ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವುದು ಮುಂಬೈ ಇಂಡಿಯನ್ಸ್ (Mumbai Indians). ಒಟ್ಟು ದಾಖಲೆಯ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ, ಈ ಬಾರಿ ಎಂಐ (MI) ಪ್ರದರ್ಶನ ಹಿಂದಿನ ಆವೃತ್ತಿಗಳಂತೆ ಇರಲಿಲ್ಲ. ಪ್ಲೇ ಆಫ್ ಸುತ್ತು ಪ್ರವೇಶಿಸಲು ವಿಫಲವಾದ ತಂಡ ಲೀಗ್ನಲ್ಲೇ ಟೂರ್ನಿಯಿಂದ ಹೊರಬಿತ್ತು. ತಂಡದಲ್ಲಿ ವಿಶ್ವಶ್ರೇಷ್ಠ ಆಟಗಾರರಿದ್ದರೂ ಫಾರ್ಮ್ ಸಮಸ್ಯೆಯಿಂದ ಸಂಘಟಿತ ಪ್ರದರ್ಶನ ತೋರುವಲ್ಲಿ ಎಡವಿತು. ಸದ್ಯ ಮುಂದಿನ ವರ್ಷದ ಐಪಿಎಲ್ 2022ಕ್ಕೆ ಮೆಗಾ ಹರಾಜು (IPL 2022 Mega Auction) ಪ್ರಕ್ರಿಯೆ ನಡೆಯಲಿದೆ. ಅಲ್ಲದೆ ಲಖನೌ ಮತ್ತು ಅಹಮದಾಬಾದ್ (Lucknow and Ahmedabad) ಎರಡು ಹೊಸ ಫ್ರ್ಯಾಂಚೈಸಿಗಳು ಕೂಡ ಸೇರ್ಪಡೆಯಾಗಿದ್ದು, ಈ ನಿಟ್ಟಿನಲ್ಲಿ ಹಾಲಿ 8 ತಂಡಗಳಿಗೆ ತನ್ನಲ್ಲಿನ ಕೇವಲ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ತನ್ನ ಸ್ಟಾರ್ ಆಲ್ರೌಂಡರ್, ಮ್ಯಾಚ್ ವಿನ್ನರ್ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಮೆಗಾ ಆಕ್ಷನ್‌ಗೆ ಬಿಟ್ಟುಕೊಡಲಿದೆ ಎಂದು ಹೇಳಲಾಗಿದೆ.
ಹೌದು, 2008ರಲ್ಲಿ ಐಪಿಎಲ್ ಶುರುವಾದಾಗಿನಿಂದಲೂ ಮುಂಬೈ ತಂಡ ಬಲಿಷ್ಠವಾಗಿದೆ. ಆದರೆ, ಈ ಬಾರಿ ತಂಡದಲ್ಲಿ ದೊಡ್ಡ ಬದಲಾವಣೆಗಳಿಗೆ ಮುಂದಾಗುವ ಸಾಧ್ಯತೆ ಇದೆ. ಈಗಾಗಲೇ ಇರುವ 8 ಐಪಿಎಲ್ ತಂಡಗಳು ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಉಳಿದ ಆಟಗಾರರು ಹರಾಜು ಪ್ರಕ್ರಿಯೆಗೆ ಲಭ್ಯವಾಗಲಿದ್ದಾರೆ. ಇನ್ನು ಎರಡು ಹೊಸ ತಂಡಗಳು ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನವೇ ಹರಾಜಿಗೆ ಲಭ್ಯವಿರುವ ಆಟಗಾರರ ಪೈಕಿ ಮೂವರು ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ.
ಹೀಗಿರುವಾಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಹತ್ತಿರದ ಐಪಿಎಲ್‌ನ ಹಿರಿಯ ಅಧಿಕಾರಿ ಒಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಹಾರ್ದಿಕ್ ಪಾಂಡ್ಯ 2022ರ ಟೂರ್ನಿಗಾಗಿ ನಡೆಯುವ ಹರಾಜಿನಲ್ಲಿ ಸ್ಪರ್ಧಿಸಬೇಕಾಗಬಹುದು ಎಂದಿದ್ದಾರೆ. ‘ನನ್ನ ಪ್ರಕಾರ ಬಿಸಿಸಿಐ ಹಾಲಿ ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾಡಿಕೊಡಲಿದೆ. ಜೊತೆಗೆ ಒಂದು ರೈಟ್ ಟು ಮ್ಯಾಚ್ ಅಧಿಕಾರ ಸಿಗುವ ಸಾಧ್ಯತೆ ಇದೆ. ಅಂದಹಾಗೆ ರೈಟ್ ಟು ಮ್ಯಾಚ್ ಅಧಿಕಾರ ಇಲ್ಲದೇ ಹೋದರೆ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಸಿಗಲಿದೆ. ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ಅವರನ್ನು ಉಳಿಸಿಕೊಳ್ಳುವುದು ಖಚಿತ. ಮೂರನೇಯವರಾಗಿ ಕೀರನ್ ಪೊಲಾರ್ಡ್ ಉಳಿಯುವರು. ಈ ಮೂವರು ತಂಡದ ಆಧಾರಸ್ತಂಭವಾಗಿದ್ದಾರೆ’ ಎಂದು ತಿಳಿಸಿದ್ದಾರೆ.
‘ಮುಂಬೈ ಇಂಡಿಯನ್ಸ್ ತಂಡದ ಬಲ ನಿಂತಿರುವುದೇ ಈ ಮೂರು ಆಟಗಾರರ ಮೇಲೆ. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಉಳಿಯುವ ಸಾಧ್ಯತೆ ಶೇ. 10ಕ್ಕಿಂತಲೂ ಕಡಿಮೆ ಇದೆ. ಏಕೆಂದರೆ ನಾಲ್ಕನೇ ಆಟಗಾರನ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ನಡುವೆ ಭಾರಿ ಪೈಪೋಟಿ ಇದ್ದು, ಹಾರ್ದಿಕ್ ಪಾಂಡ್ಯ ತಂಡದಿಂದ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ’ ಎಂದು ವಿವರಿಸಿದ್ದಾರೆ.
ಅಂದಹಾಗೆ ಹಾರ್ದಿಕ್ ಪಾಂಡ್ಯ ಅವರನ್ನು ಕೈ ಬಿಡಲು ಬಲವಾದ ಕಾರಣವೂ ಇದೆ. 2 ವರ್ಷಗಳ ಹಿಂದೆ ಇದ್ದಂತಹ ಪರಿಣಾಮಕಾರಿ ಆಲ್‌ರೌಂಡರ್ ಆಗಿ ಹಾರ್ದಿಕ್ ಈಗ ಉಳಿದಿಲ್ಲ. 2019ರಲ್ಲಿ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಪಡೆದ ಬಳಿಕ ಹಾರ್ದಿಕ್ ಫ್ರಾಂಚೈಸಿ ತಂಡದ ಪರ ಬೌಲಿಂಗ್ ಮಾಡಿಲ್ಲ. ಬ್ಯಾಟಿಂಗ್‌ನಲ್ಲಿಯೂ ಲಯ ಕಂಡುಕೊಂಡಿಲ್ಲ. ಆದ್ದರಿಂದ ಪಾಂಡ್ಯರನ್ನು ಕೈಬಿಡುವ ಯೋಚನೆಯಲ್ಲಿ ಮುಂಬೈ ತಂಡವಿದೆ ಎಂದು ಹೇಳಲಾಗಿದೆ.
T20 World Cup: ಇಂದು ಎರಡು ಪಂದ್ಯ: ಮಾಡು ಇಲ್ಲವೇ ಕಾದಾಟದಲ್ಲಿ ವಿಂಡೀಸ್-ಬಾಂಗ್ಲಾ; ಪಾಕ್ಗೆ ಸೋಲುಣಿಸುತ್ತಾ ಅಫ್ಘಾನ್
David Warner: ಫಾರ್ಮ್ಗೆ ಬಂದ ಡೇವಿಡ್ ವಾರ್ನರ್: ಅಗ್ರಸ್ಥಾನದತ್ತ ಆಸ್ಟ್ರೇಲಿಯಾ ಕಣ್ಣು: 5ನೇ ಸ್ಥಾನದಲ್ಲಿ ಭಾರತ
(Mumbai Indians unlikely decides to drop Hardik Pandya ahead of IPL 2022 mega auction)