ಒಂದು ದೇಶದಲ್ಲಿ ಹುಟ್ಟಿ ಬೇರೆ ದೇಶಗಳ ಪರ ಆಡಿದ ಅನೇಕ ಕ್ರಿಕೆಟಿಗರಿದ್ದಾರೆ. ಇವರಲ್ಲಿ ಮೈಕೆಲ್ ರಿಪ್ಪನ್ (Michael Rippon) ಕೂಡ ಒಬ್ಬರು. ಏಕೆಂದರೆ ರಿಪ್ಪನ್ ಮೂಲತಃ ಸೌತ್ ಆಫ್ರಿಕಾದವರು. ಆದರೆ ಪಾದಾರ್ಪಣೆ ಮಾಡಿದ್ದು ನೆದರ್ಲ್ಯಾಂಡ್ಸ್ ಪರ ಎಂಬುದು ವಿಶೇಷ. ಇದರಲ್ಲೇನು ವಿಶೇಷ ಎಂದು ನೀವಂದುಕೊಂಡರೆ, ಇಲ್ಲೇ ಇರುವುದು ಟ್ವಿಸ್ಟ್. ಏಕೆಂದರೆ ಮೈಕೆಲ್ ರಿಪ್ಪನ್ ಇದೀಗ ನೆದರ್ಲ್ಯಾಂಡ್ಸ್ ವಿರುದ್ದವೇ ಆಡಲು ಸಜ್ಜಾಗಿದ್ದಾರೆ. ಹೌದು, ನೆದರ್ಲ್ಯಾಂಡ್ಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ರಿಪ್ಪನ್ ಇದೀಗ ನ್ಯೂಜಿಲೆಂಡ್ ಪರ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಅಂದರೆ ನೆದರ್ಲ್ಯಾಂಡ್ಸ್ ತಂಡದಿಂದ ಹೊರಗುಳಿದಿದ್ದ ಇವರು ಆ ಬಳಿಕ ನ್ಯೂಜಿಲೆಂಡ್ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದ್ದರು.
ನೆದರ್ಲ್ಯಾಂಡ್ಸ್ ರಾಷ್ಟ್ರೀಯ ತಂಡದ ಜೊತೆಗಿನ ಒಪ್ಪಂದ ಮುಗಿದ ಬಳಿಕ ಮೈಕೆಲ್ ರಿಪ್ಪನ್ ನ್ಯೂಜಿಲೆಂಡ್ನಲ್ಲಿ ದೇಶೀಯ ಕ್ರಿಕೆಟ್ ಆಡಿದ್ದರು. ಅಲ್ಲದೆ ಈ ಅವಧಿಯಲ್ಲಿ ಮತ್ತೊಂದು ದೇಶವನ್ನು ಪ್ರತಿನಿಧಿಸುವ ಕ್ಲಿಯರೆನ್ಸ್ ಕೂಡ ಪಡೆದುಕೊಂಡಿದ್ದಾರೆ. ಅದರಂತೆ ಇದೀಗ ರಿಪ್ಪನ್ ಅವರು ನೆದರ್ಲ್ಯಾಂಡ್ಸ್ ವಿರುದ್ದದ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ತಾನು ಪಾದಾರ್ಪಣೆ ಮಾಡಿದ ಅಂತಾರಾಷ್ಟ್ರೀಯ ತಂಡದ ವಿರುದ್ದವೇ ಇದೀಗ ನ್ಯೂಜಿಲೆಂಡ್ ಪರ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ.
ಇನ್ನು ಮೈಕೆಲ್ ರಿಪ್ಪನ್ ನೆದರ್ಲ್ಯಾಂಡ್ಸ್ ಪರ 18 ಟಿ20 ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 396 ರನ್ ಹಾಗೂ 28 ವಿಕೆಟ್ ಕಬಳಿಸಿದ್ದಾರೆ. ವಿಶೇಷ ಎಂದರೆ ಈ ಹಿಂದೆ ರಿಪ್ಪನ್ ನ್ಯೂಜಿಲೆಂಡ್ ವಿರುದ್ದ ಕೂಡ ಆಡಿದ್ದರು. ಇದೀಗ ಅದೇ ತಂಡದ ಆಟಗಾರನಾಗಿ ಪಾದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ದಕ್ಷಿಣ ಆಫ್ರಿಕಾ ಮೂಲದವರಾಗಿರುವ ರಿಪ್ಪನ್ 2010-11ರಲ್ಲಿ ದಕ್ಷಿಣ ಆಫ್ರಿಕಾದ ದೇಶೀಯ ತಂಡ ಕೋಬ್ರಾಸ್ ಪರ ತಮ್ಮ ಚೊಚ್ಚಲ ಟಿ20 ಪಂದ್ಯವನ್ನು ಆಡಿದ್ದರು. ಹಾಗೆಯೇ ಲಿಸ್ಟ್-ಎ ಮತ್ತು ನಂತರ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಕಾಣಿಸಿಕೊಂಡಿದ್ದರು. ಆದರೆ, ದಕ್ಷಿಣ ಆಫ್ರಿಕಾ ಪರ ಆಡುವ ಅವಕಾಶ ಸಿಗದ ಕಾರಣ ಅವರು ಮರುವರ್ಷವೇ ಇಂಗ್ಲಿಷ್ ಕೌಂಟಿ ತಂಡವಾದ ಸಸೆಕ್ಸ್‌ನೊಂದಿಗೆ ಸಹಿ ಹಾಕಿ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ನೆದರ್ಲ್ಯಾಂಡ್ಸ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ಕಿವೀಸ್ನಲ್ಲಿ ದೇಶೀಯ ಕ್ರಿಕೆಟ್ ಮುಂದುವರೆಸಿದ್ದರು. ಇದೀಗ ನ್ಯೂಜಿಲೆಂಡ್ ತಂಡದಲ್ಲಿ ಅವಕಾಶ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನ್ಯೂಜಿಲೆಂಡ್ ತಂಡವು ಆಗಸ್ಟ್ 4 ಮತ್ತು 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಗಳನ್ನು ಆಡಲಿದೆ. ಈ ಸರಣಿಯಲ್ಲಿ ಕಿವೀಸ್ ತಂಡದ ಭಾಗವಾಗಿರುವ 30ರ ಹರೆಯದ ಎಡಗೈ ಆಲ್ರೌಂಡರ್ ಮೈಕೆಲ್ ರಿಪ್ಪನ್ಗೆ ಮೊದಲ ಪಂದ್ಯದಲ್ಲೇ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.