
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ (MI vs UPW) ತಂಡಗಳು ಮುಖಾಮುಖಿಯಾಗಿದ್ದವು. ಕಳೆದ 48 ಗಂಟೆಗಳಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಜನವರಿ 15 ರ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಗೆಲುವು ಸಾಧಿಸಿದ್ದರಿಂದ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಎಲ್ಲರೂ ಕಾತುರರಾಗಿದ್ದರು. ಅದರಂತೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಇತ್ತ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡ 187 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 20 ಓವರ್ಗಳಲ್ಲಿ 165 ರನ್ ಕಲೆಹಾಕಲಷ್ಟೇ ಶಕ್ತವಾಗಿ 22 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಆವೃತ್ತಿಯಲ್ಲಿ ಮುಂಬೈ ತಂಡದ ಮೂರನೇ ಸೋಲು ಇದಾಗಿದ್ದು, ಯುಪಿ ವಾರಿಯರ್ಸ್ ವಿರುದ್ಧ ಸತತ ಎರಡನೇ ಸೋಲು ಕಂಡಿದೆ. ಆದಾಗ್ಯೂ ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್‌ಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ನಿಕೋಲಾ ಕ್ಯಾರಿ ಕಿರಣ್ ನವ್‌ಗಿರೆ ಅವರನ್ನು ಬೌಲ್ಡ್ ಮಾಡಿದರು. ಆರಂಭಿಕ ಹಿನ್ನಡೆಯ ನಂತರ, ನಾಯಕಿ ಮೆಗ್ ಲ್ಯಾನಿಂಗ್, ಫೋಬೆ ಲಿಚ್‌ಫೀಲ್ಡ್ ಅವರೊಂದಿಗೆ ಯುಪಿ ವಾರಿಯರ್ಸ್‌ನ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಇಬ್ಬರೂ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ಎರಡನೇ ವಿಕೆಟ್‌ಗೆ 119 ರನ್‌ಗಳನ್ನು ಸೇರಿಸಿದರು. ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ತಮ್ಮ ತಮ್ಮ ಅರ್ಧಶತಕವನ್ನು ಪೂರೈಸಿದರು. ಲಿಚ್‌ಫೀಲ್ಡ್ ಅವರನ್ನು ಔಟ್ ಮಾಡುವ ಮೂಲಕ ಅಮನ್‌ಜೋತ್ ಕೌರ್ ಈ ಪಾಲುದಾರಿಕೆಯನ್ನು ಮುರಿದರು. ಲಿಚ್‌ಫೀಲ್ಡ್ 37 ಎಸೆತಗಳಲ್ಲಿ 61 ರನ್‌ಗಳಿಗೆ ಏಳು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿ ಔಟಾದರು. ಲಿಚ್‌ಫೀಲ್ಡ್ ಔಟಾದ ಸ್ವಲ್ಪ ಸಮಯದ ನಂತರ ಲ್ಯಾನಿಂಗ್ ಕೂಡ ಪೆವಿಲಿಯನ್‌ಗೆ ಮರಳಿದರು. ಅವರು 45 ಎಸೆತಗಳಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು
ಇದಾದ ನಂತರ, ಹರ್ಲೀನ್ ಡಿಯೋಲ್ ಮತ್ತು ಕ್ಲೋಯ್ ಟ್ರಯಾನ್ ತಂಡವನ್ನು ಮುನ್ನಡೆಸಿದರು. ಇಬ್ಬರ ನಡುವೆ ಉತ್ತಮ ಜೊತೆಯಾಟ ಬೆಳೆಯುತ್ತಿತ್ತು. ಆದರೆ ನಟಾಲಿ ಟ್ರಯಾನ್ 13 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿ ಔಟಾದರು. ಮುಂದಿನ ಎಸೆತದಲ್ಲಿ ಬ್ರಂಟ್, ಶ್ವೇತಾ ಸೆಹ್ರಾವತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಯುಪಿ ವಾರಿಯರ್ಸ್ ಪರ, ಹರ್ಲೀನ್ ಡಿಯೋಲ್ 25 ಮತ್ತು ಸೋಫಿ ಎಕ್ಲೆಸ್ಟೋನ್ ಒಂದು ರನ್ ಗಳಿಸಿದರು. ಮುಂಬೈ ಪರ ಅಮೆಲಿಯಾ ಕೆರ್ ಮೂರು ವಿಕೆಟ್ ಪಡೆದರೆ, ನ್ಯಾಟ್ ಶೀವರ್ ಬ್ರಂಟ್ ಎರಡು ವಿಕೆಟ್ ಪಡೆದರು. ಇದಲ್ಲದೆ, ನಿಕೋಲಾ ಕ್ಯಾರಿ, ಹೇಲಿ ಮ್ಯಾಥ್ಯೂಸ್ ಮತ್ತು ಅಮನ್‌ಜೋತ್ ಕೌರ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಮುಂಬೈಗೂ ಸಾಧಾರಣ ಆರಂಭ ಸಿಕ್ಕಿತು. ಸ್ಫೋಟಕ ಬ್ಯಾಟರ್ ಹೇಲಿ ಮ್ಯಾಥ್ಯೂಸ್ 13 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 13 ರನ್ ಗಳಿಸಿದ ನಂತರ ಔಟಾದರು. ನಂತರ ಬ್ರಂಟ್ ಕೂಡ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆ ಬಳಿಕ ಬಂದ ನಿಕೋಲಾ ಕ್ಯಾರಿ, ಹರ್ಮನ್‌ಪ್ರೀತ್ ಕೌರ್ ಬೇಗನೇ ಪೆವಿಲಿಯನ್ ಸೇರಿಕೊಂಡರು. ಇದು ಮುಂಬೈ ತಂಡದ ಒತ್ತಡ ಹೆಚ್ಚಿಸಿತು.
ಐದು ವಿಕೆಟ್‌ಗಳ ಪತನದ ನಂತರ ಜೊತೆಯಾದ ಅಮೆಲಿಯಾ ಕೆರ್ ಮತ್ತು ಅಮನ್‌ಜೋತ್ ಕೌರ್ ಅದ್ಭುತ ಬ್ಯಾಟಿಂಗ್ ಮಾಡಿ 45 ಎಸೆತಗಳಲ್ಲಿ 83 ರನ್‌ಗಳ ಪಾಲುದಾರಿಕೆಯನ್ನು ಮಾಡುವ ಮೂಲಕ ಗೆಲುವಿಗೆ ಹೋರಾಟ ನೀಡಿದರು. ಆದಾಗ್ಯೂ ಶಿಖಾ ಪಾಂಡೆ, ಅಮನ್‌ಜೋತ್ ಅವರನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 41 ರನ್ ಗಳಿಸಿದ ನಂತರ ಅಮನ್‌ಜೋತ್ ಔಟಾದರೆ, 28 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ಸಹಾಯದಿಂದ 49 ರನ್ ಗಳಿಸಿದ ಅಮೇಲಿಯಾ ಅಜೇಯರಾಗಿ ಉಳಿದರು. ಯುಪಿ ಪರ ಶಿಖಾ ಎರಡು ವಿಕೆಟ್ ಪಡೆದರೆ, ಕ್ರಾಂತಿ ಗೌರ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ ಮತ್ತು ಟ್ರಿಯಾನ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Sat, 17 January 26