IND vs ZIM: ಏಕದಿನ ಸರಣಿಗಾಗಿ ಜಿಂಬಾಬ್ವೆಗೆ ಹಾರಿದ ಟೀಂ ಇಂಡಿಯಾ; DSLR ಕ್ಯಾಮರಾ ಖರೀದಿಸಿ ಎಂದ ನೆಟ್ಟಿಗರು
IND vs ZIM: ಟೀಂ ಇಂಡಿಯಾ, ಜಿಂಬಾಬ್ವೆಯೊಂದಿಗೆ 3 ಏಕದಿನ ಸರಣಿಯನ್ನು ಆಡಲಿದೆ. ಆಗಸ್ಟ್ 18ರಂದು ಮೊದಲ ಪಂದ್ಯ ನಡೆಯಲಿದ್ದು, ಕೆಎಲ್ ರಾಹುಲ್ ನಾಯಕತ್ವದಲ್ಲಿ ತಂಡ ಮೈದಾನಕ್ಕಿಳಿಯಲಿದೆ.
ಏಷ್ಯಾಕಪ್ (Asia Cup) ಆರಂಭವಾಗಲು ಕೆಲವೇ ದಿನಗಳು ಬಾಕಿ ಇವೆ. ಟೀಂ ಇಂಡಿಯಾ ಆಟಗಾರರು ಕೂಡ ಏಷ್ಯಾಕಪ್ ತಯಾರಿ ಆರಂಭಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಟೀಂ ಇಂಡಿಯಾ (Team India) ತನ್ನ ಕೊನೆಯ ಸರಣಿಗಾಗಿ ಜಿಂಬಾಬ್ವೆಗೆ ತೆರಳಿದೆ. ಏಷ್ಯಾಕಪ್‌ಗೂ ಮುನ್ನ ಟೀಂ ಇಂಡಿಯಾ ತನ್ನ ಕೊನೆಯ ಸರಣಿಯನ್ನು ಜಿಂಬಾಬ್ವೆ ವಿರುದ್ಧ ಆಡಲಿದ್ದು, ಹೀಗಾಗಿ ಭಾರತ ತಂಡ ಈ ಪ್ರವಾಸಕ್ಕೆ ಹೊರಟಿದೆ. ಟೀಂ ಇಂಡಿಯಾ ಆಟಗಾರರು ಪ್ರವಾಸಕ್ಕಾಗಿ ವಿಮಾನ ಏರಿರುವ ಫೋಟೋಗಳನ್ನು ಬಿಸಿಸಿಐ (BCCI) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಕೆಎಲ್ ರಾಹುಲ್ಗೆ ನಾಯಕತ್ವ
ಟೀಂ ಇಂಡಿಯಾ, ಜಿಂಬಾಬ್ವೆಯೊಂದಿಗೆ 3 ಏಕದಿನ ಸರಣಿಯನ್ನು ಆಡಲಿದೆ. ಆಗಸ್ಟ್ 18ರಂದು ಮೊದಲ ಪಂದ್ಯ ನಡೆಯಲಿದ್ದು, ಕೆಎಲ್ ರಾಹುಲ್ ನಾಯಕತ್ವದಲ್ಲಿ ತಂಡ ಮೈದಾನಕ್ಕಿಳಿಯಲಿದೆ. ರಾಹುಲ್ ಈ ಮೊದಲು ಆರಂಭಿಕ 15 ಜನರ ತಂಡದ ಭಾಗವಾಗಿರಲಿಲ್ಲ, ಆದರೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಶಿಖರ್ ಧವನ್ ಬದಲಿಗೆ ಈ ಪ್ರವಾಸಕ್ಕೆ ತಂಡದ ನಾಯಕತ್ವವನ್ನು ಅವರಿಗೆ ವಹಿಸಲಾಗಿದೆ. ಹೀಗಾಗಿ ಶಿಖರ್ ಧವನ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ದೀಪಕ್ ಚಹಾರ್ ಕೂಡ ಈ ಪ್ರವಾಸದಲ್ಲಿದ್ದು, ಅವರು ಕೂಡ ಸುಮಾರು ಒಂದು ವರ್ಷದ ನಂತರ ಮೈದಾನಕ್ಕಿಳಿಯಲ್ಲಿದ್ದಾರೆ.
ಫಿಟ್‌ನೆಸ್ ಪರೀಕ್ಷೆ ಪಾಸಾಗಬೇಕು ಚಹಾರ್
ಜಿಂಬಾಬ್ವೆ ಸರಣಿಯು ಚಹರ್‌ಗೆ ಒಂದು ರೀತಿಯ ಫಿಟ್‌ನೆಸ್ ಪರೀಕ್ಷೆಯಾಗಿದ್ದು, ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂಬುದನ್ನು ಇಲ್ಲಿ ಸಾಬೀತುಪಡಿಸಬೇಕಾಗಿದೆ. ಚಹರ್ ಈ ಸರಣಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿದರೆ ಟಿ 20 ವಿಶ್ವಕಪ್ 2022ಕ್ಕೆ ತಂಡದಲ್ಲಿ ಅವರ ಸ್ಥಾನ ಬಹುತೇಕ ಖಚಿತವಾಗುತ್ತದೆ. ಜೊತೆಗೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೂಡ ಆಟಗಾರರೊಂದಿಗೆ ಈ ಸರಣಿಗೆ ತೆರಳಿದ್ದು, ಅವರು ಈ ಸರಣಿಗೆ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
View this post on Instagram
ಬಿಸಿಸಿಐಯನ್ನು ಟ್ರೋಲ್ ಮಾಡಿದ ನೆಟ್ಟಿಗರು
ಆಟಗಾರರು ಜಿಂಬಾಬ್ವೆಗೆ ಹಾರಿದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಬಿಸಿಸಿಐಯನ್ನು ಟೀಂ ಇಂಡಿಯಾ ಅಭಿಮಾನಿಗಳು ಸಖತ್ ಟ್ರೋಲ್ ಮಾಡಿಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಇನ್ಸ್ಟಾಗ್ರಾಂನಲ್ಲಿ ಬಿಸಿಸಿಐ ಪೋಸ್ಟ್ ಮಾಡಿರುವ ಫೋಟೋಗಳು ತೀರ ಕಳಪೆ ಗುಣಮಟ್ಟದ್ದವುಗಳಾಗಿರುವುದು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿರುವ ನೆಟ್ಟಿಗರು ಒಂದು ಉತ್ತಮ ಗುಣಮಟ್ಟದ ಡಿಎಸ್‌ಎಲ್‌ಆರ್ ಕ್ಯಾಮರಾ ಖರೀದಿಸಿ, ನೀವು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬುದನ್ನು ಮರೆಯಬೇಡಿ ಎಂದು ಬಿಸಿಸಿಐ ಕಾಲೆಳೆದಿದ್ದಾರೆ.
ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾ
ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.
ಜಿಂಬಾಬ್ವೆ ತಂಡ
ರೆಗಿಸ್ ಚಕಬ್ವಾ (ನಾಯಕ), ತನಕಾ ಚಿವಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೊಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ರಿಚರ್ಡ್ ಎನ್ಗರವ, ವಿಕ್ಟೋರ್, ಸಿಕಂದರ್ ರಾಜಾ, ಡೊನಾಲ್ಡ್ ತಿರಿಪಾನೊ
Published On - 3:19 pm, Sat, 13 August 22