ಪಿಎಸ್ಎಲ್ ‘ಸಿಕ್ಸಸ್’ ಟೂರ್ನಿ: ಪಾಕಿಸ್ತಾನ್ ಮಾಸ್ಟರ್ ಪ್ಲ್ಯಾನ್!
ಟಿ20 ಕ್ರಿಕೆಟ್‌ನ ಅಬ್ಬರದ ನಡುವೆಯೇ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಸೂಪರ್ ಫಾಸ್ಟ್ ಮನರಂಜನೆ ನೀಡಲು ಪಾಕಿಸ್ತಾನ್ ಸೂಪರ್ ಲೀಗ್ ಸಜ್ಜಾಗುತ್ತಿದೆ. ಸಾಂಪ್ರದಾಯಿಕ ಕ್ರಿಕೆಟ್‌ಗಿಂತ ಸಂಪೂರ್ಣ ಭಿನ್ನವಾದ, ಕೇವಲ ಆರು ಆಟಗಾರರ 'PSL ಸಿಕ್ಸಸ್' ಎಂಬ ಹೊಚ್ಚ ಹೊಸ ಆಫ್-ಸೀಸನ್ ಟೂರ್ನಿಯನ್ನು ಪರಿಚಯಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಭರ್ಜರಿ ಯೋಜನೆ ರೂಪಿಸುತ್ತಿದೆ.

ಪಾಕಿಸ್ತಾನ್ ಸೂಪರ್ ಲೀಗ್ ತನ್ನ ಕ್ರಿಕೆಟ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಭರ್ಜರಿ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಹಾಂಗ್ ಕಾಂಗ್ ಸಿಕ್ಸಸ್ ಮಾದರಿಯ ಹೊಚ್ಚ ಹೊಸ ಆರು-ಆಟಗಾರರ ಟೂರ್ನಿಯನ್ನು ಪರಿಚಯಿಸಲು ಮುಂದಾಗಿದೆ.
ಏನಿದು ‘ಪಿಎಸ್ಎಲ್ ಸಿಕ್ಸಸ್’ ಪ್ಲ್ಯಾನ್?
ಪಾಕಿಸ್ತಾನ್ ಸೂಪರ್ ಲೀಗ್ ಸಿಕ್ಸಸ್ ಎಂಬುದು ಆರು ಆಟಗಾರರನ್ನು ಒಳಗೊಂಡಿರುವ ಟೂರ್ನಿ. ಈ ಟೂರ್ನಿಯಲ್ಲಿ ಒಂದು ತಂಡದ ಪರ ಆರು ಆಟಗಾರರು ಮಾತ್ರ ಕಣಕ್ಕಿಳಿಯಲಿದ್ದಾರೆ.
ಪ್ರಮುಖ ಪಿಎಸ್ಎಲ್ ಟೂರ್ನಿಗೆ ಯಾವುದೇ ತೊಂದರೆಯಾಗದಂತೆ, ವರ್ಷದ ಮಧ್ಯಭಾಗದ ಬಿಡುವಿನ ಅವಧಿಯಲ್ಲಿ ಈ ಟೂರ್ನಿಯನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿದೆ.
ಅಂದರೆ ಪಾಕಿಸ್ತಾನ್ ಸೂಪರ್ ಲೀಗ್ ಮುಗಿದ ಬಳಿಕ, ಕೆಲ ತಿಂಗಳ ನಂತರ ಪಿಎಸ್ಎಲ್ ಸಿಕ್ಸಸ್ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಯೋಜನೆ ರೂಪಿಸುತ್ತಿದ್ದಾರೆ.
ಇನ್ನು ಈ ಪಂದ್ಯಗಳನ್ನು ಮುಖ್ಯ ಪಿಎಸ್ಎಲ್ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗದ ಪಾಕಿಸ್ತಾನದ ಸಣ್ಣ ನಗರಗಳ ಕ್ರೀಡಾಂಗಣಗಳಲ್ಲಿ ಈ ಪಂದ್ಯಗಳನ್ನು ನಡೆಸುವುದು ಪಿಸಿಬಿಯ ಮುಖ್ಯ ಉದ್ದೇಶವಾಗಿದೆ. ಇದರಿಂದ ಸಣ್ಣ ನಗರಗಳ ಕ್ರಿಕೆಟ್ ಅಭಿಮಾನಿಗಳಿಗೂ ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಿಸುವ ಅವಕಾಶ ಸಿಗಲಿದೆ.
ಹೇಗಿರಲಿದೆ ಪಿಎಸ್ಎಲ್ ಸಿಕ್ಸಸ್?
ಪಾಕಿಸ್ತಾನ್ ಸೂಪರ್ ಲೀಗ್ ಸಿಕ್ಸಸ್ ಟೂರ್ನಿಯು ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ಹಾಂಗ್ ಕಾಂಗ್ ಸಿಕ್ಸಸ್ ಮಾದರಿಯಲ್ಲೇ ಆಯೋಜನೆಯಾಗುವ ಸಾಧ್ಯತೆಯಿದೆ. ಅದರಂತೆ, ಈ ನೂತನ ಟೂರ್ನಿಯು ಹೊಂದಿರಬಹುದಾದ ಪ್ರಮುಖ ನಿಯಮಗಳ ವಿವರ ಇಲ್ಲಿದೆ…
ಕೇವಲ 6 ಆಟಗಾರರು: ಪ್ರತಿ ತಂಡದಲ್ಲಿ ಸಾಂಪ್ರದಾಯಿಕ 11 ಆಟಗಾರರ ಬದಲಿಗೆ ಕೇವಲ ಆರು ಜನ ಆಟಗಾರರು ಮಾತ್ರ ಕಣಕ್ಕಿಳಿಯುತ್ತಾರೆ.
6 ಓವರ್‌ಗಳ ಪಂದ್ಯ: ಪ್ರತಿ ಇನಿಂಗ್ಸ್‌ನಲ್ಲಿ ಕೇವಲ 6 ಓವರ್‌ಗಳು (36 ಎಸೆತಗಳು) ಮಾತ್ರ ಇರುತ್ತವೆ.
ಬೌಲಿಂಗ್ ಕಡ್ಡಾಯ: ವಿಕೆಟ್ ಕೀಪರ್ ಹೊರತುಪಡಿಸಿ, ಫೀಲ್ಡಿಂಗ್ ಮಾಡುವ ತಂಡದ ಉಳಿದ ಐದೂ ಆಟಗಾರರು ತಲಾ 1 ಓವರ್ ಬೌಲಿಂಗ್ ಮಾಡುವುದು ಕಡ್ಡಾಯವಾಗಿದೆ. ಹಾಗೆಯೇ ಒಬ್ಬನಿಗೆ ಮಾತ್ರ 2 ಓವರ್ಗಳನ್ನು ಎಸೆಯಲು ಅವಕಾಶ ನೀಡಲಾಗಿದೆ.
ಡಬಲ್ ರನ್: ಪಂದ್ಯದಲ್ಲಿ ರನ್ ವೇಗ ಹೆಚ್ಚಿಸಲು, ಪ್ರತಿ ವೈಡ್ ಅಥವಾ ನೋ-ಬಾಲ್‌ಗೆ ಎದುರಾಳಿ ತಂಡಕ್ಕೆ 2 ರನ್‌ಗಳನ್ನು ನೀಡಲಾಗುತ್ತದೆ ಹಾಗೂ ಹೆಚ್ಚುವರಿ ಎಸೆತವನ್ನು ಹಾಕಬೇಕಾಗುತ್ತದೆ.
ಕಡ್ಡಾಯ ನಿವೃತ್ತಿ: ಒಬ್ಬ ಬ್ಯಾಟ್ಸ್‌ಮನ್ ವೈಯಕ್ತಿಕವಾಗಿ 31 ರನ್ ಗಳಿಸಿದ ತಕ್ಷಣ ಅಜೇಯರಾಗಿಯೇ ಮೈದಾನದಿಂದ ಹೊರನಡೆಯಬೇಕು. ತಂಡದ ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಔಟ್ ಆದ ನಂತರವೇ ಈ ನಿವೃತ್ತ ಬ್ಯಾಟ್ಸ್‌ಮನ್ ಮತ್ತೆ ಬ್ಯಾಟಿಂಗ್ ಮಾಡಲು ಮರಳಿ ಬರಬಹುದು.
‘ಸಿಂಗಲ್’ ಬ್ಯಾಟಿಂಗ್: ತಂಡದ 5 ವಿಕೆಟ್‌ಗಳು ಉರುಳಿದರೂ ಇನಿಂಗ್ಸ್ ಮುಗಿಯುವುದಿಲ್ಲ! 6ನೇ ಆಟಗಾರ ಒಬ್ಬನೇ ಬ್ಯಾಟಿಂಗ್ ಮುಂದುವರಿಸಬಹುದು. ಆ ಸಮಯದಲ್ಲಿ ಕೊನೆಯದಾಗಿ ಔಟಾದ 5ನೇ ಬ್ಯಾಟ್ಸ್‌ಮನ್ ಕೇವಲ ರನ್ನರ್ ಆಗಿ ಕ್ರೀಸ್‌ನಲ್ಲಿ ನಿಲ್ಲಬೇಕಾಗುತ್ತದೆ.
ವೇಗದ ಆಟ: ಇಡೀ ಪಂದ್ಯವು ಕೇವಲ 45 ರಿಂದ 60 ನಿಮಿಷಗಳಲ್ಲಿ ಮುಗಿದುಹೋಗುವುದರಿಂದ ಬ್ಯಾಟರ್‌ಗಳು ಮೊದಲ ಎಸೆತದಿಂದಲೇ ಸಿಕ್ಸರ್-ಬೌಂಡರಿಗಳ ಸುರಿಮಳೆಗೈಯಬೇಕಾಗುತ್ತದೆ.
ಫ್ರಾಂಚೈಸಿ ಮಾದರಿ: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ದೇಶಗಳು ಭಾಗವಹಿಸಿದರೆ, ಪಿಎಸ್ಎಲ್ ಸಿಕ್ಸಸ್‌ನಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ನ ಫ್ರಾಂಚೈಸಿ ತಂಡಗಳೇ ಭಾಗವಹಿಸಲಿವೆ.
ಇದನ್ನೂ ಓದಿ: ಮೂವರ ನಡುವೆ ಪೈಪೋಟಿ: ಯಾರಿಗೆ ಸಿಗಲಿದೆ ಚಾನ್ಸ್?
ಒಟ್ಟಾರೆಯಾಗಿ ಹೇಳುವುದಾದರೆ, ‘ಪಿಎಸ್ಎಲ್ ಸಿಕ್ಸಸ್’ ಕೇವಲ ಕ್ರಿಕೆಟ್‌ನ ಮತ್ತೊಂದು ಆವೃತ್ತಿಯಲ್ಲ, ಬದಲಿಗೆ ಪಾಕಿಸ್ತಾನ್ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿ ಸೃಷ್ಟಿಸಬಲ್ಲ ಕಲ್ಪನೆ. ಟಿ20 ಪಂದ್ಯಗಳಿಗಿಂತಲೂ ವೇಗವಾಗಿ, ಬೌಂಡರಿ-ಸಿಕ್ಸರ್‌ಗಳ ಅಬ್ಬರದೊಂದಿಗೆ ಅಭಿಮಾನಿಗಳನ್ನು ರಂಜಿಸಲು ಈ ಶಾರ್ಟ್-ಫಾರ್ಮ್ಯಾಟ್ ಟೂರ್ನಿ ರೆಡಿಯಾಗುತ್ತಿದೆ. ಸಣ್ಣ ನಗರಗಳ ಜನರಿಗೂ ಮೈದಾನದಲ್ಲೇ ಕ್ರಿಕೆಟ್ ಹಬ್ಬವನ್ನು ತಲುಪಿಸುವ ಮತ್ತು ಫ್ರಾಂಚೈಸಿಗಳಿಗೆ ಹೊಸ ಆದಾಯ ತಂದುಕೊಡುವ ಪಿಸಿಬಿಯ ಈ ಮಾಸ್ಟರ್ ಪ್ಲ್ಯಾನ್ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 10:34 am, Sat, 24 October 26




