AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮಿಂಚಿದ ಫಿಲಿಪ್ಸ್​: ಟೀಮ್ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಕ್ರೈಸ್ಟ್​ಚರ್ಚ್​ನ ಹ್ಯಾಗ್ಲಿ ಓವಲ್ ಮೈದಾನದಲ್ಲೇ ನಡೆದ ಮೊದಲ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್​ಗಳಲ್ಲಿ 225 ರನ್​ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ ಚೇಸ್ ಮಾಡಿ 4 ವಿಕೆಟ್​ಗಳ ಜಯ ಸಾಧಿಸಿತ್ತು.

ಮತ್ತೆ ಮಿಂಚಿದ ಫಿಲಿಪ್ಸ್​: ಟೀಮ್ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ
Glenn Philips - JacobsImage Credit source: GettyImages
ಝಾಹಿರ್ ಯೂಸುಫ್
|

Updated on:Oct 24, 2026 | 2:11 PM

Share

ಕ್ರೈಸ್ಟ್​ಚರ್ಚ್​ನಲ್ಲಿ ನಡೆಯುತ್ತಿರುವ ಭಾರತದ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ 20 ಓವರ್​ಗಳಲ್ಲಿ 180 ರನ್ ಕಲೆಹಾಕಿದೆ. ಹ್ಯಾಗ್ಲಿ ಓವಲ್ ಮೈದಾನದಲ್ಲಿ ಜರುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಷ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡಿದ್ದರು. ಪಂದ್ಯದ ಎರಡನೇ ಓವರ್​ನಲ್ಲೇ ಟಿಮ್ ಸೈಫರ್ಟ್ (7) ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಡ್ಯಾರಿಲ್ ಮಿಚೆಲ್ (6) ವಿಕೆಟ್ ಕಬಳಿಸಿದರು.

ಇದಾಗ್ಯೂ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಫಿನ್ ಅಲೆನ್ (16) ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಪ್ರಿನ್ಸ್ ಯಾದವ್ ಯಶಸ್ವಿಯಾದರು.

ಈ ಹಂತದಲ್ಲಿ ಜೊತೆಗೂಡಿದ ಗ್ಲೆನ್ ಫಿಲಿಪ್ಸ್ ಹಾಗೂ ಬೆವೊನ್ ಜೇಕಬ್ಸ್ ಅತ್ಯುತ್ತಮ  ಜೊತೆಯಾಟದ ಮೂಲಕ ನ್ಯೂಝಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಜವಾಬ್ದಾರಿಯುತ ಬ್ಯಾಟಿಂಗ್​ನೊಂದಿಗೆ ಗ್ಲೆನ್ ಫಿಲಿಪ್ಸ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.

ಇದಾಗ್ಯೂ ನ್ಯೂಝಿಲೆಂಡ್ ತಂಡ 15 ಓವರ್​ಗಳ ಮುಕ್ತಾಯದ ವೇಳೆಗೆ ಕಲೆಹಾಕಿದ್ದು ಕೇವಲ 115 ರನ್​ಗಳು ಮಾತ್ರ. ಆದರೆ ಕೊನೆಯ 5 ಓವರ್​ಗಳ ವೇಳೆ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಫಿಲಿಪ್ಸ್-ಜೇಕಬ್ ಜೋಡಿಯು ರನ್ ಗತಿಯನ್ನು ಹೆಚ್ಚಿಸುವತ್ತ ಗಮನ ಹರಿಸಿದರು.

ಪರಿಣಾಮ ಭುವನೇಶ್ವರ್ ಕುಮಾರ್ ಎಸೆದ 16ನೇ ಓವರ್​ನಲ್ಲಿ ಬರೋಬ್ಬರಿ 18 ರನ್​ಗಳು ಮೂಡಿಬಂದವು. ಇದರೊಂದಿಗೆ ಬೆವೊನ್ ಜೇಕಬ್ಸ್ 40 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಆದರೆ ಅರ್ಷದೀಪ್ ಸಿಂಗ್ ಎಸೆದ 18ನೇ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಗ್ಲೆನ್ ಫಿಲಿಪ್ಸ್ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ 43 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ 70 ರನ್ ಬಾರಿಸಿದ ಗ್ಲೆನ್ ಫಿಲಿಪ್ಸ್ ಇನಿಂಗ್ಸ್ ಅಂತ್ಯವಾಯಿತು.

  • ಗ್ಲೆನ್ ಫಿಲಿಪ್ಸ್ ಮೊದಲ ಟಿ20 ಪಂದ್ಯದಲ್ಲಿ 40 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿದ್ದರು.
  • ಇದೀಗ ದ್ವಿತೀಯ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 70 ರನ್ ಕಲೆಹಾಕಿದ್ದಾರೆ.

ಅಂತಿಮ ಓವರ್​ಗಳ ವೇಳೆ ಬಿರುಸಿನ ಬ್ಯಾಟಿಂಗ್​ಗೆ ಯತ್ನಿಸಿದ ಬೆವೊನ್ ಜೇಕಬ್ಸ್ 1 ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ 46 ಎಸೆತಗಳಲ್ಲಿ 58 ರನ್ ಬಾರಿಸಿದರು.  ಈ ಅರ್ಧಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್​ ಕಲೆಹಾಕಿತು.

  • ಟೀಮ್ ಇಂಡಿಯಾಗೆ 20 ಓವರ್​ಗಳಲ್ಲಿ 181 ರನ್​ಗಳ ಗುರಿ.

ಭಾರತ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಪ್ರಿನ್ಸ್​ ಯಾದವ್.

ಇದನ್ನೂ ಓದಿ: ಪಿಎಸ್ಎಲ್‌ ‘ಸಿಕ್ಸಸ್’ ಟೂರ್ನಿ: ಪಾಕಿಸ್ತಾನ್ ಮಾಸ್ಟರ್ ಪ್ಲ್ಯಾನ್!

ನ್ಯೂಝಿಲೆಂಡ್ (ಪ್ಲೇಯಿಂಗ್ XI): ಫಿನ್ ಅಲೆನ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಬೆವೊನ್ ಜೇಕಬ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಜೇಕಬ್ ಡಫಿ, ಲಾಕಿ ಫರ್ಗುಸನ್.

Published On - 2:10 pm, Sat, 24 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More