WI vs NZ: ಭಾರತ ವಿರುದ್ಧ ಹೀನಾಯವಾಗಿ ಸೋತಿದ್ದ ವಿಂಡೀಸ್​ಗೆ ಕಿವೀಸ್ ವಿರುದ್ಧವೂ ಅದೃಷ್ಟ ಖುಲಾಯಿಸಲಿಲ್ಲ

| Updated By: ಪೃಥ್ವಿಶಂಕರ

Updated on: Aug 13, 2022 | 4:14 PM

WI vs NZ: ರೋವ್ಮನ್ ಪೊವೆಲ್ ವೆಸ್ಟ್ ಇಂಡೀಸ್ ಪರ ಗರಿಷ್ಠ 21 ರನ್ ಗಳಿಸಿದರೆ ಇವರನ್ನು ಹೊರತುಪಡಿಸಿ ಕೆರಿಬಿಯನ್ ತಂಡದ ಅಗ್ರ ಕ್ರಮಾಂಕದ ಯಾವೊಬ್ಬ ಆಟಗಾರನಿಗೂ 7ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.

WI vs NZ: ಭಾರತ ವಿರುದ್ಧ ಹೀನಾಯವಾಗಿ ಸೋತಿದ್ದ ವಿಂಡೀಸ್​ಗೆ ಕಿವೀಸ್ ವಿರುದ್ಧವೂ ಅದೃಷ್ಟ ಖುಲಾಯಿಸಲಿಲ್ಲ
Follow us on

ಭಾರತ ವಿರುದ್ಧದ ಟಿ20 ಸರಣಿಯನ್ನು 1-4 ಅಂತರದಿಂದ ಸೋತಿದ್ದ ವೆಸ್ಟ್ ಇಂಡೀಸ್ (West Indies) ತಂಡ ನ್ಯೂಜಿಲೆಂಡ್ ವಿರುದ್ಧವೂ ಟಿ20 ಸರಣಿಯನ್ನು (T20 series) ಕಳೆದುಕೊಂಡಿದೆ. ವಿಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 90 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್‌ ನೆಲದಲ್ಲಿ ನ್ಯೂಜಿಲೆಂಡ್ (New Zealand) ಮೊದಲ ಬಾರಿಗೆ ವೈಟ್ ಬಾಲ್ ಸರಣಿಯನ್ನು ಗೆದ್ದ ದಾಖಲೆ ಮಾಡಿದೆ.

ಫಿಲಿಪ್ಸ್ ಅಬ್ಬರ

ಗ್ಲೆನ್ ಫಿಲಿಪ್ಸ್ 41 ಎಸೆತಗಳಲ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ಕಿವೀಸ್ ಸರಣಿ ಗೆಲುವಿನ ರೂವಾರಿಯಾದರು. ಫಿಲಿಪ್ಸ್ ಅವರ ಬ್ಯಾಟಿಂಗ್ ಬಗ್ಗೆ ಮಾತನಾಡುವುದಾರೆ, ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು. ಫಿಲಿಪ್ಸ್ ಜೊತೆಗೆ ಡೆವೊನ್ ಕಾನ್ವೆ 42 ರನ್ ಮತ್ತು ಡೇರಿಲ್ ಮಿಚೆಲ್ 48 ರನ್‌ ಬಾರಿಸಿದರು. ಈ ಮೂವರು ಅಬ್ಬರದ ಇನ್ನಿಂಗ್ಸ್ ಆಧಾರದ ಮೇಲೆ ಕಿವೀಸ್ ತಂಡ 5 ವಿಕೆಟ್‌ಗೆ 215 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವಿಂಡೀಸ್ ತಂಡ ನಿಗದಿತ ಓವರ್‌ಗಳಲ್ಲಿ ಕೇವಲ 125 ರನ್ ಗಳಿಸಲಷ್ಟೇ ಶಕ್ತವಾಯಿತು.

ವಿಂಡೀಸ್ ವಿರುದ್ಧ ಫಿಲಿಪ್ಸ್ ಆರ್ಭಟ

ಕಳೆದ ಬಾರಿ ವಿಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ 108 ರನ್ ಗಳಿಸಿದ್ದ ಫಿಲಿಪ್ಸ್, ಇದಕ್ಕೂ ಮೊದಲು 2017 ರಲ್ಲಿ ವಿಂಡೀಸ್ ವಿರುದ್ಧವೇ ಅರ್ಧಶತಕ ಬಾರಿಸಿದ್ದರು. ಕೆರಿಬಿಯನ್ ತಂಡದ ವಿರುದ್ಧ ಫಿಲಿಪ್ಸ್ ಬ್ಯಾಟ್ ಎಷ್ಟು ಅಬ್ಬರಿಸಿದೆಯೋ, ಅಷ್ಟೇ ಪ್ರಮಾಣದಲ್ಲಿ ಭಾರತದ ವಿರುದ್ಧ ಮೌನವಾಗಿ ಬಿಟ್ಟಿದೆ. ಭಾರತದ ವಿರುದ್ಧ ಆಡಿರುವ 6 ಪಂದ್ಯಗಳಲ್ಲಿ ಫಿಲಿಪ್ಸ್ ಬ್ಯಾಟ್ ಒಮ್ಮೆ ಮಾತ್ರ 15ಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು. ಜೊತೆಗೆ 2 ಬಾರಿ ಅವರಿಗೆ ಖಾತೆ ತೆರೆಯಲೂ ಸಹ ಸಾಧ್ಯವಾಗಲಿಲ್ಲ.

ಸ್ಯಾಂಟ್ನರ್ ಮತ್ತು ಬ್ರೇಸ್‌ವೆಲ್ ಬೌಲಿಂಗ್ ಮ್ಯಾಜಿಕ್

ಎರಡನೇ ಟಿ20 ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲಿಗೆ ಕಿವೀಸ್ ಬ್ಯಾಟ್ಸ್‌ಮನ್‌ಗಳು ವಿಂಡೀಸ್ ಬೌಲರ್‌ಗಳನ್ನು ಸರಿಯಾಗಿಯೇ ದಂಡಿಸಿದರು. ಆದರೆ ಇದಕ್ಕೆ ತದ್ವಿರುದ್ದವಾಗಿ ಕಿವೀಸ್ ಬೌಲರ್​ಗಳಾದ ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್‌ವೆಲ್ ವಿಂಡೀಸ್ ಬ್ಯಾಟಿಂಗ್ ಬೆನ್ನೇಲುಬ್ಬನು ಮುರಿದರು. 216 ರನ್‌ಗಳ ಗುರಿಯನ್ನು ಬೆನ್ನತ್ತಿದ ವಿಂಡೀಸ್ ತಂಡ ಈ ಇಬ್ಬರು ಬೌಲರ್‌ಗಳ ಬಿರುಗಾಳಿಗೆ ಸಿಲುಕಿತು. ಇಬ್ಬರೂ ಬೌಲರ್​ಗಳು 3.75 ರ ರನ್​ರೇಟ್​ನಲ್ಲಿ ರನ್ ನೀಡಿ ತಲಾ 3 ವಿಕೆಟ್ ಪಡೆದರು. ರೋವ್ಮನ್ ಪೊವೆಲ್ ವೆಸ್ಟ್ ಇಂಡೀಸ್ ಪರ ಗರಿಷ್ಠ 21 ರನ್ ಗಳಿಸಿದರೆ ಇವರನ್ನು ಹೊರತುಪಡಿಸಿ ಕೆರಿಬಿಯನ್ ತಂಡದ ಅಗ್ರ ಕ್ರಮಾಂಕದ ಯಾವೊಬ್ಬ ಆಟಗಾರನಿಗೂ 7ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.