ಮಿಂಚಿದ ಮಿಚೆಲ್: ಟೀಮ್ ಇಂಡಿಯಾಗೆ ಮೂರಂಕಿ ಗುರಿ
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇದೀಗ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ಅತ್ತ ಸರಣಿಯ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲ್ಲಲೇಬೇಕು.

ವೆಲ್ಲಿಂಗ್ಟನ್ನ ಹೆನ್ರಿ ನಡೆಯುತ್ತಿರುವ ಭಾರತದ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 198 ರನ್ ಕಲೆಹಾಕಿದೆ. ಈ ಮೂಲಕ ಟೀಮ್ ಇಂಡಿಯಾಗೆ 199 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಟಿಮ್ ಸೈಫರ್ಡ್ ಕೇವಲ 2 ರನ್ಗಳಿಸಿ ಅರ್ಷದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಜೊತೆಗೂಡಿದ ಫಿನ್ ಅಲೆನ್ ಹಾಗೂ ಡ್ಯಾರಿಲ್ ಮಿಚೆಲ್ 2ನೇ ವಿಕೆಟ್ಗೆ 86 ರನ್ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ ದಾಳಿಗಿಳಿದಿ ನಿತೀಶ್ ಕುಮಾರ್ ರೆಡ್ಡಿ ಡೇಂಜರಸ್ ಫಿನ್ ಅಲೆನ್ (40 ರನ್, 25 ಎಸೆತ) ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದಾಗ್ಯೂ ಮೊದಲ 10 ಓವರ್ಗಳಲ್ಲೇ ನ್ಯೂಝಿಲೆಂಡ್ ತಂಡ 100 ರನ್ ಕಲೆಹಾಕಿತು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಡ್ಯಾರಿಲ್ ಮಿಚೆಲ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇತ್ತ ಮಿಚೆಲ್ ಜೊತೆ ಅಬ್ಬರಿಸಲಾರಂಭಿಸಿದ ಗ್ಲೆನ್ ಫಿಲಿಪ್ಸ್ (17) ವಿಕೆಟ್ ಪಡೆಯುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು.
ಇದಾಗ್ಯೂ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದ ಕಿವೀಸ್ ಪಡೆ 16 ಓವರ್ಗಳ ಮುಕ್ತಾಯದ ವೇಳೆಗೆ 156 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಅಂದರೆ ಡೆತ್ ಓವರ್ಗಳಿಗೂ ಮುನ್ನ ನ್ಯೂಝಿಲೆಂಡ್ ಬ್ಯಾಟರ್ಗಳು ಪ್ರತಿ ಓವರ್ಗೆ 9.75 ಸರಾಸರಿಯಲ್ಲಿ ರನ್ ಗಳಿಸಿದ್ದರು.
ಅಂತಿಮ ಓವರ್ಗಳ ವೇಳೆ ಅಬ್ಬರಿಸಿದ ಡ್ಯಾರಿಲ್ ಮಿಚೆಲ್ 52 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 89 ರನ್ ಬಾರಿಸಿದರೆ, ಉತ್ತಮ ಸಾಥ್ ನೀಡಿದ ಬೆವೊನ್ ಜೇಕಬ್ಸ್ 23 ಎಸೆತಗಳಲ್ಲಿ 39 ಸಿಡಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.
ಭಾರತ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್.
ಇದನ್ನೂ ಓದಿ: ಕೇವಲ 1 ವಿಕೆಟ್: ಇಂಡಿಯಾ ಎ ತಂಡದ ಗೆಲುವು ಕಸಿದ ‘ಬ್ಯಾಡ್ ಲೈಟ್’
ನ್ಯೂಝಿಲೆಂಡ್ (ಪ್ಲೇಯಿಂಗ್ XI): ಟಿಮ್ ಸೈಫರ್ಟ್(ವಿಕೆಟ್ ಕೀಪರ್), ಫಿನ್ ಅಲೆನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಬೆವೊನ್ ಜೇಕಬ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮೀಸನ್, ಆ್ಯಡಂ ಮಿಲ್ನ್, ಜೇಕಬ್ ಡಫಿ, ಮ್ಯಾಥ್ಯೂ ಫಿಶರ್.




