NZ vs AFG: ನೋಯ್ಡಾದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಕಿವೀಸ್ ತಂಡ ಪ್ರಕಟ
NZ vs AFG: ಸೆಪ್ಟೆಂಬರ್ ತಿಂಗಳಿನಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಆದರೆ ಈ ಪ್ರವಾಸದಲ್ಲಿ ಕಿವೀಸ್ ಪಡೆ ಟೀಂ ಇಂಡಿಯಾ ವಿರುದ್ಧ ಯಾವುದೇ ಸರಣಿಯನ್ನು ಆಡುತ್ತಿಲ್ಲ. ಬದಲಿಗೆ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಆ ಬಳಿಕ ನ್ಯೂಜಿಲೆಂಡ್ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತ ಪ್ರವಾಸಕ್ಕೆ ಬರಲಿದೆ. ಆದರೆ ಈ ಪ್ರವಾಸದಲ್ಲಿ ಕಿವೀಸ್ ಪಡೆ ಟೀಂ ಇಂಡಿಯಾ ವಿರುದ್ಧ ಯಾವುದೇ ಸರಣಿಯನ್ನು ಆಡುತ್ತಿಲ್ಲ. ಬದಲಿಗೆ ಅಫ್ಘಾನಿಸ್ತಾನ ವಿರುದ್ಧ ನೋಯ್ಡಾದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಆ ಬಳಿಕ ನ್ಯೂಜಿಲೆಂಡ್, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ 3 ಟೆಸ್ಟ್ ಪಂದ್ಯಗಳಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ. ಟಿಮ್ ಸೌಥಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದು, ಟಾಮ್ ಲೇಥಮ್ ಉಪನಾಯಕನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅಲ್ಲದೆ, ಸ್ಟಾರ್ ಆಟಗಾರ ಮೈಕಲ್ ಬ್ರೇಸ್ವೆಲ್ 18 ತಿಂಗಳ ನಂತರ ತಂಡಕ್ಕೆ ಮರಳಿದ್ದಾರೆ.
ಯುವ ಬೌಲರ್‌ಗಳಿಗೆ ಆಧ್ಯತೆ
ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ನ್ಯೂಜಿಲೆಂಡ್ ತಂಡದಲ್ಲಿ ವಿಲಿಯಂ ಓ’ರೂರ್ಕ್ ಮತ್ತು ಬೆನ್ ಸಿಯರ್ಸ್ ಇಬ್ಬರನ್ನೂ ತಂಡಕ್ಕೆ ಆಯ್ಕೆ ಮಾಡಲಾಗಿದೆ. ವಾಸ್ತವವಾಗಿ ವಿಲಿಯಂ ಓ ರೂರ್ಕ್ ದಕ್ಷಿಣ ಆಫ್ರಿಕಾ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 9 ವಿಕೆಟ್ ಪಡೆದು ಮಿಂಚಿದರು. ಆ ನಂತರ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಈ ಪಂದ್ಯದ ವೇಳೆ ಗಾಯಗೊಂಡ ವಿಲಿಯಂ ಸರಣಿಯಿಂದ ಹಿಂದೆ ಸರಿಯಬೇಕಾಯಿತು. ಅವರ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಬೆನ್ ಸಿಯರ್ಸ್ ಕಾಂಗರೂಗಳ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಈ ಇಬ್ಬರಿಗೂ ಮುಂದಿನ ಟೆಸ್ಟ್ ಸರಣಿಗೆ ಅವಕಾಶ ನೀಡಲಾಗಿದೆ.
ಐವರು ಸ್ಪಿನ್ನರ್‌ಗಳಿಗೆ ಅವಕಾಶ
ನ್ಯೂಜಿಲೆಂಡ್ 15 ಸದಸ್ಯರ ತಂಡದಲ್ಲಿ 5 ಸ್ಪಿನ್ನರ್‌ಗಳು ಆಯ್ಕೆಯಾಗಿದ್ದಾರೆ. ಭಾರತದ ಪಿಚ್ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿವೆ. ಹೀಗಾಗಿ ನ್ಯೂಜಿಲೆಂಡ್ ತಂಡ ಐವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದ್ದು, ಈ ಐವರು ಸ್ಪಿನ್ನರ್ಗಳಲ್ಲಿ ಮಿಚೆಲ್ ಸ್ಯಾಂಟ್ನರ್, ಎಜಾಜ್ ಪಟೇಲ್, ರಚಿನ್ ರವೀಂದ್ರ, ಮೈಕೆಲ್ ಬ್ರೇಸ್‌ವೆಲ್ ಮತ್ತು ಗ್ಲೆನ್ ಫಿಲಿಪ್ಸ್ ಸೇರಿದ್ದಾರೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿ ಆಟಗಾರರಾದ ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೆ, ಟಾಮ್ ಲೇಥಮ್ ಇದ್ದರೆ, ಟಾಮ್ ಬ್ಲಂಡೆಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ: ಟಿಮ್ ಸೌಥಿ (ನಾಯಕ), ಟಾಮ್ ಲೇಥಮ್ (ಉಪನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಎಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್, ಕೇನ್ ವಿಲಿಯಮ್ಸನ್ ಮತ್ತು ವಿಲ್ ಯಂಗ್.
- ಅಫ್ಘಾನಿಸ್ತಾನ vs ನ್ಯೂಜಿಲೆಂಡ್ ಏಕೈಕ ಟೆಸ್ಟ್, ಸೆಪ್ಟೆಂಬರ್ 9-13, ನೋಯ್ಡಾ
ಶ್ರೀಲಂಕಾ vs ನ್ಯೂಜಿಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ
- ಮೊದಲ ಪಂದ್ಯ, ಸೆಪ್ಟೆಂಬರ್ 18-22, ಗಾಲೆ
- ಎರಡನೇ ಪಂದ್ಯ, ಸೆಪ್ಟೆಂಬರ್ 26-30, ಗಾಲೆ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 pm, Mon, 12 August 24