NZ vs ZIM: 9 ವಿಕೆಟ್ ಉರುಳಿಸಿದ ಹೆನ್ರಿ; ಸುಲಭವಾಗಿ ಗೆದ್ದ ನ್ಯೂಜಿಲೆಂಡ್

NZ vs ZIM: ನ್ಯೂಜಿಲೆಂಡ್ ತಂಡವು ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಅದ್ಭುತ ಪ್ರದರ್ಶನದೊಂದಿಗೆ ಗೆದ್ದುಕೊಂಡಿದೆ. ಮ್ಯಾಟ್ ಹೆನ್ರಿ ಅವರ 9 ವಿಕೆಟ್‌ಗಳ ಮಾರಕ ಬೌಲಿಂಗ್ ಜಿಂಬಾಬ್ವೆ ತಂಡವನ್ನು ಸಂಪೂರ್ಣವಾಗಿ ಕುಗ್ಗಿಸಿತು. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಾದ ಡೆವೊನ್ ಕಾನ್ವೇ ಮತ್ತು ಡ್ಯಾರಿಲ್ ಮಿಚೆಲ್ ಅವರ ಅತ್ಯುತ್ತಮ ಪ್ರದರ್ಶನದಿಂದ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

NZ vs ZIM: 9 ವಿಕೆಟ್ ಉರುಳಿಸಿದ ಹೆನ್ರಿ; ಸುಲಭವಾಗಿ ಗೆದ್ದ ನ್ಯೂಜಿಲೆಂಡ್
Zim Vs Nz

Updated on: Aug 01, 2025 | 9:11 PM

ಜಿಂಬಾಬ್ವೆ ಹಾಗೂ ನ್ಯೂಜಿಲೆಂಡ್ (New Zealand vs Zimbabwe) ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಏಕಪಕ್ಷೀತವಾಗಿ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ, ನ್ಯೂಜಿಲೆಂಡ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ಕಿವೀಸ್ ಪರ ಮಾರಕ ದಾಳಿ ಮಾಡಿದ ಅನುಭವಿ ವೇಗಿ ಮ್ಯಾಟ್ ಹೆನ್ರಿ (Matt Henry) ಎರಡೂ ಇನ್ನಿಂಗ್ಸ್​ಗಳಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆಯುವ ಮೂಲಕ ಜಿಂಬಾಬ್ವೆ ತಂಡವನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಹೆನ್ರಿ ದಾಳಿಯ ಮುಂದೆ ಜಿಂಬಾಬ್ವೆಯ ಯಾವುದೇ ಬ್ಯಾಟ್ಸ್‌ಮನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.

ನ್ಯೂಜಿಲೆಂಡ್​ಗೆ ಸುಲಭ ಜಯ

ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕ ಕ್ರೇಗ್ ಎರ್ವಿನ್ ಅತ್ಯಧಿಕ 39 ರನ್ ಗಳಿಸಿದರೆ, ಟಿ. ತ್ಸಿಂಗಾ 30 ರನ್ ಗಳಿಸಿದರು. ಮ್ಯಾಟ್ ಹೆನ್ರಿ ನ್ಯೂಜಿಲೆಂಡ್ ಪರ ಮಾರಕ ಬೌಲಿಂಗ್ ಮಾಡಿ 6 ವಿಕೆಟ್ ಪಡೆದರು. ಹೆನ್ರಿ ಹೊರತುಪಡಿಸಿ, ನಾಥನ್ ಸ್ಮಿತ್ ಕೂಡ 3 ವಿಕೆಟ್ ಪಡೆದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 307 ರನ್ ಗಳಿಸಿತು. ಡೆವೊನ್ ಕಾನ್ವೇ ಅದ್ಭುತ ಬ್ಯಾಟಿಂಗ್ ನಡೆಸಿ ತಂಡದ ಪರ 88 ರನ್​ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಡೆವೊನ್ ಕಾನ್ವೇ ಹೊರತುಪಡಿಸಿ, ಡ್ಯಾರಿಲ್ ಮಿಚೆಲ್ 80 ರನ್‌ಗಳ ಕೊಡುಗೆ ನೀಡಿದರು. ಈ ಇಬ್ಬರು ಆಟಗಾರರ ಹೊರತಾಗಿ, ಆರಂಭಿಕ ವಿಲ್ ಯಂಗ್ 41 ರನ್ ಗಳಿಸಿದರೆ, ಹೆನ್ರಿ ನಿಕೋಲಸ್ 34 ರನ್ ಗಳಿಸಿದರು. ಜಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಜರ್ಬಾನಿ ಮೂರು ವಿಕೆಟ್ ಪಡೆದರೆ, ತನಕಾ ಚಿವಾಂಗಾ 2 ವಿಕೆಟ್ ಪಡೆದರು.

ಜಿಂಬಾಬ್ವೆ ಇನ್ನಿಂಗ್ಸ್ ವಿಫಲ

ಜಿಂಬಾಬ್ವೆ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಲು ವಿಫಲವಾಗಿ ಕೇವಲ 165 ರನ್‌ ಕಲೆಹಾಕಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಸೀನ್ ವಿಲಿಯಮ್ಸ್ ತಂಡದ ಪರ 49 ರನ್ ಗಳಿಸಿದರು. ಟಿ. ತ್ಸಿಂಗಾ 27 ರನ್‌ಗಳ ಕೊಡುಗೆ ನೀಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ, ನಾಯಕ ಮಿಚೆಲ್ ಸ್ಯಾಂಟ್ನರ್ ನ್ಯೂಜಿಲೆಂಡ್ ಪರ 4 ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ವಿಲಿಯಂ ಒ’ರೂಕ್ ತಲಾ 3 ವಿಕೆಟ್‌ಗಳನ್ನು ಪಡೆದರು. ಅಂತಿಮವಾಗಿ 8 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಒಂದು ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು.

ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆ

ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಇದೀಗ ಎರಡೂ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 7 ರಂದು ಪ್ರಾರಂಭವಾಗಲಿದೆ. ಜಿಂಬಾಬ್ವೆ ಟೆಸ್ಟ್ ಸರಣಿಯನ್ನು ಸಮಬಲಗೊಳಿಸಬೇಕಾದರೆ, ಎರಡನೇ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ