IPL 2025: ಐಪಿಎಲ್ ಮಧ್ಯದಲ್ಲಿ ಮುಂಬೈ ತಂಡ ತೊರೆದ ಮೂವರು ಸ್ಟಾರ್ ವಿದೇಶಿ ಆಟಗಾರರು

Mumbai Indians Lose 3 Star Players Mid-IPL 2025 Playoffs: ಐಪಿಎಲ್ 2025ರ ಪ್ಲೇಆಫ್ ಹಂತಕ್ಕೆ ಮುಂಬೈ ಇಂಡಿಯನ್ಸ್ ತಲುಪಿದ್ದು, ರಯಾನ್ ರಿಕಲ್ಟನ್, ಕಾರ್ಬಿನ್ ಬಾಷ್ ಮತ್ತು ವಿಲ್ ಜ್ಯಾಕ್ಸ್ ರಾಷ್ಟ್ರೀಯ ಕರ್ತವ್ಯಕ್ಕಾಗಿ ತಂಡ ತೊರೆದಿದ್ದಾರೆ. ಇವರ ಬದಲಿಗೆ ಜಾನಿ ಬೈರ್‌ಸ್ಟೋವ್, ರಿಚರ್ಡ್ ಗ್ಲೀಸನ್ ಮತ್ತು ಚರಿತ್ ಅಸ್ಲಂಕಾ ಅವರನ್ನು ತಂಡ ಸೇರಿಸಿಕೊಂಡಿದೆ. ಮುಖ್ಯ ಕೋಚ್ ಮಹೇಲ ಜಯವರ್ಧನೆ ಈ ಆಟಗಾರರಿಗೆ ವಿದಾಯ ಹೇಳಿದ್ದು, ತಂಡದ ಯಶಸ್ಸಿನಲ್ಲಿ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

IPL 2025: ಐಪಿಎಲ್ ಮಧ್ಯದಲ್ಲಿ ಮುಂಬೈ ತಂಡ ತೊರೆದ ಮೂವರು ಸ್ಟಾರ್ ವಿದೇಶಿ ಆಟಗಾರರು
Mumbai Indians

Updated on: May 27, 2025 | 8:04 PM

ಐಪಿಎಲ್ 2025 (IPL 2025) ಈಗ ಪ್ಲೇಆಫ್‌ ಹಂತವನ್ನು ತಲುಪಿದೆ. ಆದರೆ ಈ ಸುತ್ತು ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ಪಾಳಯದಿಂದ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಅದೆನೆಂದರೆ, ಮುಂಬೈ ತಂಡದ ಮೂವರು ಸ್ಟಾರ್ ಆಟಗಾರರು ಸೀಸನ್​ನ ಮಧ್ಯದಲ್ಲಿ ತಂಡವನ್ನು ತೊರೆದಿದ್ದಾರೆ. ವಾಸ್ತವವಾಗಿ, ಈ ಮೂವರು ಆಟಗಾರರು ರಾಷ್ಟ್ರೀಯ ಕರ್ತವ್ಯದ ಕಾರಣದಿಂದಾಗಿ ತಮ್ಮ ದೇಶಕ್ಕೆ ಮರಳಿದ್ದಾರೆ. ಮುಂಬೈ ಇಂಡಿಯನ್ಸ್ ಈಗಾಗಲೇ ಈ ಮೂವರು ಆಟಗಾರರ ಬದಲಿ ಆಟಗಾರರನ್ನು ಘೋಷಿಸಿದ್ದು, ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮುಂಬೈ ಫ್ರಾಂಚೈಸಿ ಈ ಮೂವರು ಆಟಗಾರರಿಗೆ ವಿದಾಯ ಹೇಳಿದೆ.

ಭಾರತ ತೊರೆದ 3 ಆಟಗಾರರು

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಯಾನ್ ರಿಕಲ್ಟನ್, ಆಲ್‌ರೌಂಡರ್ ಕಾರ್ಬಿನ್ ಬಾಷ್ ಮತ್ತು ವಿಲ್ ಜ್ಯಾಕ್ಸ್ ರಾಷ್ಟ್ರೀಯ ಕರ್ತವ್ಯದ ಕಾರಣದಿಂದಾಗಿ ತಮ್ಮ ದೇಶಕ್ಕೆ ಮರಳಬೇಕಾಯಿತು. ಈ ಮೂವರು ಆಟಗಾರರು ಈ ಸೀಸನ್‌ನಲ್ಲಿ ಮುಂಬೈ ಗೆಲುವಿನಲ್ಲಿ ಪ್ರಮುಖ ಕೊಡುಗೆಗಳನ್ನು ನೀಡಿದ್ದರು, ಆದರೆ ಈಗ ಅವರು ಟೂರ್ನಿಯ ಉಳಿದ ಪಂದ್ಯಗಳ ಭಾಗವಾಗಿರುವುದಿಲ್ಲ. ಮುಂಬೈ ಇಂಡಿಯನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದೆ.

ಮಾಹಿತಿ ನೀಡಿದ ಮಹೇಲ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಆಡುವ ದಕ್ಷಿಣ ಆಫ್ರಿಕಾ ತಂಡದಲ್ಲಿ ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ ಸ್ಥಾನ ಪಡೆದಿದ್ದಾರೆ. ಅದೇ ಸಮಯದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿಲ್ ಜ್ಯಾಕ್ಸ್ ಅವರನ್ನು ಇಂಗ್ಲೆಂಡ್‌ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಅದಕ್ಕಾಗಿಯೇ ಈ ಆಟಗಾರರು ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ. ತಂಡವು ಮುಖ್ಯ ಕೋಚ್ ಮಹೇಲ ಜಯವರ್ಧನೆ ಈ ಆಟಗಾರರಿಗೆ ವಿದಾಯ ಹೇಳುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದು, ‘ಸಹಾಯಕ ಸಿಬ್ಬಂದಿ ಮತ್ತು ತಂಡದ ಪರವಾಗಿ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ರಯಾನ್ ಮತ್ತು ಬೋಸ್ಕಿಗೆ ಶುಭ ಹಾರೈಸುತ್ತೇನೆ. ಚೆನ್ನಾಗಿ ಆಟವಾಡಿ. ನೀವು ಅದ್ಭುತ ಪ್ರದರ್ಶನ ನೀಡಿದ್ದೀರಿ ಮತ್ತು ಉತ್ತಮ ಕೊಡುಗೆ ನೀಡಿದ್ದೀರಿ. ನೀವು ಹೋಗುವುದನ್ನು ನೋಡಿ ನನಗೆ ಬೇಸರವಾಗುತ್ತಿದೆ.

ಹಾಗೆಯೇ ವಿಲ್ ಜಾಕ್ಸ್​ಗೂ ವಿದಾಯ ಹೇಳಿರುವ ಮಹೇಲ, ‘ ಶುಭವಾಗಲಿ ಗೆಳೆಯ. ನಿಮಗೆ ರಾಷ್ಟ್ರೀಯ ತಂಡಕ್ಕೆ ಸೇರಲು ಕರೆ ಬಂದಿದೆ. ನನಗೆ ತುಂಬಾ ಹೆಮ್ಮೆ ಇದೆ. ಚೆನ್ನಾಗಿ ಪ್ರದರ್ಶನ ನೀಡಿ, ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ನಿಮ್ಮೆಲ್ಲರ ಸಹಕಾರದಿಂದ, ತಂಡ ಇಂದು ಪ್ಲೇ ಆಫ್ ತಲುಪಿದೆ ಎಂದು ಜಯವರ್ಧನೆ ಹೇಳಿಕೊಂಡಿದ್ದಾರೆ.

RCB vs LSG Live Score, IPL 2025: ಲಕ್ನೋ ಮೊದಲ ವಿಕೆಟ್ ಪತನ

ಬದಲಿಯಾಗಿ ಬಂದಿದ್ಯಾರು?

ಈ ಸೀಸನ್‌ನಲ್ಲಿ ರಯಾನ್ ರಿಕಲ್ಟನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮುಂಬೈ ತಂಡವನ್ನು ಹಲವು ಬಾರಿ ಕಠಿಣ ಪರಿಸ್ಥಿತಿಯಿಂದ ಹೊರತಂದಿದ್ದರು. ಹಾಗೆಯೇ ಕಾರ್ಬಿನ್ ಬಾಷ್ ತಮ್ಮ ಆಲ್ ರೌಂಡ್ ಸಾಮರ್ಥ್ಯದಿಂದ ತಂಡಕ್ಕೆ ಸಮತೋಲನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯದಿಂದ ವಿಲ್ ಜ್ಯಾಕ್ಸ್ ಕೂಡ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ, ತಂಡವು ಈ ಮೂವರು ಆಟಗಾರರನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದೆ. ಆದಾಗ್ಯೂ, ಈ ಆಟಗಾರರ ಬದಲಿಗೆ, ಇಂಗ್ಲೆಂಡ್‌ನ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್, ಇಂಗ್ಲೆಂಡ್ ವೇಗಿ ರಿಚರ್ಡ್ ಗ್ಲೀಸನ್ ಮತ್ತು ಶ್ರೀಲಂಕಾದ ಬ್ಯಾಟ್ಸ್‌ಮನ್ ಚರಿತ್ ಅಸ್ಲಂಕಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:03 pm, Tue, 27 May 25