ಟಿ20 ವಿಶ್ವಕಪ್ ಗೆದ್ದು ಅಗಲಿದ ಅಪ್ಪನ ಬಗ್ಗೆ ರಿಂಕು ಸಿಂಗ್ ಭಾವುಕ ಸಂದೇಶ
Rinku Singh: ಟಿ20 ವಿಶ್ವಕಪ್ ಗೆಲುವಿನ ಬಳಿಕ ರಿಂಕು ಸಿಂಗ್ ತಮ್ಮ ದಿವಂಗತ ತಂದೆಗೆ ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸೂಪರ್ 8 ವೇಳೆ ತಂದೆ ನಿಧನರಾಗಿದ್ದರೂ, ರಾಷ್ಟ್ರೀಯ ಕರ್ತವ್ಯಕ್ಕಾಗಿ ತಂಡ ಸೇರಿದ್ದ ರಿಂಕು, ತಂದೆಯ ಕನಸು ನನಸಾಗಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಅಪ್ಪ" ಎಂದು ಹೇಳಿರುವ ರಿಂಕು, ತಮ್ಮ ವೈಯಕ್ತಿಕ ನೋವಿನ ನಡುವೆಯೂ ದೇಶಕ್ಕಾಗಿ ಹೋರಾಡಿದ ಕಥೆ ಇದು.

ಟಿ20 ವಿಶ್ವಕಪ್ (T20 World Cup) ಸಮಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ (Rinku Singh) ಅವರ ತಂದೆ ಸಾವನ್ನಪ್ಪಿದ್ದು ಎಲ್ಲರಿಗೂ ತಿಳಿದಿರುವಂತದ್ದೆ. ಸೂಪರ್ 8 ಸುತ್ತು ನಡೆಯುವ ಸಂದರ್ಭದಲ್ಲಿ ರಿಂಕು ಸಿಂಗ್ ಇದ್ದಕ್ಕಿದ್ದಂತೆ ತಂಡ ತೊರೆದಿದ್ದರು. ರಿಂಕು ಅವರ ತಂದೆಯ ಸ್ಥಿತಿ ಗಂಭೀರವಾಗಿದ್ದರಿಂದ ರಿಂಕು ತಂಡವನ್ನು ತೊರೆದು ಮನೆಗೆ ಮರಳಿದ್ದರು. ಆದರೆ ಕ್ಯಾನ್ಸರ್ನಿಂದ ಬಳಲುತ್ತಿದ್ದ ರಿಂಕು ಅವರ ತಂದೆ ಬದುಕುಳಿಯಲಿಲ್ಲ. ಈ ನೋವಿನ ನಡುವೆಯ ರಾಷ್ಟ್ರೀಯ ಕರ್ತವ್ಯಕ್ಕಾಗಿ ರಿಂಕು ಸಿಂಗ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಟಿ20 ವಿಶ್ವಕಪ್ ಗೆದ್ದು ತನ್ನ ಬದುಕು ಬದಲಿಸಿದ ತಂದೆಯ ಬಗ್ಗೆ ರಿಂಕು ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಅಪ್ಪ..
ತನ್ನ ತಂದೆಯೊಂದಿಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ರಿಂಕು ಸಿಂಗ್, ‘ನಾನು ನಿಮ್ಮೊಂದಿಗೆ ಮಾತನಾಡದೆ ಇಷ್ಟು ದಿನಗಳನ್ನು ಎಂದಿಗೂ ಕಳೆದಿಲ್ಲ. ನೀವು ಇಲ್ಲದೆ ನಾನು ಹೇಗೆ ಮುಂದುವರಿಯುತ್ತೇನೆ ಎಂದು ನನಗೆ ತಿಳಿದಿಲ್ಲ, ಆದರೆ ನನಗೆ ಪ್ರತಿ ಹಂತದಲ್ಲೂ ನೀವು ಬೇಕಾಗುತ್ತೀರಿ. ಕರ್ತವ್ಯ ಮೊದಲು ಎಂದು ನೀವು ನನಗೆ ಕಲಿಸಿದ್ದೀರಿ, ಆದ್ದರಿಂದ ನಾನು ಮೈದಾನದಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದೆ. ಈಗ ನಿಮ್ಮ ಕನಸು ನನಸಾಗಿದೆ, ನೀವು ಈಗ ನನ್ನೊಂದಿಗೆ ಇದ್ದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಂತೋಷದಲ್ಲೂ ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಅಪ್ಪಾ’ ಎಂದು ರಿಂಕು ಸಿಂಗ್ ಬರೆದಿದ್ದಾರೆ.
View this post on Instagram
ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಪ್ರದರ್ಶನ
ಟಿ20 ವಿಶ್ವಕಪ್‌ನಲ್ಲಿ ರಿಂಕು ಸಿಂಗ್ ಅವರ ಬ್ಯಾಟ್ ಮೌನವಾಗಿತ್ತು. ಈ ಪಂದ್ಯಾವಳಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ರಿಂಕು 8 ಸರಾಸರಿಯಲ್ಲಿ ಕೇವಲ 29 ರನ್ ಗಳಿಸಿದರು. ರಿಂಕು ಸಿಂಗ್ ವೈಫಲ್ಯದ ನಂತರ, ಭಾರತ ತಂಡವು ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿತು, ಸಂಜು ಮತ್ತು ಅಭಿಷೇಕ್ ಶರ್ಮಾ ಅವರನ್ನು ಇನ್ನಿಂಗ್ಸ್ ಆರಂಭಿಕರನ್ನಾಗಿ ಕಣಕ್ಕಿಳಿಸಿತು. ರಿಂಕು ಸಿಂಗ್ ಬದಲಿಗೆ ಅವರ ಸ್ಥಾನದಲ್ಲಿ ತಿಲಕ್ ವರ್ಮಾ ಅವರನ್ನು ಆಡಿಸಲಾಯಿತು. ಬ್ಯಾಟಿಂಗ್ ಸಂಯೋಜನೆಯಲ್ಲಿನ ಈ ಬದಲಾವಣೆಯು ಭಾರತೀಯ ತಂಡದ ಬ್ಯಾಟಿಂಗ್ ಅನ್ನು ಬಲಪಡಿಸಿತು, ಇದರ ಪರಿಣಾಮವಾಗಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತು.
T20 World Cup: ತಂಡವನ್ನು ತೊರೆದು ಇದ್ದಕ್ಕಿದ್ದಂತೆ ಮನೆಗೆ ಮರಳಿದ ರಿಂಕು ಸಿಂಗ್
ಟೀಂ ಇಂಡಿಯಾದಲ್ಲಿ ರಿಂಕು ಸ್ಥಾನ
ರಿಂಕು ಸಿಂಗ್ ಅವರ ಕಳಪೆ ಪ್ರದರ್ಶನದ ನಂತರ, ಅವರು ಟಿ20 ತಂಡದಲ್ಲಿ ಉಳಿಯುತ್ತಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಆದಾಗ್ಯೂ, ರಿಂಕು ಈಗ ಐಪಿಎಲ್ ಮೇಲೆ ಗಮನ ಹರಿಸಬೇಕಾಗಿದೆ. ರಿಂಕು ಸಿಂಗ್ ಮಾರ್ಚ್ 28 ರಂದು ಪ್ರಾರಂಭವಾಗುವ ಐಪಿಎಲ್ 2026 ರಲ್ಲಿ ಕೆಕೆಆರ್ ಪರ ಆಡಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Tue, 10 March 26
