AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾ ವೇಗಿ ಅರ್ಷದೀಪ್​ ಸಿಂಗ್​ಗೆ ಬಿಗ್ ಶಾಕ್ ನೀಡಿದ ಐಸಿಸಿ

Arshdeep Singh Fined by ICC: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕ್ರೀಡಾಸ್ಫೂರ್ತಿ ಮರೆತ ಟೀಂ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ ಮೇಲೆ ಐಸಿಸಿ ಕ್ರಮ ಕೈಗೊಂಡಿದೆ. ನ್ಯೂಜಿಲೆಂಡ್‌ನ ಡ್ಯಾರೆಲ್ ಮಿಚೆಲ್ ಮೇಲೆ ಆಕ್ರಮಣಕಾರಿಯಾಗಿ ಚೆಂಡೆಸೆದಿದ್ದಕ್ಕೆ ಅರ್ಷದೀಪ್​ಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಟೀಂ ಇಂಡಿಯಾ ವೇಗಿ ಅರ್ಷದೀಪ್​ ಸಿಂಗ್​ಗೆ ಬಿಗ್ ಶಾಕ್ ನೀಡಿದ ಐಸಿಸಿ
Arshdeep Singh
ಪೃಥ್ವಿಶಂಕರ
|

Updated on:Mar 10, 2026 | 4:50 PM

Share

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup) ಫೈನಲ್ ಪಂದ್ಯದಲ್ಲಿ ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ್ದ ಟೀಂ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಮೇಲೆ ಇದೀಗ ಐಸಿಸಿ (ICC) ಕ್ರಮಕೈಗೊಂಡಿದೆ. ನ್ಯೂಜಿಲೆಂಡ್ ಇನ್ನಿಂಗ್ಸ್ ವೇಳೆ ಸ್ಟ್ರೈಕ್​ನಲ್ಲಿದ್ದ ಡ್ಯಾರೆಲ್ ಮಿಚೆಲ್ (Daryl Mitchell) ಮೇಲೆ ಬಾಲ್ ಎಸೆದು ಆಕ್ರಮಣಕಾರಿಯಾಗಿ ವರ್ತಿಸಿದ್ದ ಅರ್ಷದೀಪ್​ಗೆ ಐಸಿಸಿ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ವೇತನವನ್ನು ದಂಡವಾಗಿ ವಿಧಿಸುವುದರ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಿದೆ. ಹೀಗಾಗಿ ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಅರ್ಷದೀಪ್ ಸಿಂಗ್ ಐಸಿಸಿಯಿಂದ ದಂಡನೆಗೆ ಒಳಗಾಗಿ ತಲೆತಗ್ಗಿಸಬೇಕಾಗಿದೆ.

ಫೈನಲ್ ವೇಳೆ ನಡೆದಿದ್ದೇನು?

ವಾಸ್ತವವಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಮಿಚೆಲ್, ಅರ್ಷದೀಪ್ ಸಿಂಗ್ ಅವರ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಎರಡು ಸಿಕ್ಸರ್‌ಗಳನ್ನು ಹೊಡೆಸಿಕೊಂಡ ನಂತರ ಅರ್ಷದೀಪ್ ಕೊಂಚ ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿದರು. ಅರ್ಷದೀಪ್ ಅವರ ಐದನೇ ಎಸೆತದಲ್ಲಿ, ಡ್ಯಾರಿಲ್ ಮಿಚೆಲ್ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅರ್ಷದೀಪ್‌ ಕಡೆಗೆ ಹೋಯಿತು. ನಂತರ ಅರ್ಷದೀಪ್ ಚೆಂಡನ್ನು ಹಿಡಿದು ಡ್ಯಾರಿಲ್ ಮಿಚೆಲ್ ಕಡೆಗೆ ಎಸೆದರು. ರಬಸವಾಗಿ ಬಂದ ಚೆಂಡು ಬ್ಯಾಟರ್ ಮಿಚೆಲ್​ಗೆ ಬಡಿಯಿತು.

ಇದರಿಂದ ತುಂಬಾ ಕೋಪಗೊಂಡ ಮಿಚೆಲ್ ಜೋರಾಗಿ ಏನನ್ನೋ ಹೇಳುತ್ತಾ ಅರ್ಷದೀಪ್ ಬಳಿಗೆ ಬರಲು ಪ್ರಾರಂಭಿಸಿದರು. ಆದರೆ ಅರ್ಷದೀಪ್ ತಾನು ಎಸಗಿದ ಕೃತ್ಯಕ್ಕೆ ಮಿಚೆಲ್ ಬಳಿ ಕ್ಷಮೆಯನ್ನು ಕೇಳದೆ ಮತ್ತೆ ಬೌಲಿಂಗ್ ಮಾಡುವತ್ತ ಗಮನ ಹರಿಸಿದರು. ಇತ್ತ ಮಿಚೆಲ್ ಆಕ್ರೋಶವನ್ನು ಗಮನಿಸಿದ ಸೂರ್ಯಕುಮಾರ್ ಯಾದವ್, ಅವರ ಬಳಿಗೆ ಬಂದು ಸಾಂತ್ವನ ಹೇಳಲು ಪ್ರಯತ್ನಿಸಿದರು. ಹಾಗೆಯೇ ಅಂಪೈರ್, ಅರ್ಷದೀಪ್ ಅವರನ್ನು ಕರೆದು ಹಾಗೆ ಮಾಡದಂತೆ ಸಲಹೆ ನೀಡಿದರು. ಕೊನೆಗೆ ಅರ್ಷದೀಪ್ ತನ್ನ ತಪ್ಪನ್ನು ಒಪ್ಪಿಕೊಂಡು ಮಿಚೆಲ್ ಬಳಿ ಕ್ಷಮೆಯಾಚಿಸಿದ್ದರು.

ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್

ಇದೀಗ ಆಟದ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದ ಅರ್ಷದೀಪ್ ಸಿಂಗ್‌ಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಿದೆ. ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ಅರ್ಷದೀಪ್ ಈ ಶಿಕ್ಷೆಗೆ ಗುರಿಯಾಗಿದ್ದಾರೆ. ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅನುಚಿತ ಮತ್ತು ಅಪಾಯಕಾರಿ ರೀತಿಯಲ್ಲಿ ಚೆಂಡನ್ನು (ಅಥವಾ ಯಾವುದೇ ಇತರ ಕ್ರಿಕೆಟ್ ವಸ್ತು) ಆಟಗಾರನ ಕಡೆಗೆ ಎಸೆಯುವುದಕ್ಕೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿರುವ ಅರ್ಷದೀಪ್​ಗೆ ದಂಡದ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ನೀಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Tue, 10 March 26

Follow Us