Asia Cup 2022: ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಬ್ಯಾಟ್ ಮಾರಾಟಕ್ಕಿಟ್ಟ ಪಾಕ್ ಕ್ರಿಕೆಟಿಗ! ಕಾರಣವೇನು ಗೊತ್ತಾ?

| Updated By: ಪೃಥ್ವಿಶಂಕರ

Updated on: Sep 10, 2022 | 3:54 PM

Asia Cup 2022: ವಾಸ್ತವವಾಗಿ ನಾಸಿಮ್ ಸಿಕ್ಸರ್ ಬಾರಿಸಿದ ಬ್ಯಾಟ್ ಅವರದ್ದಲ್ಲ. ತಂಡದ ಮತ್ತೊಬ್ಬ ಯುವ ವೇಗಿ ಮೊಹಮ್ಮದ್ ಹಸ್ನೈನ್ ಅವರ ಬ್ಯಾಟನ್ನು ನಾಸಿಮ್ ಎರವಲು ಪಡೆದಿದ್ದರು.

Asia Cup 2022: ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಬ್ಯಾಟ್ ಮಾರಾಟಕ್ಕಿಟ್ಟ ಪಾಕ್ ಕ್ರಿಕೆಟಿಗ! ಕಾರಣವೇನು ಗೊತ್ತಾ?
Follow us on

ಏಷ್ಯಾಕಪ್​ನಲ್ಲಿ (Asia Cup 2022) ಸೂಪರ್ ಪ್ರದರ್ಶನ ನೀಡಿರುವ ಪಾಕಿಸ್ತಾನ ತಂಡ ಸದ್ಯ ಚಾಂಪಿಯನ್ ಪಟ್ಟಕ್ಕಾಗಿ ಲಂಕಾ ತಂಡವನ್ನು ಭಾನುವಾರ ಎದುರಿಸುತ್ತಿದೆ. ಆದರೆ ಈ ವೇಳೆ ಅತಿವೃಷ್ಟಿಯಿಂದ ಇಡೀ ಪಾಕಿಸ್ತಾನ ಪ್ರವಾಹದಲ್ಲಿ ಸಿಲುಕಿದೆ. ಭಾರತದ ನೆರೆಯ ದೇಶ ಈ ವರ್ಷ ಭೀಕರ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. ಪ್ರವಾಹಕ್ಕೆ ಸಿಲುಕಿರುವ ಹಳ್ಳಿಗಳಲ್ಲಿ ಪಾಕ್ ಕ್ರಿಕೆಟಿಗರ ನೆಲೆಯೂ ಇದೆ. ಆದ್ದರಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಹೊಸ ಸ್ಟಾರ್ ನಸೀಮ್ ಶಾ (Naseem Shah) ಈ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವಾಸಿಗಳ ಪರವಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ.

ಏಷ್ಯಾಕಪ್​ನ ರೋಚಕ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿತು. ಕೊನೆಯ ಓವರ್​ನ ಮೊದಲ ಎರಡು ಎಸೆತಗಳಲ್ಲಿ ನಾಸಿಮ್ ಶಾ ಜೋಡಿ ಸಿಕ್ಸರ್ ಬಾರಿಸಿದ್ದರು. ಆ ಮೂಲಕ ಪಾಕ್ ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಈಗ ಪಾಕ್ ತಂಡವನ್ನು ಫೈನಲ್​ಗೆ ಕರೆದೊಯ್ಯುವಲ್ಲಿ ನೆರವಾದ ಬ್ಯಾಟನ್ನು ನಾಸಿಮ್ ಮಾರಲು ಮುಂದಾಗಿದ್ದಾರೆ. ಹರಾಜಿನಿಂದ ಬಂದ ಹಣವನ್ನು ಪ್ರವಾಹ ಪೀಡಿತ ದೇಶವಾಸಿಗಳಿಗೆ ನೀಡಲು ನಾಸಿಮ್ ಬಯಸಿದ್ದಾರೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕೃತ ಟ್ವಿಟರ್ ಪೇಜ್ ನಸೀಮ್ ಅವರ ಬ್ಯಾಟ್ ಹರಾಜನ್ನು ಪ್ರಕಟಿಸಿದೆ.

ಆದರೆ, ಇಲ್ಲೊಂದು ವಿಚಿತ್ರ ಸಂಗಿತಿಯಿದೆ. ಅದೆನೆಂದರೆ, ವಾಸ್ತವವಾಗಿ ನಾಸಿಮ್ ಸಿಕ್ಸರ್ ಬಾರಿಸಿದ ಬ್ಯಾಟ್ ಅವರದ್ದಲ್ಲ. ತಂಡದ ಮತ್ತೊಬ್ಬ ಯುವ ವೇಗಿ ಮೊಹಮ್ಮದ್ ಹಸ್ನೈನ್ ಅವರ ಬ್ಯಾಟನ್ನು ನಾಸಿಮ್ ಎರವಲು ಪಡೆದಿದ್ದರು. ನಾಸಿಮ್​ ಅವರಿಗೆ ಅವರ ಸ್ವಂತ ಬ್ಯಾಟ್ ಇಷ್ಟವಾಗದ ಕಾರಣ, ಅವರು ಹಸನೈನ್ ಅವರಿಂದ ಬ್ಯಾಟ್ ಕೇಳಿ ಪಡೆದಿದ್ದರು. ಬಳಿಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಬ್ಯಾಟನ್ನು ಪಂದ್ಯದ ಮರುದಿನ ಹಸ್ನೈನ್, ನಾಸಿಮ್‌ಗೆ ಉಡುಗೊರೆಯಾಗಿ ನೀಡಿದರು. ಬಳಿಕ ನಾಸಿಮ್, ಆ ಬ್ಯಾಟನ್ನು ಹರಾಜು ಮಾಡುವುದಾಗಿ ಘೋಷಿಸಿದ್ದರು. ಈ ವಿಡಿಯೋವನ್ನು ಪಿಸಿಬಿ ಕೂಡ ಟ್ವೀಟ್ ಮಾಡಿತ್ತು.

ಏಷ್ಯಾಕಪ್‌ನಲ್ಲಿ ನಸೀಮ್ ಶಾ ತಮ್ಮ ಅದ್ಭುತ ಪ್ರದರ್ಶನದಿಂದ ಕ್ರಿಕೆಟ್ ಲೋಕದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಬೌಲಿಂಗ್​ನಲ್ಲಿ ಭಾರತದೆದುರು ಗಮನಾರ್ಹ ಪ್ರದರ್ಶನ ನೀಡಿದ್ದ ನಾಸಿಮ್, ಅಫ್ಘಾನ್ ವಿರುದ್ಧ ಬ್ಯಾಟಿಂಗ್​ನಲ್ಲೂ ಚಮತ್ಕಾರ ತೋರಿದ್ದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿತ್ತು. ಕೈಯಲ್ಲಿ ಒಂದು ವಿಕೆಟ್ ಮಾತ್ರ ಇತ್ತು. ಅಫ್ಘಾನಿಸ್ತಾನದ ವೇಗಿ ಫಜಲ್ಹಕ್ ಫಾರೂಕಿ ಅವರು ಒತ್ತಡದ ಕ್ಷಣದಲ್ಲಿ ಯಾರ್ಕರ್ ಮಾಡುವ ಬದಲು ಫುಲ್ ಟಾಸ್ ಎಸೆದರು. ಇದರ ಲಾಭ ಪಡೆದ ನಾಸಿಮ್ ಎರಡು ಬ್ಯಾಕ್​ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಪಾಕ್ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

Published On - 3:13 pm, Sat, 10 September 22