ಮಿರ್ಪುರ್ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕುರ್ ರಹೀಮ್ (Mushfiqur Rahim) ವಿಚಿತ್ರವಾಗಿ ಔಟಾಗಿದ್ದರು. ಅದು ಕೂಡ ಬ್ಯಾಟ್ನಿಂದ ಬಾಲ್ ಅನ್ನು ಬಾರಿಸಿ ಚೆಂಡನ್ನು ಮುಟ್ಟುವ ಮೂಲಕ ಎಂಬುದು ಇಲ್ಲಿ ಅಚ್ಚರಿ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹಸನ್ ಜಾಯ್ (14) ಹಾಗೂ ಝಾಕಿರ್ ಹಸನ್ (8) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆ ಬಳಿಕ ಬಂದ ನಾಯಕ ನಜ್ಮುಲ್ ಹೊಸೈನ್ ಶಾಂಟೊ (5) ಹಾಗೂ ಮೊಯಿನುಲ್ ಹಕ್ (5) ಕ್ರೀಸ್ ಕಚ್ಚಿ ನಿಲ್ಲುವಲ್ಲಿ ವಿಫಲರಾದರು.
ಈ ಹಂತದಲ್ಲಿ ಜೊತೆಗೂಡಿದ ಮುಶ್ಫಿಕುರ್ ರಹೀಮ್ ಹಾಗೂ ಶಾಹದತ್ ಹೊಸೈನ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಐದನೇ ವಿಕೆಟ್ಗೆ ಜೊತೆಗೂಡಿದ ಈ ಜೋಡಿಯು 57 ರನ್ಗಳ ಕಾಣಿಕೆ ನೀಡಿದರು. ಆದರೆ ಪಂದ್ಯದ 41ನೇ ಓವರ್ನ 4ನೇ ಎಸೆತದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಮುಶ್ಫಿಕುರ್ ರಹೀಮ್ ಔಟಾದರು. ಕೈಲ್ ಜೇಮಿಸನ್ ಎಸೆದ ಎಸೆತವನ್ನು ಮುಶ್ಫಿಕುರ್ ರಕ್ಷಣಾತ್ಮಕವಾಗಿ ಆಡಿದ್ದರು. ಬ್ಯಾಟ್ಗೆ ತಾಗಿದ ಚೆಂಡು ಮತ್ತೆ ಬೌನ್ಸ್ ಆಗುತ್ತಿದ್ದಂತೆ ಬಾಂಗ್ಲಾದೇಶ್ ತಂಡದ ಆಟಗಾರ ಕೈಯಿಂದ ತಡೆದರು.
ಇದರ ಬೆನ್ನಲ್ಲೇ ನ್ಯೂಝಿಲೆಂಡ್ ಆಟಗಾರರು ಫೀಲ್ಡ್ ಅಂಪೈರ್ಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಪುರಸ್ಕರಿಸಿದ ತೀರ್ಪುಗಾರರು ಚರ್ಚಿಸಿ ಮರು ಪರಿಶೀಲನೆಗೆ ಮೂರನೇ ಅಂಪೈರ್ಗೆ ಮನವಿ ಸಲ್ಲಿಸಿದರು.
ರೀಪ್ಲೆ ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ಮೂಲಕ ಮುಶ್ಫಿಕುರ್ ರಹೀಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ಗೆ ಅಡ್ಡಿಪಡಿಸಿ ಔಟಾದ ಮೊದಲ ಬಾಂಗ್ಲಾದೇಶ ಬ್ಯಾಟರ್ ಎನಿಸಿಕೊಂಡಿದ್ದಾರೆ.
Mushfiqur Rahim out for obstructing the field.
– He is the first Bangladesh batter to dismiss by this way in cricket history.pic.twitter.com/MfZONDzswk
— Johns. (@CricCrazyJohns) December 6, 2023
ಐಸಿಸಿ ನಿಯಮ 37.1.2 ರ ಪ್ರಕಾರ, “37.2 ರ ಸಂದರ್ಭಗಳನ್ನು ಹೊರತುಪಡಿಸಿ, ಬೌಲರ್ ಎಸೆದ ಚೆಂಡನ್ನು ಸ್ವೀಕರಿಸುವ ಕ್ರಿಯೆಯಲ್ಲಿ, ಅವನು/ಅವಳು ಉದ್ದೇಶಪೂರ್ವಕವಾಗಿ ಬ್ಯಾಟ್ ಅನ್ನು ಹಿಡಿಯದೆ ಕೈಯಿಂದ ಚೆಂಡನ್ನು ಹೊಡೆಯುವಂತಿಲ್ಲ ಅಥವಾ ತಡೆಯುವಂತಿಲ್ಲ. ಹಾಗೆಯೇ ಕೈಯಿಂದ ಚೆಂಡನ್ನು ತಡೆದು ಫೀಲ್ಡರ್ಗಳಿಗೆ ಅಡ್ಡಿಪಡಿಸುವಂತಿಲ್ಲ.
ಇದನ್ನೂ ಓದಿ: Shubman Gill: ಸಚಿನ್ರ ಮತ್ತೊಂದು ವಿಶ್ವ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್
ಒಂದು ವೇಳೆ ಚೆಂಡು ವಿಕೆಟ್ಗೆ ಬೀಳುತ್ತಿದ್ದರೆ ಒಂದಕ್ಕಿಂತ ಹೆಚ್ಚು ಬಾರಿ ಚೆಂಡನ್ನು ಹೊಡೆಯಬಹುದು ಎಂದು ತಿಳಿಸಲಾಗಿದೆ.
ಇಲ್ಲಿ ಮುಶ್ಫಿಕುರ್ ರಹೀಮ್ ಹೊರ ಹೋಗುತ್ತಿದ್ದಂತೆ ಚೆಂಡನ್ನು ಕೈಯಿಂದ ತಡೆದಿದ್ದಾರೆ. ಹೀಗಾಗಿ ಐಸಿಸಿ ನಿಯಮದ ಪ್ರಕಾರ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ.