AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 1 ವಿಕೆಟ್​: ಇಂಡಿಯಾ ಎ ತಂಡದ ಗೆಲುವು ಕಸಿದ ‘ಬ್ಯಾಡ್ ಲೈಟ್’

ಭಾರತ ಎ ಮತ್ತು ನ್ಯೂಝಿಲೆಂಡ್ ಎ ನಡುವಣ 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ಲಿಂಕನ್‌ನಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನ್ಯೂಝಿಲೆಂಡ್ ಎ ತಂಡ ಮುನ್ನಡೆ ಪಡೆದಿದ್ದರೂ, ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ ಭಾರತ ಎ ತಂಡ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವ ಸನಿಹದಲ್ಲಿದ್ದರು.

ಕೇವಲ 1 ವಿಕೆಟ್​: ಇಂಡಿಯಾ ಎ ತಂಡದ ಗೆಲುವು ಕಸಿದ 'ಬ್ಯಾಡ್ ಲೈಟ್'
India AImage Credit source: BCCI
ಝಾಹಿರ್ ಯೂಸುಫ್
|

Updated on: Oct 27, 2026 | 1:20 PM

Share

ಲಿಂಕನ್‌ನ ಬರ್ಟ್ ಸಟ್‌ಕ್ಲಿಫ್ ಓವಲ್ ಮೈದಾನದಲ್ಲಿ ಭಾರತ ಎ ಮತ್ತು ನ್ಯೂಝಿಲೆಂಡ್ ಎ ತಂಡಗಳ ನಡುವೆ ನಡೆದ ಮೊದಲ ಅನ್‌ಅಫೀಶಿಯಲ್ ಟೆಸ್ಟ್ ಪಂದ್ಯವು ಮಂದ ಬೆಳಕಿನ (ಬ್ಯಾಡ್ ಲೈಟ್) ಕಾರಣದಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿದೆ. ರೋಚಕ ಘಟ್ಟ ತಲುಪಿದ್ದ ಈ ಪಂದ್ಯದಲ್ಲಿ ಭಾರತ ಎ ತಂಡದ ಗೆಲುವಿಗೆ ಕೇವಲ 1 ವಿಕೆಟ್ ಅಗತ್ಯವಿದ್ದಾಗ ಮಂದ ಬೆಳಕು ಎದುರಾದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಗೆಲುವಿನ ಹೊಸ್ತಿಲಲ್ಲಿದ್ದ ಭಾರತ ಎ ತಂಡಕ್ಕೆ ಕೇವಲ 1 ವಿಕೆಟ್ ದೂರದಲ್ಲಿ ಜಯ ಕೈತಪ್ಪಿದಂತಾಗಿದೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಎ ತಂಡದ ನಾಯಕ ರೈಸ್ ಮಾರಿಯು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಆಲೌಟ್ ಆಗಿ ತೀವ್ರ ಹಿನ್ನಡೆ ಅನುಭವಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಎ ತಂಡ 317 ರನ್ ಗಳಿಸಿ, 204 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.

204 ರನ್​​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ಮೊತ್ತ ಕೇವಲ 10 ರನ್ ಆಗುವಷ್ಟರಲ್ಲಿ ಇಬ್ಬರು ಸ್ಟಾರ್ ಓಪನರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.

ಈ ಹಂತದಲ್ಲಿ ಜೊತೆಗೂಡಿದ ದೇವದತ್ ಪಡಿಕ್ಕಲ್ (199) ಹಾಗೂ ಸಾಯಿ ಸುದರ್ಶನ್ (91) ಭರ್ಜರಿ ಪ್ರದರ್ಶನ ನೀಡಿದರು. ಆ ಬಳಿಕ ಬಂದ ಯಶ್ ರಾಥೋಡ್ 66 ರನ್​ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 52 ರನ್​ಗಳಿಸಿದರು. ಇನ್ನು ಆಖಿಬ್ ನಬಿ 38 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡವು 516 ರನ್​ಗಳಿಸಿ ದ್ವಿತೀಯ ಇನಿಂಗ್ಸ್ ಅಂತ್ಯಗೊಳಿಸಿತು.

313 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿನ 204 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 313 ರನ್​ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆಖಿಬ್ ನಬಿ ಯಶಸ್ವಿಯಾದರು. ನಾಯಕ ರೈಸ್ ಮಾರಿಯುನ (2) ಕ್ಲೀನ್ ಬೌಲ್ಡ್ ಮಾಡಿ ಮೊದಲ ಯಶಸ್ಸು ತಂದುಕೊಟ್ಟ ನಬಿ ಆ ಬಳಿಕ ಟಿಮ್ ರಾಬಿನ್ಸನ್ (0) ಅವರನ್ನು ಎಲ್​ಬಿ ಬಲೆಗೆ ಕೆಡವಿದರು. ಇದರ ಬೆನ್ನಲ್ಲೇ ಮ್ಯಾಥ್ಯೂ ಬಾಯ್ಲ್ (4) ವಿಕೆಟ್ ಕಬಳಿಸಿ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಜೊತೆಗೂಡಿದ  ಕರ್ಟಿಸ್ ಹೀಫಿ (90*) ಹಾಗೂ ಡೀನ್ ಫಾಕ್ಸ್‌ಕ್ರಾಫ್ಟ್ (42) ದಿಟ್ಟ ಹೋರಾಟ ನಡೆಸಿದರೂ, ಭಾರತೀಯ ಬೌಲರ್​ಗಳ ಶಿಸ್ತು ಬದ್ಧ ದಾಳಿಯಿಂದಾಗಿ 187 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಕೊನೆಯ ವಿಕೆಟ್ ಪಡೆಯಲು ಇಂಡಿಯಾ ಎ ಬೌಲರ್​ಗಳು ಹರಸಾಹಸ ಪಟ್ಟರು. ಇದರ ನಡುವೆ ದುರಾದೃಷ್ಟ ಎಂಬಂತೆ ಬ್ಯಾಡ್ ಲೈಟ್ ಎದುರಾಯಿತು. ಮಂದ ಬೆಳಕಿನ ಕಾರಣ ಅಂಪೈರ್ ಪಂದ್ಯವನ್ನು ಸ್ಥಗಿತಗೊಳಿಸಿದ್ದರು.

ಇತ್ತ ಕೊನೆಯ ದಿನದಾಟದಲ್ಲಿ ಭಾರತ ಎ ತಂಡಕ್ಕೆ ಪಂದ್ಯ ಗೆಲ್ಲಲು ಉಳಿದಿದ್ದ 18 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಪಡೆಯುವ ಸುಲಭ ಗುರಿಯಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಎದುರಾದ ಮಂದ ಬೆಳಕು ಭಾರತದ ಗೆಲುವಿಗೆ ವಿಲನ್ ಆಗಿ ಪರಿಣಮಿಸಿತು.

ಟೀಮ್ ಇಂಡಿಯಾ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಆಖಿಬ್ ನಬಿ 3 ವಿಕೆಟ್ ಕಬಳಿಸಿದರೆ, ಪಾರ್ಟ್ ಟೈಮ್ ಸ್ಪಿನ್ನರ್ ಆಗಿ ಕಾಣಿಸಿಕೊಂಡ ದೇವದತ್ ಪಡಿಕ್ಕಲ್ 2 ವಿಕೆಟ್ ಉರುಳಿಸಿದರು.

ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ದೇವದತ್ ಪಡಿಕ್ಕಲ್ , ಸಾಯಿ ಸುದರ್ಶನ್ , ಧ್ರುವ್ ಜುರೆಲ್ (ನಾಯಕ) , ಯಶ್ ರಾಥೋಡ್ , ವಾಷಿಂಗ್ಟನ್ ಸುಂದರ್ , ಅನ್ಶುಲ್ ಕಾಂಬೋಜ್ , ಆಖಿಬ್ ನಬಿ , ಆಕಾಶ್ ದೀಪ್ , ಮುಖೇಶ್ ಚೌಧರಿ.

ಇದನ್ನೂ ಓದಿ: 10ನೇ ವಿಕೆಟ್​​ಗೆ ಹೊಸ ವಿಶ್ವ ದಾಖಲೆ: ಪಾಕ್ ಪಡೆಗೆ ರಣರೋಚಕ ಜಯ!

ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ , ಡೀನ್ ಫಾಕ್ಸ್‌ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್), ಸೈಮನ್ ಕೀನ್ , ಕ್ರಿಶ್ಚಿಯನ್ ಕ್ಲಾರ್ಕ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್ , ಝಾಕ್ ಗಿಬ್ಸನ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು