ರಾಷ್ಟ್ರೀಯ ತಂಡದ ವಿರುದ್ಧ ಏಕದಿನ ಸರಣಿ ಆಡಲು ಕರ್ನಾಟಕ ತಂಡ ನಮೀಬಿಯಾದಲ್ಲಿ (Namibia vs Karnataka) ಬೀಡುಬಿಟ್ಟಿದೆ. ನಮೀಬಿಯಾ ಅಂತರರಾಷ್ಟ್ರೀಯ ತಂಡದ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಶುಕ್ರವಾರ ನಮೀಬಿಯಾದ ರಾಷ್ಟ್ರ ರಾಜಧಾನಿ ವಿಂಡ್‌ಹೋಕ್‌ನಲ್ಲಿ (Windhoek) ನಡೆದ ಮೊದಲ ಏಕದಿನ ಪಂದ್ಯದಲ್ಲಿ ರಾಜ್ಯ ತಂಡ ಭರ್ಜರಿ ಪ್ರದರ್ಶನ ತೋರಿದೆ. ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಕರ್ನಾಟಕ ತಂಡ ಬರೋಬ್ಬರಿ 9 ವಿಕೆಟ್ಗಳ ಅಮೋಘ ಜಯ ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ (ODI Series) ಕರ್ನಾಟಕ 1-0 ಮುನ್ನಡೆ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ನಮೀಬಿಯಾ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ವಿಧ್ವತ್ ಕಾವೇರಪ್ಪ ಹಾಗೂ ರಿಷಿ ಬೋಪಣ್ಣ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ತಂಡದ ಪರ ನಾಲ್ಕು ಬ್ಯಾಟರ್ಗಳ ಸ್ಕೋರ್ ಮಾತ್ರ ಎರಡಂಕಿ ದಾಟಿತು. ಜಾನ್ ಫ್ರೈಲಿಂಕ್ 61 ಎಸೆತಗಳಲ್ಲಿ 57 ರನ್ ಗಳಿಸಿದರೆ, ನಾಯಕ ಗೆರ್ಹಾರ್ಡ್ ಎರಸ್ಮುಸ್ 31 ರನ್ ಬಾರಿಸಿದರು. ನಮೀಬಿಯಾ 41.1 ಓವರ್ನಲ್ಲಿ 171 ರನ್ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ವಿಧ್ವತ್ 8.1 ಓವರ್ಗೆ 16 ರನ್ ನೀಡಿ 4 ವಿಕೆಟ್ ಕಿತ್ತರೆ, ರಿಷಿ 3 ವಿಕೆಟ್ ಪಡೆದರು.
WTC Final 2023: ಡಬ್ಲ್ಯುಟಿಸಿ ಫೈನಲ್ ಗೆದ್ದರೆ ಕ್ರಿಕೆಟ್ ದುನಿಯಾದಲ್ಲಿ ಹೊಸ ಇತಿಹಾಸ ಬರೆಯಲಿದೆ ಟೀಂ ಇಂಡಿಯಾ..!
ಸುಲಭ ಟಾರ್ಗೆಟ್ ಬೆನ್ನಟ್ಟಿದ ಕರ್ನಾಟಕ ತಂಡ 35.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಜಯ ಕಂಡಿತು. ರಾಜ್ಯ ತಂಡದ ಪರ ನಾಯಕ ರವಿಕುಮಾರ್ ಸಮರ್ಥ್ 100 ಎಸೆತಗಳಲ್ಲಿ ಅಜೇಯ 78 ರನ್ ಚಚ್ಚಿದರೆ, ನಿಕಿಲ್ ಜೋಸ್ 77 ಎಸೆತಗಳಲ್ಲಿ ಅಜೇಯ 56 ರನ್ ಬಾರಿಸಿದರು. ಎಲ್ಆರ್ ಚೇತನ್ 37 ರನ್ಗಳ ಕೊಡುಗೆ ನೀಡಿದರು. ದ್ವಿತೀಯ ಏಕದಿನ ಪಂದ್ಯ ಇದೇ ಮೈದಾನದಲ್ಲಿ ಜೂನ್ 4 ಭಾನುವಾರದಂದು ನಡೆಯಲಿದೆ.
ನಮೀಬಿಯಾ ಪ್ರವಾಸಕ್ಕೆ ಕರ್ನಾಟಕ ತಂಡದಲ್ಲಿ ಕಿರಿಯ ಆಟಗಾರರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಅನೀಶ್ವರ್ ಗೌತಮ್, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಎಲ್ಆರ್ ಚೇತನ್, ನಿಕಿನ್ ಜೋಸ್ ಸೇರಿದಂತೆ ಯುವ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಅಂದಹಾಗೆ ಕರ್ನಾಟಕ ತಂಡ ವಿದೇಶಿ ಟೀಮ್ ಜೊತೆ ಆಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಯುಎಸ್ಎ ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಿ ಜಯ ಸಾಧಿಸಿತ್ತು. ಇದೀಗ ಐಸಿಸಿ ಸಹಾಯಕ ಸದಸ್ಯ ರಾಷ್ಟ್ರವಾಗಿರುವ ನಮೀಬಿಯಾ ವಿರುದ್ಧ ಆಡುತ್ತಿರುವುದು ವಿಶೇಷ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ