ್ ಆಫ್ ಕ್ರಿಕೆಟಿಂಗ್ ಎಕ್ಸಲೆನ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಮುಂಬೈ ಎಮರ್ಜಿಂಗ್ ಪ್ಲೇಯರ್ಸ್ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಆರಂಭಿಕ ಮುಶೀರ್ ಖಾನ್ 154 ರನ್ ಬಾರಿಸಿದರೆ, ನಾಯಕ ಸೂರ್ಯಾಂಶು ಶೆಡ್ಜೆ 108 ರನ್ ಬಾರಿಸಿ ನಿವೃತ್ತರಾದರು. ಉಳಿದಂತೆ ಮತ್ತೊಬ್ಬ ಆರಂಭಿಕ ವೇದಾಂತ್ ಮುಖರ್ಜೆ 3, ಮನನ್ ಭಟ್ 0 ಮತ್ತು ಹರ್ಷ್ 64 ರನ್‌ಗಳ ಕಾಣಿಕೆ ನೀಡಿದರು. ಹೀಗಾಗಿ 52 ಓವರ್‌ಗಳ ಅಂತ್ಯಕ್ಕೆ ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 323 ರನ್ ಗಳಿಸಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಮತ್ತೊಂದು ತಂಡ; ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿದ ಮುಶೀರ್ ಖಾನ್
ಈ ಪ್ರವಾಸದಲ್ಲಿ ಮುಶೀರ್ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ನಾಟ್ಸ್ ಸೆಕೆಂಡ್ ಇಲೆವೆನ್ ವಿರುದ್ಧದ ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದ ಮುಶೀರ್, ಚಾಲೆಂಜರ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಹತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಲೌಬರೋ ಎಕ್ಸಲೆನ್ಸ್ ವಿರುದ್ಧ ಅವರು ಎಷ್ಟು ವಿಕೆಟ್‌ಗಳನ್ನು ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದಾಗ್ಯೂ ಮೊದಲ ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ